ಬೆಂಗಳೂರು: ಕೋವಿಡ್-19ಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳೆಷ್ಟು, ಅವುಗಳಲ್ಲಿ ಒಟ್ಟು ಎಷ್ಟು ಬೆಡ್‌ಗಳಿವೆ, ಸಾರ್ವಜನಿಕರಿಗೆ ಸಕಾಲದಲ್ಲಿ ವಸ್ತುನಿಷ್ಠ ಮಾಹಿತಿ ನೀಡಲು ವೆಬ್‌ಸೈಟ್ ಅಥವಾ ಪೋರ್ಟಲ್ ರೂಪಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ಸಕಾಲದಲ್ಲಿ ಚಿಕಿತ್ಸೆ ದೊರೆಯದೆ ಅನೇಕ ಮಂದಿ ಸಾವಿಗೀಡಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆಯಿದೆ ಎಂದು ತಿಳಿಸಿ ವಕೀಲೆ ಗೀತಾ ಮಿಶ್ರಾ, ಭಾರತ್ ಪುನರುತ್ಥಾನ ಟ್ರಸ್ಟ್ ಸೇರಿ ಮತ್ತಿತರರು ಸಲ್ಲಿಸಿದ್ದ ಪ್ರತ್ಯೇಕ ಹಿತಾಸಕ್ತಿ ಮತ್ತು ಹೈಕೋರ್ಟ್ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಅರ್ಜಿಗಳನ್ನು ಮುಖ್ಯ ನ್ಯಾ. ಎ.ಎಸ್. ಓಕ್ ಹಾಗೂ ನ್ಯಾ. ಅರವಿಂದ ಕುಮಾರ್ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ರಾಜ್ಯ ಸರ್ಕಾರದ ಲಿಖೀತ ಹೇಳಿಕೆ ಪರಿಶೀಲಿಸಿದ ನ್ಯಾಯಪೀಠ, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಲು ಅನುಸರಿಸುವ ವ್ಯವಸ್ಥೆ, ಹಾಸಿಗೆಗಳ ಮಾಹಿತಿ ಜನರಿಗೆ ತಲುಪಿಸಲು ಯಾವುದಾದರೂ ಕೇಂದ್ರೀಕೃತ ವ್ಯವಸ್ಥೆ ಇದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಸರ್ಕಾರಿ ವಕೀಲರ ಪ್ರತಿಕ್ರಿಯೆ ಬಳಿಕ, ಖಾಲಿ ಹಾಸಿಗೆಗಳ ಮತ್ತು ಕೋವಿಡ್ 19ಗೆ ಚಿಕಿತ್ಸೆ ನೀಡುವ ಆಸ್ಪತ್ರೆಗಳ ವಿವರಗಳನ್ನು ನೀಡಬೇಕು ಒಂದು ಕೇಂದ್ರೀಕೃತ ವೆಬ್‌ಸೈಟ್ ಆರಂಭಿಸಬೇಕಿದೆ ಎಂದು ಸಲಹೆ ನೀಡಿದ ನ್ಯಾಯಪೀಠ, ವೆಬ್‌ಸೈಟ್‌ಗಳು ಆಗ್ಗಿಂದಾಗ್ಗೆ ಅಪ್‌ಡೇಟ್ ಆಗಬೇಕು ಎಂದು ಸರ್ಕಾರ ಹಾಗೂ ಬಿಬಿಎಂಪಿಗೆ ಸೂಚಿಸಿ ಅರ್ಜಿ ವಿಚಾರಣೆಯನ್ನು ಜು.13ಕ್ಕೆ ಮಂದೂಡಿತು.
ವರದಿ ನೀಡುವ ಸಮಯ ಮುಖ್ಯ: ಕೋವಿಡ್ 19 ಪರೀಕ್ಷೆ ವರದಿ ನೀಡಲು ಏಕೆ ವಿಳಂಬವಾಗುತ್ತದೆ? ಎಂದು ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯನ್ನು ಪ್ರಶ್ನಿಸಿರುವ ಹೈಕೋರ್ಟ್, ವರದಿ ವಿಳಂಬದಿಂದಾಗಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಹೇಗೆಂದರೆ, ನ್ಯಾಯಾಧೀಶರೊಬ್ಬರ ತಂದೆಗೆ ಕೋವಿಡ್ 19 ಸೋಂಕು ಇತ್ತು. ಇದರಿಂದ ನ್ಯಾಯಾಧೀಶರ ವಸತಿ ಸಮುಚ್ಚಯದ 14 ನ್ಯಾಯಾಧೀಶರು ಕ್ವಾರಂಟೈನ್ ಆಗಿದ್ದಾರೆ.
ಜುಲೈ 4ರಂದೇ ಪರೀಕ್ಷೆ ಮಾಡಿಸಿದರೂ ವರದಿ ಬಂದಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು. ಪಾಸಿಟಿವ್ ವರದಿಯಾದರೆ ಸೋಂಕಿತರು ದಾಖಲಾಗುವ ಎಷ್ಟು ಸಮಯಬೇಕು?. ಪರೀಕ್ಷೆ ಬಳಿಕ ಸೋಂಕಿತರು ಪರಿವಾರದೊಂದಿಗೆ ಬರೆಯುತ್ತಾರೆ. ಅನೇಕ ದಿನದ ಬಳಿಕ ವರದಿ ನೀಡಿದರೆ ಕುಟುಂಬದ ಸದಸ್ಯರಿಗೆ ಹರಡಿರುತ್ತದೆ. ಇದನ್ನು ಹೇಗೆ ನಿಯಂತ್ರಿಸಲಾಗುತ್ತದೆ? ತಪಾಸಣೆ ಹಾಗೂ ವರದಿ ನಡುವಿನ ಸಮಯ ನಿರ್ಣಾಯಕ ಎಂಬುದನ್ನು ಸರ್ಕಾರ ಮನಗಾಣಬೇಕು ಎಂದು ಹೈಕೋರ್ಟ್ ಹೇಳಿತು.