ಹುಬ್ಬಳ್ಳಿ: ಜಗಜ್ಯೋತಿ ಬಸವೇಶ್ವರರ ಜಯಂತಿ ಹಿನ್ನೆಲೆಯಲ್ಲಿ ಕೋವಿಡ್ 19 ವಿರುದ್ಧ ಹೋರಾಟ ಮಾಡುತ್ತಿರುವ ಕಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ದಿ| ವಿ.ಬಿ. ಡಂಗನವರ ಪ್ರತಿಷ್ಠಾನದಿಂದ ರವಿವಾರ ಇಲ್ಲಿನ ಕಿಮ್ಸ್ ಸಭಾಂಗಣದಲ್ಲಿ ಗೌರವಿಸಲಾಯಿತು.
ಈ ವೇಳೆ ಪ್ರತಿಷ್ಠಾನದ ಅಧ್ಯಕ್ಷ ಸದಾನಂದ ಡಂಗನವರ ಮಾತನಾಡಿ, ಕೊರನಾ ವೈರಸ್ ಎಂದರೆ ಭಯ ಬೀಳುತ್ತಿರುವ ಸಂದರ್ಭದಲ್ಲಿ ಇಲ್ಲಿನ ವೈದ್ಯರು, ಸಿಬ್ಬಂದಿ ಇಬ್ಬರು ಸೋಂಕಿತರಿಗೆ ಚಿಕಿತ್ಸೆ ನೀಡಿ ಗುಣಮುಖರಾನ್ನಾಗಿ ಮಾಡಿದ್ದಾರೆ. ಉಳಿದಂತೆ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಕೊಂಚ ಯಾಮಾರಿದ್ರು ಸೋಂಕು ತಗಲು ಸಾಧ್ಯಗಳಿರುವ ಸಂದರ್ಭದಲ್ಲಿ ಇಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯ ಮುಂದೆ ಇನ್ನೊಂದು ಕಾರ್ಯವಿಲ್ಲ ಎಂದರು.
ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ನಮ್ಮ ಕರ್ತವ್ಯ ಮಾಡುತ್ತಿದ್ದೇವೆ. ಸೋಂಕಿನ ಬಗ್ಗೆ ಭಯವಿಲ್ಲ. ಆದರೆ ಪ್ರತಿ ಕ್ಷಣವೂ ಜಾಗೃತಿಯಿಂದ ಕೆಲಸ ನಿರ್ವಹಿಸುತ್ತಿದ್ದೇವೆ. ನಮ್ಮ ಕರ್ತವ್ಯ ಗುರುತಿಸಿ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದು ನೋಡಿದರೆ ಸೇವೆ ಸಾರ್ಥಕವಾದಂತಾಗಿದೆ ಎಂದರು.
ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ| ಅರುಣಕುಮಾರ, ಉಪ ವೈದ್ಯಕೀಯ ಅಧೀಕ್ಷಕ ಡಾ| ರಾಜಶೇಖರ ದ್ಯಾಬೇರಿ, ಡಾ| ಎಸ್.ವೈ. ಮುಲ್ಕಿಪಾಟೀಲ, ಆರ್‌ಎಂಒ ಡಾ| ಸಿದ್ದೇಶ್ವರ ಕಟಕೋಳ, ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪೂರ, ಡಾ| ಈಶ್ವರ ಹಸಬಿ, ಡಾ| ಸಚಿನ್ ಹೊಸಕಟ್ಟಿ, ಡಾ| ಚೇತನ, ಡಾ| ಕಿರಣ, ಅಣ್ಣಮ್ಮ ಪೌಲ್, ಬಿ. ಕಮಲಾ, ಹೇಮೇಂದ್ರ, ಪರಶುರಾಮ ಮಲ್ಯಾಳ, ನಾಗರಾಜ ಜಗತಾಪ, ಮೈನುದ್ದೀನ್, ಪ್ರವೀಣ ವಡ್ಡರ ಅವರನ್ನು ಸನ್ಮಾನಿಸಲಾಯಿತು.
ಪ್ರತಿಷ್ಠಾನದ ಪದಾಧಿಕಾರಿಗಳಾದ ರಾಜಣ್ಣ ಪವಾರ, ಸುಪ್ರೀತ ಶೆಟ್ಟಿ, ಮಲ್ಲಿಕ್ ಸಿಖಂದರ್ ಇದ್ದರು.