ಬೆಂಗಳೂರು: ಕೋವಿಡ್ 19 ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೂ ಕೋವಿಡ್ 19 ತಗುಲಿದ್ದು, ಶನಿವಾರ ಮತ್ತೊಬ್ಬ ಪೊಲೀಸ್ ಸಿಬ್ಬಂದಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಪುಲಕೇಶಿನಗರ ಸಂಚಾರ ಠಾಣೆ ಸಿಬ್ಬಂದಿ ಬಳಿಕ ಚಾಮರಾಜಪೇಟೆ ಪೊಲೀಸ್ ಠಾಣೆಯ ಪೇದೆಯೊಬ್ಬರಿಗೆ (ರೋಗಿ ಸಂಖ್ಯೆ -1815) ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದ್ದು, ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಇದು ಇತರೆ ಪೊಲೀಸರಲ್ಲಿ ಆತಂಕ ಮೂಡಿಸಿದೆ. ಮಹಾಲಕ್ಷ್ಮಿ ಲೇಔಟ್‌ನ ಶಂಕರ ನಗರದ ಮಾರಪ್ಪನಪಾಳ್ಯ ನಿವಾಸಿಯಾಗಿ ರುವ 34 ವರ್ಷದ ಪೇದೆ ಈ ಹಿಂದೆ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಕಾರ್ಯನಿರ್ವಹಿಸುತ್ತಿದ್ದರು. ಡಿಜಿಪಿ ಪ್ರವೀಣ್ ಸೂದ್ 50 ವರ್ಷ ಮೇಲ್ಪಟ್ಟ ಸಿಬ್ಬಂದಿಯನ್ನು ಕೋವಿಡ್ 19 ಬಂದೋಬಸ್ತ್ ಕೆಲಸಕ್ಕೆ ನಿಯೋಜಿಸದಂತೆ ಆದೇಶಿಸಿದ್ದರು. ಸಿಬ್ಬಂದಿಯ ಕೊರತೆ ಹಿನ್ನೆಲೆಯಲ್ಲಿ ಮೇ 17 ರಂದು ಎಸಿಬಿ ಕರ್ತವ್ಯದಿಂದ ಬಿಡುಗಡೆಗೊಳಿಸಿ ಇಲಾಖೆ ಸೇವೆಗೆ ಕಳುಹಿಸಲಾಗಿತ್ತು. ಬಳಿಕ ಚಾಮರಾಜಪೇಟೆ ಠಾಣಾ ವ್ಯಾಪ್ತಿಯ ಟಿಪ್ಪುನಗರ ಸೀಲ್‌ಡೌನ್ ಪ್ರದೇಶದ ಭದ್ರತೆಗೆ ನಿಯೋಜನೆಗೊಂಡಿದ್ದರು. ಇ
ತ್ತೀಚೆಗೆ ಜ್ವರ ಕಾಣಿಸಿಕೊಂಡಿದ್ದು, ಇಎಸ್‌ಐ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ತಗುಲಿರುವ ಶಂಕೆ ಮೇರೆಗೆ, ಪರೀಕ್ಷೆಗೆ ಒಳಪಡಿಸಲಾಗಿತ್ತು. ಮೇ 22 ರಾತ್ರಿ ವೈದ್ಯಕೀಯ ತಪಾಸಣೆಯ ವರದಿ ಬಂದಿದ್ದು, ಸೋಂಕು ತಗುಲಿರುವುದು ಗೊತ್ತಾಗಿದೆ. ಪೇದೆ ವಾಸವಾಗಿದ್ದ ಮಹಾಲಕ್ಷ್ಮಿ ಲೇಔಟ್ ನ ಶಂಕರನಗರದ ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಮಾರಪ್ಪನಪಾಳ್ಯ ವಾರ್ಡ್‌ಅನ್ನು ಕಂಟೈನ್ಮೆಂಟ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದರು.
ಹತ್ತು ಪೊಲೀಸರು ಕ್ವಾರಂಟೈನ್: ಕಾನ್ ಸ್ಟೇಬಲ್ ಕೋವಿಡ್ 19 ಸೋಂಕು ದೃಢ ಪಟ್ಟ ಬಳಿಕ ಚಾಮರಾಜಪೇಟೆ ಪೊಲೀಸ್ ಠಾಣೆಯನ್ನು ಸ್ಯಾನಿಟೈಸರ್ ಮೂಲಕ ಸ್ವತ್ಛಗೊಳಿಸಲಾಗಿದೆ. ಕಾನ್ ಸ್ಟೇಬಲ್ ಜತೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ ಹತ್ತು ಮಂದಿ ಪೊಲೀಸರನ್ನು ಗುರುತಿಸಲಾಗಿದೆ. ಇವರೆಲ್ಲರಿಗೂ ಕರೋನಾ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗಿದೆ.
ಪೊಲೀಸರ ಸುರಕ್ಷತೆಗೆ ನಿರ್ಲಕ್ಷ್ಯ?: ಕಂಟೇನ್‌ಮೆಂಟ್ ವಲಯ, ಚೆಕ್ ಪೋಸ್ಟ್, ಆಸ್ಪತ್ರೆ, ಮತ್ತಿತರ ಸೂಕ್ಷ್ಮ ವಲಯಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜನೆಯಾಗಿರುವ ಇಲಾಖೆಯ ಸಿಬ್ಬಂದಿಗೆ ಪಿಪಿಇ ಕಿಟ್ ವಿತರಿಸುವಂತೆ ಡಿಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದರು. ಸಿಬ್ಬಂದಿಯ ಸುರಕ್ಷತೆಗೆ ಕಟ್ಟುನಿಟ್ಟಿನ ಕ್ರಮತೆಗೆದುಕೊಳ್ಳುವಂತೆ ಸೂಚಿಸಿದ್ದರು. ಆದರೆ, ಈ ಬಗ್ಗೆ ಯಾವುದೇ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪೇದೆ ಪತ್ನಿ ಊರಿಗೆ: ಪೊಲೀಸ್ ಪೇದೆ ಅವರ ಪತ್ನಿ ಗರ್ಭಿಣಿಯಾಗಿದ್ದು, ಚಿಕಿತ್ಸೆಗೆ ಊರಿಗೆ ತೆರಳಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಕಾರಣ ಯಾರನ್ನು ಕ್ವಾರಂಟೈನ್ ಮಾಡಿಲ್ಲ, ಪೇದೆ ವಾಸವಿದ್ದ ಪಕ್ಕದ ಮನೆಯೂ ಖಾಲಿ ಇತ್ತು. ಮುಂಜಾಗ್ರತಾ ಕ್ರಮವಾಗಿ ಈ ಭಾಗದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಗುತ್ತಿದೆ.
ಚಾಮರಾಜಪೇಟೆ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಜನ ಪೊಲೀಸ್ ಸಿಬ್ಬಂದಿ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಐದು ಜನ ಪೊಲೀಸ್ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.
-ಡಾ. ಮನೋರಂಜನ್ ಹೆಗ್ಡೆ, ಪಶ್ಚಿಮ ವಲಯದ ಆರೋಗ್ಯಾಧಿಕಾರಿ