Advertisement

ಕೊರೊನಾ: ಜಿಲ್ಲೆಯಲ್ಲಿ ಹೈ ಅಲರ್ಟ್‌

12:47 PM Mar 14, 2020 | Suhan S |

ಬಾಗಲಕೋಟೆ: ವಿದೇಶದಿಂದ ಜಿಲ್ಲೆಗೆ ಆಗಮಿಸಲಿರುವ ಪ್ರತಿಯೊಬ್ಬ ವ್ಯಕ್ತಿಯನ್ನು ಕಡ್ಡಾಯವಾಗಿ 14 ದಿನಗಳ ವರೆಗೆ ಪ್ರತ್ಯೇಕ ಕೊಠಡಿಯಲ್ಲಿ ಇರಿಸಿ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ|ಕೆ.ರಾಜೇಂದ್ರ, ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ತುರ್ತು ಸಭೆ ನಡೆಸಿದ ಅವರು, ಸಭೆಯಲ್ಲಿ ಕಲಬುರಗಿಯಲ್ಲಿ 76 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮೃತಪಟ್ಟಿರುವುದನ್ನು ಆರೋಗ್ಯ ಇಲಾಖೆ ದೃಢಪಡಿಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಕೊರೊನಾ ವೈರಸ್‌ ಕುರಿತು ಜಾಗೃತಿ ವಹಿಸುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಕಂಡುಬಂದಿಲ್ಲ. ಆದರೂ ಸಹ ಜಿಲ್ಲೆಯ ಆಯಾ ತಾಲೂಕು ತಹಶೀಲ್ದಾರರು, ವಿದೇಶಗಳಿಗೆ ಹೋಗಿ ಮರಳಿ ಬರುವವರ ಮಾಹಿತಿಯನ್ನು ಪ್ರತಿದಿನ ಪತ್ತೆಮಾಡಿ ಮಾಹಿತಿ ಪಡೆದು ತಾಲೂಕು ವೈದ್ಯಾಧಿಕಾರಿಗಳಿಗೆ ನೀಡಬೇಕು. ಅಲ್ಲದೇ ಗ್ರಾಮವಾರು ಸಹ ಗ್ರಾಮ ಲೆಕ್ಕಾಧಿಕಾರಿಗಳಿಂದಲೂ ಈ ಕುರಿತು ಮಾಹಿತಿ ಕಲೆಹಾಕಬೇಕು ಎಂದರು.

ನಿಗಾ ಕೊಠಡಿಯಲ್ಲಿರಿಸಿದ ವ್ಯಕ್ತಿಯಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ತಾಲೂಕಾ ಹಾಗೂ ಜಿಲ್ಲಾ ಆಸ್ಪತ್ರೆಗೆ ಮಾಹಿತಿ ನೀಡಿ ತಪಾಸಣೆಗೆ ಒಳಪಡಿಸಬೇಕು. ಲಕ್ಷಣಗಳು ಕಂಡ ಬಂದ ವ್ಯಕ್ತಿಯ ರಕ್ತ ಮತ್ತು ಗಂಟಲು ಮಾದರಿಯನ್ನು ಪರಿಕ್ಷೆಗೆ ಒಳಪಡಿಸಿ ಸೋಂಕು ತಗುಲಿರುವ ಬಗ್ಗೆ ದೃಢಪಡಿಸಿಕೊಳ್ಳಬೇಕು. ವಿದೇಶದಿಂದ ವ್ಯಕ್ತಿ ಬಂದಿರುವ ಮಾಹಿತಿ ಬಂದ ತಕ್ಷಣ ನಿಗಾವಹಿಸುವುದು ಮಹತ್ವದ್ದಾಗಿದ್ದು, ತಕ್ಷಣ ತಪಾಸಣೆಗೆ ಒಳಪಡಿಸುವ ಕಾರ್ಯವಾಗಬೇಕು. ಸಾರ್ವಜನಿಕರು ಸಹ ವಿದೇಶ ಪ್ರವಾಸ ಮುಗಿಸಿ ಜಿಲ್ಲೆಗೆ ಬಂದ ವ್ಯಕ್ತಿಗಳ ಮಾಹಿತಿಯನ್ನು ತಾಲೂಕಾ ಹಾಗೂ ಜಿಲ್ಲಾಸ್ಪತ್ರೆಗೆ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಐತಿಹಾಸಿಕ ತಾಣಗಳಾದ ಬಾದಾಮಿ, ಪಟ್ಟದಕಲ್ಲು ಹಾಗೂ ಐಹೊಳೆಗೆ ವಿದೇಶದಿಂದ ಹೆಚ್ಚಾಗಿ ಪ್ರವಾಸಿಗರು ಆಗಮಿಸುತ್ತಿದ್ದು, ಪ್ರವಾಸಿಗರ ಬಗ್ಗೆ ನಿಗಾವಹಿಸಿ ಮಾಹಿತಿ ಪಡೆದುಕೊಳ್ಳಬೇಕು. ಪ್ರವಾಸಿಗರು ತೆರಳುವ ಹೋಟಲ್‌, ಹೋಮ್‌ಸ್ಟ್ರೆ ಗಳಲ್ಲಿ ಬರುವ ವಿದೇಶಿ ಪ್ರವಾಸಿಗಳ ಬಗ್ಗೆ ಮಾಹಿತಿ ಕಲೆಹಾಕಿ ತಪಾಸಣೆಗೆ ಒಳಪಡಿಸಬೇಕು. ಪ್ರವಾಸಿ ಸ್ಥಳಗಳ ವ್ಯಾಪ್ತಿಯಲ್ಲಿ ನಿಗಾವಹಿಸಲು ಸಿಬ್ಬಂದಿಗಳನ್ನು ನಿಯೋಜಿಸುವಂತೆ ಆಯಾ ತಹಶೀಲ್ದಾರ್‌ರಿಗೆ ಸೂಚಿಸಿದರು.

Advertisement

ಜಿಲ್ಲೆಯ ಜನತೆ ಕೊರೊನಾ ವೈರಸ್‌ ಬಗ್ಗೆ ಆತಂತ ಪಡುವ ಅಗತ್ಯವಿಲ್ಲ. ವೈರಸ್‌ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಕೊರೊನಾ ವೈರಸ್‌ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎ.ಎನ್‌. ದೇಸಾಯಿ, ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ ವಿವರಿಸಿದರು.

ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪ ವಿಭಾಗಾಧಿಕಾರಿ ಎಂ.ಗಂಗಪ್ಪ, ಜಿಲ್ಲಾಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ, ತಹಶೀಲ್ದಾರ್‌ ಗುರುಸಿದ್ದಯ್ಯ ಹಿರೇಮಠ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಕಳೆದ 14 ದಿನಗಳಿಂದ ವಿದೇಶ ಪ್ರವಾಸದಿಂದ ಬಾಗಲಕೋಟೆ ಜಿಲ್ಲೆಗೆ ಯಾರಾದರೂ ಬಂದು ತುಲುಪಿದಲ್ಲಿ ಕಡ್ಡಾಯವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಸ್ವಯಂ ಪ್ರೇರಿತರಾಗಿ ಮಾಹಿತಿ ನೀಡತಕ್ಕದ್ದು. ಅಲ್ಲದೇ 14 ದಿನಗಳವರೆಗೆ ತಮ್ಮನ್ನು ತಾವೇ ಮನೆಯಲ್ಲಿಯೇ ಪ್ರತ್ಯೇಕಿಸಿಕೊಂಡು ಯಾವುದೇ ಜ್ವರ, ಕೆಮ್ಮು ಹಾಗೂ ಶೀತದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರ ಡಾ| ಎ.ಎನ್‌. ದೇಸಾಯಿ (9449843041), ಜಿಲ್ಲಾ ಸಮೀಕ್ಷಣಾಧಿಕಾರಿ ಡಾ|ವಿಜಯ ಕಂಠಿ (9880702314)  ಹಾಗೂ ಜಿಲ್ಲಾ ಎಪಿಡಾಮಾಲಾಜಿಸ್ಟ್‌ ಡಾ|ಸೀಮಾಹುದ್ದಾರ (9448635686) ಅವರಿಗೆ ಕರೆ ಮಾಡಿ ಮಾಹಿತಿ ನೀಡಬೇಕು.-ಕ್ಯಾಪ್ಟನ್‌ ಡಾ|ಕೆ. ರಾಜೇಂದ್ರ, ಡಿಸಿ

Advertisement

Udayavani is now on Telegram. Click here to join our channel and stay updated with the latest news.

Next