Advertisement

ಕೋತಿಗಳಿಗೂ ತಟ್ಟಿದ ಕೋವಿಡ್ 19 ಬಿಸಿ

06:44 PM Mar 24, 2020 | Suhan S |

ಗಂಗಾವತಿ: ಕೋವಿಡ್ 19 ವೈರಸ್‌ ಹರಡದಂತೆ ಎಚ್ಚರಿಕೆ ವಹಿಸಿ ಕಿಷ್ಕಿಂದಾ ಅಂಜನಾದ್ರಿ ಹಾಗೂ ಸುತ್ತಲಿನ ದೇಗುಲಗಳನ್ನು ಜಿಲ್ಲಾಡಳಿತ ಬಂದ್‌ ಮಾಡಿರುವುದರಿಂದ ಇಲ್ಲಿರುವ ನೂರಾರು ಕೋತಿಗಳು ಆಹಾರವಿಲ್ಲದೇ ಪರದಾಡುತ್ತಿವೆ.

Advertisement

ಕಿಷ್ಕಿಂದಾ ಅಂಜನಾದ್ರಿ ಪ್ರದೇಶ ಏಳು ಬೆಟ್ಟಗಳಿಂದ ಕೂಡಿದ್ದು, ಇಲ್ಲಿಯ ಬೆಟ್ಟಗುಡ್ಡಗಳಲ್ಲಿ ಸಾವಿರಾರು ವರ್ಷಗಳಿಂದ ಕೆಂಪು ಮತ್ತು ಕರಿ ಕೋತಿಗಳಿವೆ. ಸುತ್ತಮುತ್ತಲ್ಲಿರುವ ತೋಟ ಮತ್ತು ಬೆಟ್ಟಗಳಲ್ಲಿ ಸಿಗುವ ಹಣ್ಣು, ಹಂಪಲು ಮತ್ತು ಗಿಡದ ತಪ್ಪಲು ತಿಂದು ಕೋತಿಗಳು ಇದುವರೆಗೂ ಜೀವನ ನಡೆಸುತ್ತಿದ್ದವು. ಕಳೆದ 20 ವರ್ಷಗಳಿಂದ ಅಂಜನಾದ್ರಿ ಬೆಟ್ಟ, ವಾಲೀಕಿಲ್ಲ ಆದಿಶಕ್ತಿ ದೇಗುಲ, ಪಂಪಾ ಸರೋವರ, ಋಷಿಮುಖ ಪರ್ವತ ಹಾಗೂ ಹಂಪಿ ಮಾಲ್ಯವಂತ ಬೆಟ್ಟಕ್ಕೆ ಪ್ರತಿದಿನ ಬರುವ ಭಕ್ತರು, ಪ್ರವಾಸಿಗರು ಕೊಡುವ ಬಾಳೆ ಹಣ್ಣು ಹಾಗೂ ಇತರೆ ಆಹಾರ ಸೇವಿಸಿ ಕೋತಿಗಳು ಇಲ್ಲೇ ವಾಸ ಮಾಡುತ್ತಿದ್ದವು. ಜನರು ಕೊಡುವ ಆಹಾರದಿಂದಾಗಿ ಸುತ್ತಲಿರುವ ತೋಟಗಳಿಗೆ ಹೋಗುವುದನ್ನು ಮರೆತ್ತಿದ್ದವು. ಇದೀಗ ಕೋವಿಡ್ 19 ವೈರಸ್‌ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹಂಪಿ ವಿರೂಪಾಕ್ಷೇಶ್ವರ, ಕೋದಂಡರಾಮ ದೇಗುಲ ಅಂಜನಾದ್ರಿ ಬೆಟ್ಟ, ಪಂಪಾಸರೋವರ ವಾಲೀಕಿಲ್ಲಾ ಆದಿಶಕ್ತಿ ಚಿಂತಾಮಣಿ ಮಠಗಳ ಬಾಗಿಲು ಹಾಕಲಾಗಿದ್ದು ಭಕ್ತರು ಆಗಮಿಸುವುದನ್ನು ನಿರ್ಬಂಧಿಸಲಾಗಿದೆ.

ಇದರಿಂದ ವಾರದಿಂದ ಇಲ್ಲಿರುವ ಕೋತಿಗಳು ಆಹಾರವಿಲ್ಲದಂತಾಗಿದೆ. ಇನ್ನೂ ಹಂಪಿ ಭಾಗದಿಂದ ತುಂಗಭದ್ರಾ ನದಿ ದಾಟಿ ಬರುವ ಕೋತಿಗಳಿಂದ ಇಲ್ಲಿಯ ಬಾಳೆ ತೋಟ ಮತ್ತು ಹಣ್ಣಿನ ಗಿಡಗಳನ್ನು ಸಂರಕ್ಷಣೆ ಮಾಡುವುದು ರೈತರಿಗೆ ಕಷ್ಟವಾಗುತ್ತಿದೆ. ಅಂಜನಾದ್ರಿಬೆಟ್ಟ , ಪಂಪಾ ಸರೋವರ, ಋಷಿಮುಖ, ಆದಿಶಕ್ತಿ ದೇಗುಲದ ಸುತ್ತಲು ನೂರಾರು ಕೋತಿಗಳಿದ್ದು ಅವುಗಳ ಆಹಾರಕ್ಕಾಗಿ ಚೀರುವ ಧ್ವನಿ ಮನ ಕಲುಕುತ್ತಿದೆ. ಇಲ್ಲಿ ಪುರಾತನ ವಿಜಯನಗರ ಕಾಲುವೆ ಹರಿಯುವುದರಿಂದ ಕುಡಿಯುವ ನೀರಿಗೆ ಅನುಕೂಲವಿದ್ದು ಆಹಾರಕ್ಕಾಗಿ ಕಷ್ಟಪಡುತ್ತಿವೆ. ದೇಗುಲ ಕಮಿಟಿಯವರು ಹಣ್ಣು ಅಥವಾ ಕೋತಿಗಳು ತಿನ್ನುವ ಆಹಾರವನ್ನು ಕೆಲ ದಿನಗಳವರೆಗೆ ಪೂರೈಕೆ ಮಾಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಇನ್ನೂ ಸಂಘ ಸಂಸ್ಥೆಯವರು ಸಹ ಕೋತಿಗಳಿಗೆ ಆಹಾರ ಪೂರೈಕೆ ಮಾಡುವ ಮೂಲಕ ಮಾನವೀಯತೆ ತೋರಬೇಕಿದೆ.

 

-ಕೆ.ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next