Advertisement

ನಿಜಾಮುದ್ದೀನ್‌ ಅವಘಡಕ್ಕೆ ವಿದೇಶಿ ಮೊಹರು!; ತಾಲಿಬಾನ್‌ ಮಾದರಿ ಕೃತ್ಯ : ಸಚಿವ ನಖ್ವೀ ಆರೋಪ

09:33 AM Apr 02, 2020 | Hari Prasad |

ನವದೆಹಲಿ: ಇಸ್ಲಾಂ ಧರ್ಮ ಪ್ರಚಾರಕ ಸಂಘಟನೆಯಾದ ತಬ್ಲಿಘ್-ಎ-ಜಮಾತ್‌ನ ನಾನಾ ಕಾರ್ಯಕ್ರಮಗಳಲ್ಲಿ, ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳಲು ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 2,100 ವಿದೇಶೀಯರು ಭಾರತಕ್ಕೆ ಬಂದು ಹೋಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ದೆಹಲಿಯ ನಿಜಾಮುದ್ದೀನ್‌ ಪ್ರಾಂತ್ಯದಲ್ಲಿ ಮಾ. 13-15ರಂದು ಜರುಗಿದ ತಬ್ಲಿಘ್-ಎ-ಜಮಾತ್‌ ಸಂಘಟನೆಯ ಅಂತಾರಾಷ್ಟ್ರೀಯ ಸಮಾವೇಶದಿಂದ ಕೋವಿಡ್ 19 ವೈರಸ್ ಈಗ ಮತ್ತಷ್ಟು ದೇಶವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ ನೀಡಿರುವ ಈ ಮಾಹಿತಿ ಮಹತ್ವ ಪಡೆದುಕೊಂಡಿದೆ.

Advertisement

824 ವಿದೇಶಿಗರು ಭೇಟಿ: ಇದೇ ವರ್ಷ ಮಾ. 21ರ ಹೊತ್ತಿಗೆ, ದೇಶದೆಲ್ಲೆಡೆ ಇರುವ ತಬ್ಲಿಘ್-ಎ-ಜಮಾತ್‌ ಸಂಘಟನೆಯ ಶಾಖಾ ಕಚೇರಿಗಳಿಗೆ ಆ ಸಂಘಟನೆಯ ಕಟ್ಟಾ ಬೆಂಬಲಿಗರಾದ ಸುಮಾರು 824 ವಿದೇಶಿಗರು ಭೇಟಿ ನೀಡಿದ್ದರು. ಇವರಲ್ಲಿ 216 ವಿದೇಶಿ ಬೆಂಬಲಿಗರು ನವದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಸಂಘಟನೆಯ ಕೇಂದ್ರ ಕಚೇರಿಯಲ್ಲೇ ಉಳಿದುಕೊಂಡಿದ್ದರು.

ಉಳಿದ ವಿದೇಶಿಗರು, ಮಾ. 24ರಂದು ಪ್ರಧಾನಿ ಮೋದಿಯವರಿಂದ ಹೊರಬಿದ್ದ 21 ದಿನಗಳ ಲಾಕ್‌ಡೌನ್‌ ಘೋಷಣೆಗೂ ಮುನ್ನವೇ ದೇಶ ತೊರೆದಿರಬಹುದು ಎಂದು ಗೃಹ ಇಲಾಖೆ ಹೇಳಿದೆ.

ಕಾರ್ಯಕರ್ತರು ಆಸ್ಪತ್ರೆಗೆ: ನಿಜಾಮುದ್ದೀನ್‌ ಪ್ರದೇಶ ಭಾರತದ ಕೋವಿಡ್ 19 ಹಾಟ್‌ಸ್ಪಾಟ್‌ ಎಂದು ಪರಿಗಣಿಸಲ್ಪಟ್ಟ ಮೇಲೆ ನಡೆಸಿದ ಸಮುದಾಯ ಪರೀಕ್ಷೆಗಳಿಂದ ತಬ್ಲಿಘ್ ನ 1,300 ಕಾರ್ಯಕರ್ತರಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದೆ. ಅವರೆಲ್ಲರನ್ನೂ ನರೇಲಾ, ಸುಲ್ತಾನ್‌ಪುರಿ ಹಾಗೂ ಬಕ್ಕಾರ್‌ವಾಲಾ ಆಸ್ಪತ್ರೆಗಳಲ್ಲಿರುವ ಪ್ರತ್ಯೇಕ ನಿಗಾ ಘಟಕಗಳಿಗೆ ಹಾಗೂ ದೆಹಲಿಯ ಎಲ್‌ಎನ್‌ಜೆಪಿ, ಆರ್‌ಜಿಎಸ್‌ಎಸ್‌, ಜಿಟಿಬಿ, ಡಿಡಿಯು ಆಸ್ಪತ್ರೆಗಳಿಗೆ ಮತ್ತು ಹರ್ಯಾಣದ ಝಜ್ಜರ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಹೊಸದಾಗಿ, ಅದೇ ಸಂಘಟನೆಯ 303 ಕಾರ್ಯಕರ್ತರಲ್ಲಿ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದು ಅವರನ್ನು ಕೂಡ ನವದೆಹಲಿಯ ನಾನಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ ಎಂದು ಗೃಹ ಇಲಾಖೆ ಹೇಳಿದೆ.

ತನಿಖೆಗೆ ಆದೇಶ
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್‌ ಸಮಾವೇಶಕ್ಕೆ ಗುಜರಾತ್‌ನಿಂದ ಕೆಲ ಮುಸ್ಲಿಮರು ಹೋಗಿರುವ ಖಚಿತ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ಗುಜರಾತ್‌ ಪೊಲೀಸರು ಬಲೆ ಬೀಸಿದ್ದಾರೆ. ಸಮಾವೇಶಕ್ಕೆ ಭಾವನಗರದ ಕೆಲವು ನಿವಾಸಿಗಳು ಹೋಗಿರುವುದು ಪ್ರಾಥಮಿಕ ತನಿಖೆಗಳಿಂದ ತಿಳಿದುಬಂದಿದೆ. ಅವರ ನಿಖರ ವಿಳಾಸ ಪತ್ತೆ ಹಚ್ಚಿ ಅವರನ್ನು ತಕ್ಷಣವೇ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಗುಜರಾತ್‌ನ ಡಿಜಿಪಿ ಶಿವಾನಂದ ಝಾ ತಿಳಿಸಿದ್ದಾರೆ.


ತೆಲಂಗಾಣದಿಂದ 1 ಸಾವಿರ ಮಂದಿ
ನವದೆಹಲಿಯಲ್ಲಿ ನಡೆದ ನಿಜಾಮುದ್ದೀನ್‌ ಸಮಾವೇಶಕ್ಕೆ ತೆಲಂಗಾಣದಿಂದ ಕನಿಷ್ಠ 1,000 ಜನರು ಹೋಗಿದ್ದಾರೆ ಎಂದು ತೆಲಂಗಾಣ ಸರಕಾರ ತಿಳಿಸಿದೆ. ಅವರನ್ನು ಶೀಘ್ರವೇ ಪತ್ತೆ ಮಾಡಿ, ಅವರನ್ನು ಹಾಗೂ ಅವರ ಆಪ್ತರನ್ನು ಪರೀಕ್ಷೆಗೊಳಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಸಮಾವೇಶಕ್ಕೆ ಹೋಗಿ ಬಂದು ಮೃತರಾಗಿರುವ ವ್ಯಕ್ತಿಗಳ ಕುಟುಂಬಸ್ಥರನ್ನು ಈಗಾಗಲೇ ಪ್ರತ್ಯೇಕ ನಿಗಾದಲ್ಲಿ ಇರಿಸಲಾಗಿದೆ ಎಂದು ತೆಲಂಗಾಣ ಅಬಕಾರಿಯೊಬ್ಬರು ತಿಳಿಸಿದ್ದಾರೆ.

Advertisement

ತಮಿಳುನಾಡಿನಲ್ಲಿ 32 ಲಿಂಕ್‌
ತಮಿಳುನಾಡಿನಲ್ಲಿ ಮಂಗಳವಾರ ಏಳು ಹೊಸ ಕೋವಿಡ್ 19 ವೈರಸ್ ಸೋಂಕಿತರು ಪತ್ತೆಯಾಗಿದ್ದು , ಈ ಮೂಲಕ ಅಲ್ಲಿ ಸೋಂಕಿತರ ಸಂಖ್ಯೆ 74ಕ್ಕೇರಿದೆ. ಇವರಲ್ಲಿ ಕನಿಷ್ಟ 32 ಜನರು ದೆಹಲಿಯ ನಿಜಾಮುದ್ದೀನ್‌ ಸಮಾವೇಶದ ಮೂಲಕ ಹರಡಿರುವ ಸೋಂಕಿತರ ಜೊತೆಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಂಟು ಹೊಂದಿರುವವರಾದ್ದಾರೆ ಎಂದು ತಮಿಳುನಾಡು ಸರಕಾರ ತಿಳಿಸಿದೆ. ದೆಹಲಿ ಸಮಾವೇಶಕ್ಕೆ ತಮಿಳುನಾಡಿನ 1,500 ಜನರು ಹೋಗಿದ್ದಾಗಿ ಅಲ್ಲಿನ ಸಿಎಂ ಪಳನಿಸ್ವಾಮಿ ಹೇಳಿದ್ದಾರೆ.

ತಬ್ಲಿಘ್-ಎ-ಜಮಾತ್‌ ಸಂಘಟನೆಯ ಸದಸ್ಯರು ಮಾಡಿರುವುದು ತಾಲಿಬಾನಿಗಳ ಮಾದರಿಯ ದುಷ್ಕೃತ್ಯ . ಕೋವಿಡ್ 19 ವೈರಸ್ ವಿರುದ್ಧ ಇಡೀ ದೇಶವೇ ಸಮರ ಸಾರಿದ್ದಾಗ ಇವರು ಕೋವಿಡ್ 19 ವೈರಸ್ ಹರಡಿರುವುದು ಕ್ರಿಮಿನಲ್‌ ಅಪರಾಧ.
– ಮುಕ್ತಾರ್‌ ಅಬ್ಟಾಸ್‌ ನಖ್ವೀ, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next