ಬಾಗಲಕೋಟೆ: ಕೋವಿಡ್ 19 ಮಹಾಮಾರಿ ಕರಳು-ಬಳ್ಳಿಗಳಿಗೂ ದೊಡ್ಡ ಗೋಡೆಯಾಗಿ ನಿಂತಿದೆ. ಹೆತ್ತ ಮಕ್ಕಳನ್ನು, ತಂದೆ-ತಾಯಿಯನ್ನೂ ನೋಡಲಾಗದ ಪರಿಸ್ಥಿತಿ ತಂದೊಡ್ಡಿದೆ.
ತಾಯಿ-ಮಗು ದೂರ ದೂರ: ಮೂರು ವರ್ಷದ ಪುಟ್ಟ ಮಗುವಿನಿಂದ ದೂರ ಇರುವಂತೆ ಈ ಕೋವಿಡ್ 19 ಮಾಡಿದೆ. ಗದಗ ಜಿಲ್ಲೆಯ ಮುಂಡರಗಿಯ ಶರಣಪ್ಪ ಅಬ್ಬಿಗೇರಿ ಮತ್ತು ಜ್ಯೋತಿ ಅಬ್ಬಿಗೇರಿ ಅವರಿಗೆ ಮೂರು ವರ್ಷದ ಸೌಮ್ಯ ಮತ್ತು 8 ತಿಂಗಳ ಎರಡು ಮಕ್ಕಳಿವೆ. ಜ್ಯೋತಿಯ ತವರು ಮನೆ ಗುಳೇದಗುಡ್ಡ. ಜ್ಯೋತಿ ಗುಳೇದಗುಡ್ಡದಲ್ಲಿ (ಅದೇ ಆಸ್ಪತ್ರೆಯಲ್ಲಿ ಹೆರಿಗೆ ಆಗಿತ್ತು) 8 ತಿಂಗಳ ಮಗುವಿನೊಂದಿಗೆ ಕಳೆದ ಮಾ. 20ರಂದು ಗುಳೇದಗುಡ್ಡಕ್ಕೆ ಬಂದಿದ್ದು, ಮಗುವಿಗೆ ಮತ್ತು ಜ್ಯೋತಿ ಅವರಿಗೆ ಆರೋಗ್ಯ ಸಮಸ್ಯೆ ಇದ್ದುದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಎರಡು ದಿನ ತವರು ಮನೆಯಲ್ಲಿದ್ದು, ಹೋಗೋಣವೆಂದು ಉಳಿದಿದ್ದರು. ಮೂರು ವರ್ಷದ ಮಗುವನ್ನು ಮುಂಡರಗಿಯಲ್ಲಿಯೇ ಬಿಟ್ಟು ಬಂದಿದ್ದರು. ಆದರೆ, ಮಾ.22ರಂದು ಲಾಕ್‌ಡೌನ್ ಘೋಷಣೆಯಾಯಿತು. ಜ್ಯೋತಿ ಮತ್ತು 8 ತಿಂಗಳ ಮಗು, ಗುಳೇದಗುಡ್ಡದಲ್ಲೇ ಉಳಿದ್ದು, ಮೂರು ವರ್ಷದ ಮಗು ಮತ್ತು ಪತಿ ಶರಣಪ್ಪ, ಮುಂಡರಗಿ ಯಲ್ಲಿಳಿದವರು. ಮರುದಿನ ಹೋಗೋಣವೆಂದರೆ, 8 ತಿಂಗಳ ಮಗುವಿಗೆ ಮತ್ತೆ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಮತ್ತೂಂದು ದಿನ ಕಳೆಯುವಷ್ಟರಲ್ಲಿ ಲಾಕ್‌ಡೌನ್ ಮುಂದುವರೆಯಿತು. ಇತ್ತ ಜ್ಯೋತಿ ಗುಳೇದಗುಡ್ಡದಲ್ಲಿ ಲಾಕ್ ಆದರೆ, ಅತ್ತ ಮೂರು ವರ್ಷದ ಮಗುವಿನೊಂದಿಗೆ ಶರಣಪ್ಪ ಲಾಕ್ ಆದ್ರು.
ಅಮ್ಮನಿಗಾಗಿ ಕಣ್ಣೀರು ಹಾಕುತ್ತಿರುವ ಮಗು: ಮಾ. 25ರಿಂದ ತಾಯಿ ಜ್ಯೋತಿ, ಗುಳೇದಗುಡ್ಡದಲ್ಲಿದ್ದು, ಅತ್ತ ಮುಂಡರಗಿಯಲ್ಲಿರುವ ಮಗು, ಅಮ್ಮನಿಗಾಗಿ ಕಣ್ಣೀರು ಹಾಕುತ್ತಿದೆ. ತಂದೆ ಶರಣಪ್ಪ ಎಷ್ಟೇ ಸಮಾಧಾನ ಮಾಡಿದರೂ ಮಗು ಅಳುವುದು ನಿಲ್ಲುತ್ತಿಲ್ಲ. ಇತ್ತ, ಮಗುವಿನ ಅಳು ನಿಲ್ಲಿಸಲು ತಾಯಿ, ಮೊಬೈಲ್‌ನಲ್ಲೇ ಎಷ್ಟೇ ಪ್ರಯತ್ನಿಸಿದರೂ ಮಮ್ಮಿ ನೀ ಎಲ್ಲಿ ಅದಿ, ಜಲ್ದ ಬಾ ಎಂದು ತೊದಲು ನುಡಿಯಲ್ಲಿ ಕೇಳಿಕೊಳ್ಳುತ್ತಿದೆ. ಮಗುವಿನ ಮಾತಿಗೆ ತಾಯಿ, ಕಣ್ಣೀರಾಗಿ, ಕೋವಿಡ್ 19 ಎಂಬ ವೈರಸ್‌ಗೆ ಹಿಡಿಶಾಪ ಹಾಕುತ್ತಿದ್ದಾಳೆ. ಎಲ್ಲ ಪ್ರಸಂಗವನ್ನು ಗುಳೇದಗುಡ್ಡ ತಹಶೀಲ್ದಾರ್‌ಗೆ ತಿಳಿಸಿ, ಮೂರು ವರ್ಷದ ಮಗುವಿಗಾಗಿ ಮುಂಡರಗಿಗೆ ಹೋಗಬೇಕು. ನನ್ನ ತಮ್ಮ ಬೈಕ್‌ನಲ್ಲಿ ಬಿಟ್ಟು ಬರುತ್ತಾರೆ ಎಂದೆಲ್ಲ ಮನವಿ ಮಾಡಿಕೊಂಡರು. ಆದರೆ, ಅನಿವಾರ್ಯತೆಯ ಪರಿಸ್ಥಿತಿಯಿಂದ ಅಧಿಕಾರಿ ಪರವಾನಿಗೆ ಕೊಡಲಿಲ್ಲ.
ಹುಟ್ಟಿದ ಊರಿಗೆ ಹೋಗಲು ಆಗುತ್ತಿಲ್ಲ: ತಾಯಿ ಮಗುವಿನ ಪರಿಸ್ಥಿತಿ ಇದಾದರೆ, ದೂರದ ಮಂಗಳೂರು, ಬೆಂಗಳೂರು, ಗೋವಾಕ್ಕೆ ದುಡಿಯಲು ಹೋದವರು ನಡೆದುಕೊಂಡೇ ಜಿಲ್ಲೆಯ ಗಡಿಗೆ ಬಂದಿದ್ದರು. ಕಷ್ಟಪಟ್ಟು ಊರ ಸೇರಲು ಬಂದವರು,ಮರಳಿ ದುಡಿಯುವ ಜಾಗಕ್ಕೆ ಹೋಗಲು ಎಚ್ಚರಿಕೆ ಕೊಡಲಾಗಿದೆ. ಇನ್ನೂ ಕೆಲವೆಡೆ ರಾತ್ರೋರಾತ್ರಿ ಊರಿಗೆ ಬಂದರೆ, ಊರ ಜನ, ಗ್ರಾಮಕ್ಕೆ ಬಿಟ್ಟುಕೊಂಡಿಲ್ಲ. ತಮ್ಮದೇ ಸಂಬಂಧಿಕರಿಂದಲೂ ಕೋವಿಡ್ 19 ಅವರನ್ನು ಹತ್ತಿರದಿಂದ ಮಾತನಾಡಿಸಲೂ ಆಗದಂತಾಗಿದೆ.
ಗುಳೇದಗುಡ್ಡ ನನ್ನ ತವರು. ಇಲ್ಲಿಯೇ ಆಸ್ಪತ್ರೆಯಲ್ಲೇ ಹೆರಿಗೆಯಾಗಿತ್ತು. ಮಗು ಮತ್ತು ನನಗೆ ಆಸ್ಪತ್ರೆಗೆ ತೋರಿಸಲು ಬಂದಿದ್ದೆ. 3 ವರ್ಷ ಮಗುವನ್ನು ಪತಿಯ ಜತೆಗೆ ಮುಂಡರಗಿಯಲ್ಲಿ ಬಿಟ್ಟು ಬಂದಿದ್ದೆ. ಲಾಕ್‌ಡೌನ್ ಆಗಿದ್ದರಿಂದ ಇಲ್ಲಿಯೇ ಉಳಿಯಬೇಕಾಯಿತು. ಮಗುವಿನ ಅಳು ಕೇಳಿ, ಕರಳು ಚುರಕ್ ಅನ್ನುತ್ತಿದೆ. ಏನು ಮಾಡಲಿ. ಇಲ್ಲಿರಲೂ ಆಗುತ್ತಿಲ್ಲ, ಅಲ್ಲಿಗೆ ಹೋಗಲೂ ಆಗುತ್ತಿಲ್ಲ. –
ಜ್ಯೋತಿ ಶರಣಪ್ಪ ಅಬ್ಬಿಗೇರಿ, ತವರು ಮನೆಯಲ್ಲಿರುವ ಮುಂಡರಗಿ ಮಹಿಳೆ
ಶ್ರೀಶೈಲ ಕೆ. ಬಿರಾದಾರ