ಕೋಲಾರ: ಕಳೆದ ಒಂದು ವಾರದಿಂದಲೂ ನದಿ ದಡ ಆಟ ಆಡಿಸುತ್ತಲೇ ಇದ್ದ ಕೋವಿಡ್-19 ಕೊನೆಗೂ ಜಿಲ್ಲೆಗೆ ಕಾಲಿಟ್ಟು ಖಚಿತಪಡಿಸಿದ್ದು, ಮಂಗಳವಾರ ಒಮ್ಮೆಗೆ ಐದು ಕೋವಿಡ್-19 ಸೋಂಕಿತ ಪ್ರಕರಣ ಪತ್ತೆಯಾಗಿ ಇಡೀ ಜಿಲ್ಲೆಯನ್ನು ಆತಂಕದಲ್ಲಿ ಮುಳುಗಿಸಿದೆ. ಕಳೆದ 45ಕ್ಕೂ ಹೆಚ್ಚು ದಿನಗಳಿಂದ ಹಸಿರು ವಲಯದಲ್ಲಿ ಬೀಗುತ್ತಿದ್ದ ಕೋಲಾರ ಮಂಗಳ ವಾರ ಒಮ್ಮೆಗೆ ಸೋಂಕಿತ ಜಿಲ್ಲೆಯಾಗಿ ಮಾರ್ಪ ಟ್ಟಿತು. ಮುಳಬಾಗಿಲು ತಾಲೂಕಿನ ಐವರಿಗೆ ಸೋಂಕು ತಗುಲಿದ್ದನ್ನು ಮಂಗಳವಾರದ ಸಂಜೆ ಕೋವಿಡ್-19 ಬುಲೆಟಿನ್ ಖಚಿತಪಡಿಸಿದ್ದು, 906 ರಿಂದ 910 ರವರೆಗಿನ ಸಂಖ್ಯೆಯನ್ನು ಸೋಂಕಿತರ ಗುರುತಿಗೆ ನೀಡಲಾಗಿದೆ.
ಕೇಸ್ ನಂಬರ್ 906: 22 ವರ್ಷದ ವಿದ್ಯಾರ್ಥಿನಿ ಮುಳಬಾಗಿಲು ತಾಲೂಕು ವಿ. ಹೊಸಹಳ್ಳಿಯವರಾಗಿದ್ದು, ಈಕೆ ಹುಮ್ನಾಬಾದ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಗ್ರಾಮಕ್ಕೆ ವಾಪಸ್ಸಾಗಿದ್ದು, ಈಕೆಯ ಗಂಟಲು ದ್ರಾವಣ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಕೇಸ್ ನಂಬರ್ 907: ಸೋಂಕಿತ 70 ವರ್ಷದ ಮಹಿಳೆ ಬೆಂಗಳೂರಿನ ಜೆ.ಪಿ. ನಗರದಲ್ಲಿ ಮನೆಕೆಲಸ ಮಾಡಿಕೊಂಡಿದ್ದು, ಈಕೆ ಇತ್ತೀಚೆಗೆ ಸ್ವಂತ ಗ್ರಾಮವಾದ ಮುಳಬಾಗಿಲು ತಾಲೂಕು ಬೂಸಾಲಕುಂಟೆ ಗ್ರಾಮಕ್ಕೆ ಬಂದಿದ್ದ ಕಾರಣ ಈಕೆಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿತ್ತು.
ಕೇಸ್ ನಂಬರ್ 908: 22 ವರ್ಷ ಮತ್ತು ಪಿ-909, 27 ವರ್ಷದ ಇಬ್ಬರು ಮುಳ ಬಾಗಿಲು ತಾಲೂಕು ಬೆಳಗಾನಹಳ್ಳಿ ಯವ ರಾಗಿದ್ದು, ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಒಡಿಶಾಗೆ ಹೋಗಿ ಬಂದಿದ್ದರು ಎನ್ನಲಾಗಿದ್ದು, ಇವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಕೇಸ್ ನಂಬರ್-910: ಮುಳಬಾಗಿಲು ತಾಲೂಕು ಬೈರಸಂದ್ರ ಗ್ರಾಮದ 21 ವರ್ಷದ ಚಾಲಕನಾಗಿದ್ದು, ಇವರು ಚೆನ್ನೈಗೆ ಹೋಗಿ ಬಂದಿದ್ದರೆನ್ನಲಾಗಿದೆ. ಇವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ಈ ಐವರು ಸೋಂಕಿತರೆಂದು ಫಲಿತಾಂಶ ಬಂದಿದೆ. ಒಂದು ವಾರದಿಂದಲೂ ದೇವನಹಳ್ಳಿ ಮಾರ್ಗವಾಗಿ ಬಂದಿದ್ದ ಗುಜರಾತ್ ತಂಡ, ವಿಕೋಟ, ಪುಂಗನೂರುನಿಂದ ಬಂದಿದ್ದ ಆಂಧ್ರ ಪ್ರದೇಶದ ವ್ಯಕ್ತಿಗಳು, ತಬ್ಲಿ ಧರ್ಮಪ್ರಚಾರಕ ತಂಡಗಳ ಆಗಮನದಿಂದ ಕೋಲಾರ ಜಿಲ್ಲೆ ಆತಂಕದ ಸುಳಿವಿನಲ್ಲಿ ಸಿಲುಕಿತ್ತು. ಆದರೆ, ಈ ಪ್ರಕರಣಗಳಿಂದ 100ಕ್ಕೂ ಹೆಚ್ಚು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಬಹುತೇಕ ಈ ವ್ಯಕ್ತಿಗಳಿಗೆ ಮೇಲ್ನೋಟಕ್ಕೆ ಯಾವುದೇ ಪಾಸಿಟಿವ್ ಲಕ್ಷಣಗಳು ಕಂಡು ಬರುತ್ತಿಲ್ಲ.
ದೃಢಪಡಿಸಿದ ಡೀಸಿ: ಜಿಲ್ಲಾಧಿಕಾರಿ ಸಿ. ಸತ್ಯಭಾಮ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತ ನಾಡಿ, ಜಿಲ್ಲೆಯಲ್ಲಿ ಐದು ಜನರಿಗೆ ಸೋಂಕು ದೃಢಪಟ್ಟಿರುವುದನ್ನು ಖಚಿತಪಡಿಸಿದರು. ಪ್ರಾಥಮಿಕ ಸಂಪರ್ಕ ಹೊಂದಿದ 24 ಜನರನ್ನ ಕ್ವಾರಂಟೈನ್ ಮಾಡಲಾಗಿದೆ. ಈ ಗ್ರಾಮಗಳನ್ನ ಕಂಟೋನ್‌ಮೆಂಟ್ ಝೋನ್‌ಗೆ ಸೇರ್ಪಡೆ ಮಾಡಲಾಗಿದೆ. ಪಿ-906 8ರಂದು ಜಿಲ್ಲೆಗೆ ಸರ್ಕಾರಿ ಬಸ್‌ನಲ್ಲಿ ತುಮಕೂರು, ಚಿಕ್ಕಬಳ್ಳಾಪುರ ಮೂಲಕ ಬಂದಿದ್ದಾರೆ. ಪಿ-907 ಲಾಕ್‌ಡೌನ್ ಸಡಿಲಿಕೆಯಾದ ನಂತರ 7ರಂದು ಬಸ್‌ನಲ್ಲಿ ಬಂದಿದ್ದಾರೆ. ಸೋಂಕಿತರು ಎಲ್ಲರೂ ಆರೋಗ್ಯವಾಗಿದ್ದು, ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.