Advertisement

ಕೋವಿಡ್ 19 ಸಹಾಯ: ಚಾಲಕರಿಗೆ ಮತ್ತೊಂದು ಅವಕಾಶ

03:41 AM Sep 25, 2020 | Hari Prasad |

ಬೆಂಗಳೂರು: ಲಾಕ್‌ಡೌನ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ರಿಕ್ಷಾ ಹಾಗೂ ಟ್ಯಾಕ್ಸಿ ಚಾಲಕರಿಗೆ ಘೋಷಿಸಿರುವ 5,000 ರೂ. ನೆರವು ಪಡೆಯಲು ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವ ಭರವಸೆಯನ್ನು ಸರಕಾರ ನೀಡಿದೆ.

Advertisement

ಸರಕಾರವು 4,008 ಕೋ. ರೂ. ಪೂರಕ ಅಂದಾಜುಗಳ 2020ನೇ ಸಾಲಿನ ಕರ್ನಾಟಕ ಧನ ವಿನಿಯೋಗ ಮಸೂದೆಗೆ ಸದನದ ಒಪ್ಪಿಗೆ ಪಡೆಯುವ ಸಂದರ್ಭದಲ್ಲಿ ಈ ಭರವಸೆ ನೀಡಿದೆ.

ಗುರುವಾರ ಭೋಜನ ಬಳಿಕದ ಕಲಾಪದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಮಸೂದೆಯನ್ನು ಪರ್ಯಾಲೋಚಿಸಿದ ಸಚಿವ ಜೆ. ಸಿ. ಮಾಧುಸ್ವಾಮಿಯವರು, ಪೂರಕ ಅಂದಾಜು ಬಗ್ಗೆ ವಿವರ ನೀಡಿದರು.

ಆಗ ಸಿದ್ದರಾಮಯ್ಯ ಅವರು, ರಾಜ್ಯದ 7.50 ಲಕ್ಷ  ಚಾಲಕರಿಗೆ ತಲಾ 5,000 ರೂ. ಪರಿಹಾರವನ್ನು ಸರಕಾರ ಘೋಷಿಸಿತ್ತು. ಆದರೆ ಈವರೆಗೆ ಎರಡೂವರೆ ಲಕ್ಷ ಚಾಲಕರಿಗಷ್ಟೇ ಪರಿಹಾರ ಸಿಕ್ಕಿದೆ. ಸಂಕಷ್ಟದಿಂದ ಸಾಕಷ್ಟು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದೇ ರೀತಿ ಸವಿತಾ ಸಮಾಜ, ಮಡಿವಾಳರಿಗೂ ಪೂರ್ಣ ಪ್ರಮಾಣದಲ್ಲಿ ಪರಿಹಾರ ದೊರಕಿಲ್ಲ ಎಂದರು.

ಬ್ಯಾಡ್ಜ್ ಸಮಸ್ಯೆ: ಭಟ್‌
ಬಿಜೆಪಿಯ ಶಾಸಕ ರಘುಪತಿ ಭಟ್‌ ಅವರು ಪ್ರತಿಕ್ರಿಯಿಸಿ, ಬಹಳಷ್ಟು ಚಾಲಕರಲ್ಲಿ ಬ್ಯಾಡ್ಜ್ ಇಲ್ಲ. ಆದರೆ ಬ್ಯಾಡ್ಜ್ ಕಡ್ಡಾಯ ಮಾಡಲಾಗಿದೆ. ಇನ್ನೊಂದೆಡೆ ಮಾಲಕರಾಗಿರುವ ಚಾಲಕರು ಅರ್ಜಿ ಸಲ್ಲಿಸಿದರೆ ಆನ್‌ಲೈನ್‌ನಲ್ಲಿ ಸ್ವೀಕರಿಸುತ್ತಿಲ್ಲ. ಈ ಸಮಸ್ಯೆ ನಿವಾರಿಸಿದರೆ ಚಾಲಕರು ನೆರವು ಪಡೆಯಬಹುದು ಎಂದು ಸಲಹೆ ನೀಡಿದರು.

Advertisement

ಬಳಿಕ ಜೆ.ಸಿ. ಮಾಧುಸ್ವಾಮಿ ಅವರು, ಮತ್ತೂಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಿ ಅರ್ಹ ಚಾಲಕರಿಗೆ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮಸೂದೆಗೆ ಅನುಮೋದನೆ ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next