ನವದೆಹಲಿ:ಕೋವಿಡ್ ಸೋಂಕು ಪ್ರಕರಣ ಇಳಿಮುಖವಾಗುತ್ತಿದ್ದು, ಹರ್ಯಾಣ ಸರ್ಕಾರ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದೆ. ಅಲ್ಲದೇ ಮಾರುಕಟ್ಟೆ, ಶಾಪಿಂಗ್ ಮಾಲ್ ತೆರೆಯಲು ಅವಕಾಶ ನೀಡಿದೆ. ಏತನ್ಮಧ್ಯೆ ಕೋವಿಡ್ ಲಸಿಕೆ ಕಾರ್ಯಕ್ರಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾಲ್ ಮತ್ತು ರೆಸ್ಟೋರೆಂಟ್ ಮಾಲೀಕರು ವಿವಿಧ ರೀತಿಯ ಡಿಸ್ಕೌಂಟ್ ಗಳ ಆಫರ್ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ತಮಿಳುನಾಡಿನಲ್ಲಿ ಕೋವಿಡ್ 19 ಲಾಕ್ ಡೌನ್ ಜೂನ್ 28ರವರೆಗೆ ವಿಸ್ತರಣೆ, ನಿರ್ಬಂಧ ಸಡಿಲಿಕೆ
ಲಸಿಕೆ ಪಡೆದುಕೊಂಡ ಜನರಿಗೆ ಗುರುಗ್ರಾಮ್ ನ ಮಾಲ್ ಮತ್ತು ಪಬ್, ರೆಸ್ಟೋರೆಂಟ್ ಗಳಲ್ಲಿ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಆಫರ್ ಗಳನ್ನು ನೀಡಿರುವುದಾಗಿ ವರದಿ ವಿವರಿಸಿದೆ. ಆರೋಗ್ಯ ಕಾರ್ಯಕರ್ತರಿಗೆ ಗುರುಗ್ರಾಮ್ ಮಾಲ್ ನಲ್ಲಿ ಉಚಿತ ಪಾರ್ಕಿಂಗ್ ಮತ್ತು ಶಾಪಿಂಗ್ ನಲ್ಲಿ ವಿಶೇಷ ದರ ಕಡಿತ ಮಾಡುವುದಾಗಿ ಘೋಷಿಸಿದೆ.
ಕೋವಿಡ್ 19 ಲಸಿಕೆಯನ್ನು ಪಡೆದುಕೊಂಡವರಿಗೆ ವಿವಿಧ ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ ವಿಶೇಷ ಆಫರ್ ಗಳ ಡಿಸ್ಕೌಂಟ್ ನೀಡಲಾಗಿದೆ ಎಂದು ವರದಿ ವಿವರಿಸಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ನಮ್ಮ ಮಾರಾಟದಲ್ಲಿಯೂ ಇಳಿಕೆ ಪ್ರಮಾಣ ಮುಂದುವರಿದಿದೆ. ಹೀಗಾಗಿ ನಮ್ಮ ಮಾರಾಟವನ್ನು ಅಧಿಕಗೊಳಿಸಲು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಇಂತಹ ಆಫರ್ ಗಳನ್ನು ನೀಡುತ್ತಿರುವುದಾಗಿ ಗುರುಗ್ರಾಮ್ ಪಬ್ ಬಾರ್ ನ ದಿಗ್ವಿಜಯ್ ಎಎನ್ ಐಗೆ ತಿಳಿಸಿದ್ದಾರೆ.
ಈ ಆಫರ್ ಕೇವಲ ಗ್ರಾಹಕರನ್ನು ಆಕರ್ಷಿಸುವುದು ಮಾತ್ರವಲ್ಲ, ಕೋವಿಡ್ 19 ಸೋಂಕನ್ನು ಹರಡದಂತೆ ಎಚ್ಚರವಹಿಸುವ ಕಾಳಜಿ ಇದ್ದು, ಆ ನಿಟ್ಟಿನಲ್ಲಿ ಜನರು ಲಸಿಕೆ ಪಡೆಯುವುದು ಅತ್ಯಗತ್ಯ ಎಂಬ ಕಾಳಜಿಯನ್ನು ಹೊಂದಲಾಗಿದೆ ಎಂದು ವಿವರಿಸಿದ್ದಾರೆ.