ತುಮಕೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಕಾರುಬಾರು ಜಿಲ್ಲೆಯಲ್ಲಿ ಆರಂಭಗೊಳ್ಳುತ್ತಿದೆ, ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಹಣ್ಣುಗಳ ರಾಜನ ವ್ಯಾಪಾರಕ್ಕೆ ಮಂಕು ಕವಿದಿದೆ. ತೆಂಗು, ಹಲಸಿನ ಹಣ್ಣುಗಳಂತೆ ರಾಜ್ಯದಲ್ಲಿ ಹೆಚ್ಚು ಮಾವು ಬೆಳೆಯುವ ಕಲ್ಪತರು ನಾಡಿನಲ್ಲಿ ಈ ಬಾರಿ ನಿರೀಕ್ಷಿತ ಫಸಲೂ ಇಲ್ಲ,
ಮಾವು ಬೆಳೆಗಾರ ರೈತನಿಗೆ ಸಂತಸ ವಾಗುವಂತಹ ಬೆಲೆಯೂ ಇಲ್ಲ, ಅಕಾಲಿಕ ಮಳೆ ಹಾಗೂ ಆಲಿಕಲ್ಲಿನಿಂದಾಗಿ ಹವಾಮಾನ ವೈಫರಿತ್ಯದಿಂದಾಗಿ ಇಳುವರಿ ಕಡಿಮೆಯಾಗಿದೆ. ಇದರ ಜೊತೆಗೆ ಮಾರುಕಟ್ಟೆಗೆ ಬಂದಿರುವ ಮಾವಿಗೆ ಕೊರೊನಾ ವೈರಸ್ ಭೀತಿ ಇರುವ ಕಾರಣ ಜನ ಮಾವು ಕೊಂಡು ಕೊಳ್ಳಲು ಮುಂದಾಗುತ್ತಿಲ್ಲ. ಬೇಸಿಗೆಯಲ್ಲಿ ಭಾರೀ ವ್ಯಾಪಾರವಾಗುತ್ತಿದ್ದ ಹಣ್ಣುಗಳಿಗೂ ಕೊರೊನಾ ಲಾಕ್‌ಡೌನ್ ನಿಂದ ಬೇಡಿಕೆ ಕಡಿಮೆಯಾಗಿದೆ.
ಈಗ ಮಾರುಕಟ್ಟೆಗೆ ಕಾಲಿಟ್ಟಿರುವ ಮಾವಿಗೆ ನಿರೀಕ್ಷಿತ ಬೇಡಿಕೆ ಇಲ್ಲ ದಾಗಿದೆ. ನಗರದ ಬಹುತೇಕ ಅಂಗಡಿಗಳಲ್ಲಿ ಮಾವಿನ ಹಣ್ಣುಗಳು ಇನ್ನೂ ಅಷ್ಟಾಗಿ ಕಂಡು ಬರದಿದ್ದರೂ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಾವಿನ ಮಾರಾಟದ ಭರಾಟೆ ಅಷ್ಟು ಜೋರಾಗಿ ನಡೆಯುತ್ತಿಲ್ಲ. ನಗರದ ಕೆಲವೇ ಅಂಗಡಿಗಳಲ್ಲಿ, ತಳ್ಳುವ ಗಾಡಿಗಳಲ್ಲಿ ಹಾಗೂ ತಲೆಯ ಮೇಲೆ ಬುಟ್ಟಿ ಹೊತ್ತು ಮಾರಾಟ ಮಾಡುವುದು ಮಾತ್ರ ಕಂಡುಬರುತ್ತಿದೆ.
ಅದರಲ್ಲೂ ಬಾಯಿಗೆ ರುಚಿ ನೀಡುವ ರಸಪುರಿ, ಮಲಗೋಬ, ಬಾದಾಮಿ, ತೋತಾಪುರಿ ಸೇರಿ ಹಲ ವು ಬಗೆಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತಿವೆ. ನಗರದ ಪ್ರಮುಖ ರಸ್ತೆಗಳಲ್ಲಿ ಮಾವಿನ ಹಣ್ಣು ಮಾರಾಟ ನಡೆಯುತ್ತಿದೆ. ಒಂದು ಕೆಜಿ ಮಾವಿಗೆ ಹಣ್ಣಿನ ಆಧಾರದ ಮೇಲೆ ಬೆಲೆ ನಿಗದಿಯಾಗಿದ್ದು, 50 ರೂ. ನಿಂದ 80 ರೂ. ಗಳವರೆಗೂ ಮಾವಿನ ಹಣ್ಣು ಮಾರು ಕಟ್ಟೆಯಲ್ಲಿ ದೊರೆಯುತ್ತಿವೆ.
ಜಿಲ್ಲೆಯ ಬೇರೆ ಬೇರೆ ಭಾಗಗಳಿಂದ ಬರಬೇಕಾಗಿರುವ ಮಾವಿನಹಣ್ಣು ಇನ್ನೂ ಬಂದಿಲ್ಲ. ಹವಾಮಾನ ವೈಪರೀತ್ಯದಿಂದ ಫಸಲು ಕಡಿಮೆ ಆಗಿದೆ ಕೊರೊನಾ ಹಿನ್ನೆಲೆಯಲ್ಲಿ ಮಾರಾಟವೂ ಕುಸಿದಿದೆ.
-ರಾಮಯ್ಯ, ಮಾವಿನಹಣ್ಣು ಮಾರಾಟಗಾರ
ಜಿಲ್ಲೆಯಲ್ಲಿ 22 ಸಾವಿರ ಹೆಕ್ಟೇರ್‌ನಲ್ಲಿ ಮಾವು ಬೆಳೆಯ ಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹವಾಮಾನ ವೈಪರೀತ್ಯದಿಂದ ಈ ಬಾರಿ ಫಸಲು ಕಡಿಮೆಯಿದೆ. ತುಮಕೂರು, ಗುಬ್ಬಿ, ಚೇಳೂರು ಎಪಿಎಂಸಿ ಮಾರುಕಟ್ಟೆ ಯಲ್ಲಿ ಮಾವು ಮಾರಾಟ ನಡೆಯುತ್ತಿದೆ, ಚೇಳೂರು ಮಾರುಕಟ್ಟೆ ದೊಡ್ಡ ಮಾವು ಮಾರುಕಟ್ಟೆ. ಅಲ್ಲಿ ಎಲ್ಲಾ ಮಾವು ಮಾರಾಟಕ್ಕಿದ್ದು ಕೊರೊನಾ ಹಿನ್ನೆಲೆ ಮಾರಾಟ ಕಡಿಮೆಯಾಗಿದೆ.
-ಡಾ.ರಘು, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ
* ಚಿ.ನಿ.ಪುರುಷೋತ್ತಮ್