Advertisement

ಸಂಕೇಶ್ವರದಲ್ಲಿ ಕಟ್ಟೆಚ್ಚರ-ಆತಂಕದ ವಾತಾವರಣ

04:20 PM Apr 30, 2020 | Suhan S |

ಹುಕ್ಕೇರಿ/ಸಂಕೇಶ್ವರ: ತಾಲೂಕಿನ ಸಂಕೇಶ್ವರ ಪಟ್ಟಣದಲ್ಲಿ ಬುಧವಾರ ಮತ್ತೋರ್ವನಿಗೆ ಕೋವಿಡ್ 19  ಸೋಂಕು ದೃಢಪಟ್ಟಿರುವುದರಿಂದ ಜನರಲ್ಲಿ ಮತ್ತೆ ಆತಂಕ ಮನೆಮಾಡಿದೆ.

Advertisement

ಕಳೆದ 15 ದಿನಗಳ ಹಿಂದೆ ದೆಹಲಿಯ ನಿಜಾಮುದ್ದೀನ್‌ ತಬ್ಲಿಘೀ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡ ಪಟ್ಟಣದ 47 ವರ್ಷದ ವ್ಯಕ್ತಿಗೆ ಸೋಂಕು (ಪಿ. 293) ದೃಢಪಟ್ಟಿತ್ತು. ನಂತರ ಆತನಿಂದ ಮಗಳಿಗೆ ಹರಡಿತ್ತು. ಈಗ ಸಹೋದರನ ಮಗ 12 ವರ್ಷದ ಬಾಲಕನಿಗೂ ಸೋಂಕು ದೃಢಪಟ್ಟಿದೆ. ಈಗಾಗಲೇ ಸಂಕೇಶ್ವರ ಪಟ್ಟಣ ಸೀಲ್‌ಡೌನ್‌ ಮಾಡಲಾಗಿದ್ದು, ಆ ಕುಟುಂಬಸ್ಥರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿತ್ತು. ಸೋಂಕಿತ ವ್ಯಕ್ತಿಯ ಕುಟುಂಬಸ್ಥರನ್ನು ಪರೀಕ್ಷೆಗೆ ಒಳಪಡಿಲಾಗಿದ್ದು, ಅವರ ಮೊದಲನೆಯ ವರದಿ ನೆಗೆಟೀವ್‌ ಬಂದಿದ್ದು, ಎರಡನೆಯ ವರದಿ ಬರಬೇಕಿದೆ. ಆದರೆ ಪಿ. 293 ಸಹೋದರನ ಕುಟುಂಬದವರು ಮನೆಯಲ್ಲಿದ್ದರು. ಈಗ 12ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿರುವುದರಿಂದ ಇವರ ಸಂಪರ್ಕದಲ್ಲಿದ್ದವರು ಕೂಡ ಆತಂಕಕ್ಕೆ ಒಳಗಾಗಿದ್ದಾರೆ.

ಬಾಲಕನು ತನ್ನ ಸ್ನೇಹಿತರೊಂದಿಗೆ ಆಟವಾಡಲು ಹೋಗಿದ್ದನೆಂದು ತಿಳಿದುಬಂದಿದೆ. ಬಾಲಕನಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಂದೆ, ತಾಯಿ, ಸಹೋದರಿಯನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ. ಸಂಕೇಶ್ವರ ಪಟ್ಟಣ ಪೊಲೀಸರು ಮತ್ತಷ್ಟು ಕಟ್ಟೆಚ್ಚರ ವಹಿಸಿದ್ದಾರೆ. ನಗರದಲ್ಲಿ ಮತ್ತಷ್ಟು ಪೊಲೀಸ್‌ ಬಿಗಿ ಬಂದೋಬಸ್ತ್ ಮಾಡಲಾಗಿದೆ. ನಗರದಲ್ಲಿ ಕಿರಾಣಿ, ತರಕಾರಿ ಮತ್ತು ಹಾಲು ಮಾರಾಟಗಾರರಿಗೆ ನೀಡಲಾಗಿದ್ದ ಸಮಯವನ್ನು ರದ್ದು ಮಾಡಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ಎಸಿ ಅಶೋಕ ತೇಲಿ, ಹುಕ್ಕೇರಿ ತಹಸೀಲ್ದಾರ್‌ ಅಶೋಕ ಗುರಾಣಿ, ಸಂಕೇಶ್ವರ ಪುರಸಭೆ ಮುಖ್ಯಾ ಕಾರಿ ಜಗದೀಶ ಈಟಿ, ಪಿಎಸ್‌ಐಗಳಾದ ಗಣಪತಿ ಕೊಗನೊಳ್ಳಿ, ಶಿವರಾಜ ಕಂಕಣವಾಡಿ, ಕೆಳಗಡೆ, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ನಗರದಲ್ಲಿ ಅಗ್ನಿಶಾಮಕ ದಳ ಹಾಗೂ ಪುರಸಭೆ ಸಿಬ್ಬಂದಿಗಳು ಔಷಧಿ ಸಿಂಪರಣೆ ಕಾರ್ಯ ಮಾಡುತ್ತಿದ್ದಾರೆ. ಮೇ 3ರ ನಂತರ ಸೀಲ್‌ಡೌನ್‌ ಸಡಿಲಗೊಳಿಸಬಹುದೆಂಬ ನಿರೀಕ್ಷೆಯಲ್ಲಿದ್ದ ಜನತೆಗೆ ಇವತ್ತಿನ ಪಾಸಿಟೀವ್‌ ಪ್ರಕರಣದಿಂದ ನಿರಾಸೆಯಾಗಿದೆ.

ಸಂಕೇಶ್ವರದಲ್ಲಿ ಪ್ರಥಮ ಪಾಸಿಟೀವ್‌ ಪ್ರಕರಣದ ಹಿನ್ನೆಲೆಯಲ್ಲಿ ಹಂತಹಂತವಾಗಿ ಪಟ್ಟಣದಲ್ಲಿಯ 300 ಜನರ ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಬಾಲಕನಿಗೆ ಕೋವಿಡ್ 19   ಸೋಂಕು ತಗಲಿರುವ ಬಗ್ಗೆ ಖಚಿತವಾಗಿದೆ. ಪಟ್ಟಣದ ರೆಡ್‌ಜೋನ್‌ ಪ್ರದೇಶದಲ್ಲಿ ನಿಗಾ ವಹಿಸಲಾಗಿದೆ. ಆಶಾ, ಅಂಗನವಾಡಿ ಆರೋಗ್ಯ ಕಾರ್ಯಕರ್ತೆರಿಂದ ಮನೆ ಮನೆ ಸರ್ವೇ ಕಾರ್ಯ ನಡೆಯುತ್ತಿದೆ. -ಡಾ| ಉದಯ ಕುಡಚಿ, ತಾಲೂಕು ಆರೋಗ್ಯ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next