ನ್ಯೂಯಾರ್ಕ್: ಹಸುಗೊಸಿನಿಂದ ಹಿಡಿದು 90ರ ಹರೆಯದ ಹಿರಿ ಜೀವಗಳನ್ನು ಬಲಿ ಪಡೆದಿರುವ ಕೋವಿಡ್ ಉಗ್ರ ಸ್ವರೂಪಕ್ಕೆ ಅಪ್ಪ ಮಗ ಬಲಿಯಾಗಿ ಒಂದೇ ದಿನ ಇಬ್ಬರ ಅಂತ್ಯಸಂಸ್ಕಾರ ನಡೆದ ಹೃದಯ ವಿದ್ರಾವಕ ಘಟನೆ ನ್ಯೂಯಾರ್ಕ್‌ನಲ್ಲಿ ಸಂಭವಿಸಿದೆ.
ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 53ರ ಹರೆಯದ ಮಿಗುಯೆಲ್ ಮೊರನ್‌ಗೆ ಎಪ್ರಿಲ್ ಮೊದಲ ವಾರದಲ್ಲಿ ಸೋಂಕು ಕಾಣಿಸಿಕೊಂಡಿದೆ. ಮನೆಯಲ್ಲಿಯೇ ಸ್ವಯಂ ಪ್ರೇರಿತವಾಗಿ ಮೊರನ್ ಕ್ವಾರೆಂಟೇನ್ ಆಗಿದ್ದು, ಪರಿಸ್ಥಿತಿ ಕೈಮೀರಿದಾಗ ನ್ಯೂಯಾರ್ಕ್ ಐಲ್ಯಾಂಡ್‌ನ ಸೈಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಮೊದಲೇ ಶ್ವಾಸಕೋಶದ ಸಮಸ್ಯೆ ಇದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೇ ಎಪ್ರಿಲ್ 16ರಂದು ಅಸುನೀಗಿದ್ದಾರೆ.
ತಂದೆಯ ಸಾವಿನ ಸುದ್ದಿ ಕೇಳುತ್ತಿದ್ದಂತೆ ಮೊರನ್ ಪುತ್ರ ಡೇನಿಯಲ್ ಮೊರನ್ ಆಸ್ಪತ್ರೆಗೆ ಧಾವಿಸಿದ್ದು, ಅಪ್ಪನ ಸ್ಥಿತಿ ಕಂಡು ಮರುಕಪಟ್ಟಿದ್ದಾರೆ. ಅಪ್ಪನ ಕೈ ಹಿಡಿದು ಮುಂದೊಂದು ದಿನ ನಾವು ನಿಮ್ಮೊಟ್ಟಿಗೆ ಸ್ವರ್ಗದಲ್ಲಿ ಸೇರುತ್ತೇವೆ ಎಂದು ಅಂತಿಮ ನಮನ ಸಲ್ಲಿಸಿದ್ದಾರೆ.
ಆದರೆ ದುರದೃಷ್ಟವಶಾತ್ ಎರಡೇ ವಾರದಲ್ಲಿ ಡೇನಿಯಲ್ ಮಾತು ನಿಜವಾಗಿದೆ. ಹೇಳಿದಂತೆ ಡೇನಿಯಲ್ ಅಪ್ಪನ ಬಳಿಗೆ ಹೋಗಿದ್ದಾರೆ.
ತಂದೆಯ ಅಂತಿಮ ದರ್ಶನ ಪಡೆಯಲು ಆಸ್ಪತ್ರೆಗೆ ತೆರಳಿದಾಗ ಡೇನಿಯಲ್‌ಗೆ ಸೋಂಕು ತಗುಲಿದ್ದು, ತೀವ್ರ ಉಸಿರಾಟ ಸಮಸ್ಯೆಯಿಂದ ಮೇ 2ರಂದು ತೀರಿಕೊಂಡಿದ್ದಾರೆ. ಜತೆಗೆ ಮಿಗುಯೆಲ್ ಮೊರನ್ ಪತ್ನಿ ಮತ್ತು ಮಗಳಿಗೂ ಸೋಂಕು ತಗುಲಿದೆ. ಗಂಡ ಮತ್ತು ಮಗನನ್ನು ಒಂದೇ ದಿನ ಸಮಾಧಿ ಮಾಡುವ ಯಾತನಾಮಯ ಪರಿಸ್ಥಿತಿ ಡೆನಿಯಲ್‌ನ ತಾಯಿಗೆ ಎದುರಾಗಿದೆ.