ಚಿಕ್ಕಬಳ್ಳಾಪುರ: ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕೋವಿಡ್-19 ಸಂಬಂಧ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಇಲ್ಲದಿದ್ದರೆ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಎಚ್ಚರಿಕೆ ನೀಡಿದರು.
ನಗರ ಹೊರ ವಲಯದ ಅಮಾನಿಗೋಪಾಲಕೃಷ್ಣ ಕೆರೆಯಲ್ಲಿ, ನ್ಯೂ ಎಪಿಎಂಸಿ ಯಾರ್ಡ್ ರಸ್ತೆ ಪಕ್ಕದಲ್ಲಿ ಹಾಗೂ ತಾಲೂಕಿನ ಮಂಚನಬಲೆ ಗ್ರಾಮದ ಗುಂಡುತೋ ಪಿನಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗಿಡ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೋಷಣೆಗೆ ಪ್ರತಿಜ್ಞೆ ಮಾಡಿ: ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು. ಪರಿಸರ ದಿನದ ಅಂಗವಾಗಿ ಸಸಿ ನೆಡುವುದಷ್ಟೇ ಅಲ್ಲ, ಅದರ ಪೋಷಣೆ ಮಾಡುವ ಪ್ರತಿಜ್ಞೆ ಮಾಡಬೇಕು ಎಂದರು.
ಜಿಪಂ ಅಧ್ಯಕ್ಷ ಎಂ.ಬಿ. ಚಿಕ್ಕನರಸಿಂಹಯ್ಯ, ಉಪಾಧ್ಯಕ್ಷೆ ನಿರ್ಮಲಾ, ತಾಪಂ ಅಧ್ಯಕ್ಷ ಬಿ.ಎಂ. ರಾಮುಸ್ವಾಮಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಡೀಸಿ ಆರ್.ಲತಾ, ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್, ಎಸ್ಪಿ ಮಿಥುನ್ ಕುಮಾರ್, ಅಪರ ಜಿಲ್ಲಾಧಿಕಾರಿ ಆರತಿ, ಉಪ ವಿಭಾಗಾಧಿಕಾರಿ ರಘುನಂದನ್, ತಹಶೀಲ್ದಾರ್ ನಾಗಪ್ರಶಾಂತ್, ಉಪಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ವಲಯ ಅರಣ್ಯಾಧಿಕಾರಿ ವಿಕ್ರಮ್, ಪೂರ್ಣಿಕಾ, ತಾಪಂ ಇಒ ಹರ್ಷವರ್ಧನ್ ಉಪಸ್ಥಿತರಿದ್ದರು.
ಪರಿಸರ ದಿನಾಚರಣೆ ಕೇವಲಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ವರ್ಷದ 365 ದಿನಗಳ ಕಾಲ ನಾವು ಗಿಡಮರಗಳನ್ನು ರಕ್ಷಣೆ ಮಾಡುವ ಮೂಲಕ ಭೂಮಿ ತಾಯಿಯ ಋಣ ತೀರಿಸಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಪರಿಸರ ಪ್ರೇಮಿಯಾಗಬೇಕು. ಪರಿಸರ ರಕ್ಷಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹಸಿರು ಕ್ರಾಂತಿ ಮಾಡಬೇಕು.
-ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವರು