ಆನೇಕಲ್: ಕೋವಿಡ್ 19 ಮಹಾಮಾರಿ ವೇಗವಾಗಿ ಹಬ್ಬುತ್ತಿರುವ ಹಿನ್ನಲೆಯಲ್ಲಿ ಘೋಷಿಸಿರುವ ಕರ್ಫ್ಯೂಗೆ ತಾಲೂಕು ಸಂಪೂರ್ಣ ಬಂದ್ ಆಗಿತ್ತು. ಯುಗಾದಿ ಹಿನ್ನಲೆಯಲ್ಲಿ ಜನ ಹೂ, ಹಣ್ಣು ಕೊಳ್ಳಲು ಮುಂದಾಗಿದ್ದು ಕಂಡು ಬಂದಿತು.
ತಾಲೂಕಿನ ಬಹುತೇಕ ವೃತ್ತಗಳಲ್ಲಿ , ಗ್ರಾಮಗಳಲ್ಲಿ ನಾಗರಿಕರ ನಿತ್ಯ ಅವಶ್ಯಕತೆಗಳ ಅಂಗಡಿಗಳಾದ ತಕರಾರಿ, ದಿನಸಿ, ಹಾಲಿನ ಬೂತ್, ಸೇರಿದಂತೆ ಮೆಡಿಕಲ್ ಸ್ಟೋರ್ ಸಹಜವಾಗಿ ತೆರೆದಿತ್ತು. ಜನರು ಸಹ ಅವಶ್ಯ ವಸ್ತು ಕೊಳ್ಳ ತೊಡಗಿದ್ದರು.
ಬನ್ನೇರುಘಟ್ಟ: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಮುಂದುವರಿದ ರಜೆ, ಇತಿಹಾಸ ಪ್ರಸಿದ್ಧ ಶ್ರೀಚಂಪಕಧಾಮ ಸ್ವಾಮಿ ದೇವಾಲಯ ಬಾಗಿಲು ಮುಚ್ಚಿತ್ತು. ಮಂಗಳವಾರದ ಸಂತೆ ಸಂಪೂರ್ಣ ಬಂದ್ ಆಗಿತ್ತು. ಪೊಲೀಸರು , ಪಂಚಾಯ್ತಿ ವತಿಯಿಂದ ಕರೋನಾ ಸೋಂಕಿನ ಬಗ್ಗೆ, ಸರ್ಕಾರದ ಆದೇಶದ ಬಗ್ಗೆ ಮೈಕ್ ಮೂಲಕ ಜಾಗೃತಿ ಮೂಡಿಸಿದರು.
ಜಿಗಣಿ: ಪುರಸಭೆ ಆಡಳಿತ ವ್ಯವಸ್ಥೆ ಇರುವ ಜಿಗಣಿ ಬಹುತೇಕ ಕೈಗಾರಿಕಾ ಪ್ರದೇಶ ಒಳಗೊಂಡಿದೆ. ಇಲ್ಲಿನ ಬಹುತೇಕ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಸಂತೆ ಮಾರುಕಟ್ಟೆಯಲ್ಲಿ ಅಂಗಡಿಗಳು ತೆರೆದಿದ್ದರಿಂದ ದಿನಸಿ, ಹೂ ಹಣ್ಣು, ತರಕಾರಿ ಕೊಳ್ಳುವ ಜನರ ದಟ್ಟಣೆ ಹೆಚ್ಚಾಗಿಯೇ ಇತ್ತು. ಗುಂಪು ಸೇರದಂತೆ ಪೊಲೀಸರು ಮೇಲಿಂದ ಮೇಲೆ ಎಚ್ಚರಿಸಿದರು.
ಆನೇಕಲ್ ಪಟ್ಟಣ: ಆನೇಕಲ್ ತಾಲೂಕು ಕೇಂದ್ರದಲ್ಲಿ ಜನ ಕರ್ಫ್ಯೂ ಲೆಕ್ಕಿಸದೇ ಖರೀದಿಯಲ್ಲಿ ತೊಡಗಿದ್ದರು. ಸಮಯ ಕಳೆದಂತೆ ಜನ ಹೆಚ್ಚಾಗುತ್ತಿದ್ದನ್ನು ಕಂಡ ಪೊಲೀಸರು ಜನರನ್ನು ಚದುರಿಸಿದರು.
ಲಾಠಿ ರುಚಿ: ಆನೇಕಲ್ ಪಟ್ಟಣದಲ್ಲಿ ಕರ್ಫ್ಯೂ ಲೆಕ್ಕಿಸದೇ ಎಲ್ಲ ಅಂಗಡಿಗಳು ತೆರೆದಿದ್ದರಿಂದ ಜನ ಸಂಚಾರ ಸಹಜವಾಗಿತ್ತು. ತಕ್ಷಣವೇ ಎಚ್ಚೆತ್ತ ಕೊಂಡ ಆನೇಕಲ್ ಪೊಲೀಸರು ಎಲ್ಲ ಅಂಗಡಿ ಮುಂಗ್ಗಟ್ಟು ಬಂದ್ ಮಾಡಿಸಿ ಚೈಕ್ ಸವಾರರಿಗೆ ಲಾಠಿ ರುಚಿ ತೋರಿಸುತ್ತಿದ್ದಂತೆ ಪಟ್ಟಣ ಬಹುತೇಕ ಬಂದ್ ಆಯಿತು.
ಚಂದಾಪುರ: ತಾಲೂಕಿ ಮತ್ತೂಂದು ಮುಖ್ಯ ವೃತ್ತವಾದ ಚಂದಾಪುರದಲ್ಲಿ ಪೊಲೀಸರ ಬೀಗಿ ಭದ್ರತೆ ಇಂದ ಎಲ್ಲ ಅಂಗಡಿ ಮುಗ್ಗಟ್ಟುಗಳು ಬಾಗಿಲು ಹಾಕಿದ್ದರು ಕೇವಲ ಒಂದೆರಡು ದಿನಸಿ ಅಂಗಡಿ,ತರಕಾರಿ ಅಂಗಡಿಗಳೂ ಮಾತ್ರ ತೆರೆಯಲಾಗಿತ್ತು. ಅತಿಹೆಚ್ಚು ಜನ ಸಂದಣಿಯ ಚಂದಾಪುರದಲ್ಲಿ ಬಹುತೇಕ ಜನ ಮನೆ ಸೇರಿ ಕೊಂಡಿದ್ದರು.