Advertisement

ಕೋವಿಡ್‌ 19: ಸರಕಾರಕ್ಕೆ 40 ಸಾ. ಕೋ. ರೂ. ಕಂದಾಯ ನಷ್ಟ

07:04 PM Apr 11, 2020 | Suhan S |

ಮುಂಬಯಿ, ಎ. 10 : ನಗದು ಕೊರತೆಯಿಂದ ಬಳಲುತ್ತಿರುವ ಮಹಾರಾಷ್ಟ್ರ ಸರಕಾರವು ಕೋವಿಡ್ 19 ವೈರಸ್‌ ಸಂಬಂಧಿತ ಕರ್ಫ್ಯೂ ಮತ್ತು ಲಾಕ್‌ಡೌನ್‌ ಕಾರಣದಿಂದಾಗಿ ಮಾರ್ಚ್‌, ಎಪ್ರಿಲ್‌ನಲ್ಲಿ ಅಂದಾಜು 40,000 ಕೋಟಿ ರೂ. ಗಳ ಕಂದಾಯ ನಷ್ಟವನ್ನು ಎದುರಿಸುತ್ತಿದೆ. ಎಪ್ರಿಲ್‌ನಿಂದ ಜೂನ್‌ವರೆಗಿನ ಮೂರು ತಿಂಗಳ ಅವಧಿಗೆ ಸಂಬಳ ನೀಡಲು ಸರಕಾರವು ಕನಿಷ್ಠ 15,000 ಕೋಟಿ ರೂ.ಗಳಿಂದ 20,000 ಕೋಟಿ ರೂ.ವರೆಗೆ ಸಾಲ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. ರಾಜ್ಯದ ಆರ್ಥಿಕ ಚಟುವಟಿಕೆಗಳು ಸ್ಥಗಿತ ಗೊಳ್ಳುವುದರೊಂದಿಗೆ, ಜಿಎಸ್‌ಟಿ, ಸ್ಟಾಂಪ್‌ ಡ್ನೂಟಿ, ಅಬಕಾರಿ ಮತ್ತು ಸಾರಿಗೆ ತೆರಿಗೆ ಸಂಗ್ರಹವು ವಾಸ್ತವಿಕವಾಗಿ ಸ್ಥಗಿತಗೊಂಡಿದೆ.

Advertisement

2019ರ ಮಾರ್ಚ್‌ನಲ್ಲಿ ರಾಜ್ಯವು ಕಂದಾಯದ ಮೂಲಕ 42,000 ಕೋಟಿ ರೂ.ಗಳನ್ನು ಸಂಗ್ರಹಿಸಿತ್ತು. ಈ ವರ್ಷ ಅದು ಕೇವಲ 17,000 ಕೋಟಿ ರೂ. ಆಗಿದ್ದು ಇದು ಶೇ.60ರಷ್ಟು ಕಡಿತವಾಗಿದೆ. ಅದೇ ರೀತಿ 2019ರ ಎಪ್ರಿಲ್‌ ನಲ್ಲಿ ಕಂದಾಯ ಸಂಗ್ರಹ 21,000 ಕೋಟಿ ರೂ. ಆಗಿತ್ತು. ಪ್ರಸಕ್ತ ಎಪ್ರಿಲ್ನಲ್ಲಿ ಇದು 4,000 ಕೋಟಿ ರೂ.ಗಳಿಂದ 5,000 ಕೋಟಿ ರೂ.ಗಳಷ್ಟಿದೆ ಎಂದು ಅಂದಾಜಿಸಲಾಗಿದೆ, ಇದು ಸುಮಾರು ಶೇ. 76ರಷ್ಟು ಕುಸಿತವಾಗಿದೆ.

ಕಳೆದ ವರ್ಷ ನಿಧಾನವಾಗಿದ್ದ ಕೇಂದ್ರದ ಆದಾಯ ಪಾವತಿ ಇದೀಗ ಮತ್ತಷ್ಟು ಕುಸಿದಿದೆ. 2019ರ ಸೆಪ್ಟೆಂರ್ಬ-ಅಕ್ಟೋಬರ್‌ ಅವಧಿಗೆ ರಾಜ್ಯವು ಈ ವಾರದಲ್ಲಿ 1,800 ಕೋಟಿ ರೂ.ಗಳ ಜಿಎಸ್ಟಿ ಪರಿಹಾರ ಪಾವತಿಯನ್ನು ಪಡೆದುಕೊಂಡಿದೆ. ಕೇಂದ್ರದಿಂದ ರಾಜ್ಯಕ್ಕೆ ಇನ್ನೂ 5,000 ಕೋಟಿ ರೂ. ಬಾಕಿ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಾಜ್ಯವು ಪ್ರಸ್ತುತ 5.2 ಲಕ್ಷ ಕೋಟಿ ರೂ.ಗಳ ಸಾಲದ ಹೊರೆಯನ್ನು ಹೊಂದಿದೆ. ಇದರ ಬಡ್ಡಿ ಪಾವತಿ ತಿಂಗಳಿಗೆ 3,000 ಕೋಟಿ ರೂ.ಆಗಿದೆ. ಲಾಕ್‌ಡೌನ್‌ ಅನ್ನು ತೆಗೆದುಹಾಕಿದ ಅನಂತರವೂ, ಆರ್ಥಿಕ ಚಟುವಟಿಕೆಗಳು ತಿಂಗಳುಗಳವರೆಗೆ ಪುನರಾರಂಭಗೊಳ್ಳದಿರಬಹುದು, ಅಂದರೆ ಸರಕಾರದ ಕಂದಾಯ ಸಂಗ್ರಹವೂ ಕಡಿಮೆ ಇರಲಿದೆ. ಈ ಅವಧಿಯಲ್ಲಿ ಅಕ್ಟೋಬರ್‌ ವರೆಗೆ ಕಂದಾಯ ಸಂಗ್ರಹವು ಗುರಿಯ ಶೇ. 50 ಕ್ಕಿಂತ ಕಡಿಮೆಯಿರಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ.

ಲಾಕ್‌ಡೌನ್‌ ಪರಿಣಾಮವಾಗಿ ಅನೇಕ ವಲಸಿಗರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಲಾಕ್‌ಡೌನ್‌ ಮುಗಿದ ಅನಂತರ ಇನ್ನುಳಿದ ಕೆಲವರು ತಮ್ಮ ಗ್ರಾಮಗಳಿಗೆ ಮರಳಲು ಬಯಸಲಿದ್ದಾರೆ. ಅಕ್ಟೋಬರ್‌ನಲ್ಲಿ ಮಾನ್ಸೂನ್‌ ಬಿತ್ತನೆ ಮುಗಿಯುವವರೆಗೂ ಅವರು ಅಲ್ಲಿಯೇ ಇರಲು ಆಯ್ಕೆ ಮಾಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next