Advertisement
ಬೆಂಗಳೂರು: ನಗರದಲ್ಲಿ ಸೋಂಕು ತೀವ್ರವಾಗುತ್ತಿರುವ ಸಂದರ್ಭದಲ್ಲೇ ಕೋವಿಡ್ 19 ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುವುದರ ಜತೆಗೆ ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದ ಪೊಲೀಸರು ಮಹಾಮಾರಿಗೆ ಸೋಂಕಿಗೊಳಗಾಗುತ್ತಿದ್ದಾರೆ. ಸೋಂಕಿತರ ಭದ್ರತೆ, ಮಹಾಮಾರಿಯ ಕುರಿತ ಸಾರ್ವಜನಿಕ ಜಾಗೃತಿ ಜತೆಗೆ ಕೋವಿಡ್ 19 ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಲ್ಲೂ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದುವರೆಗೂ ಮೂವರು ಅಧಿಕಾರಿಗಳು ಸೇರಿ ನಾಲ್ವರನ್ನು ಬಲಿ ಪಡೆದುಕೊಂಡಿದೆ.
Related Articles
Advertisement
ಅಲ್ಲದೆ, ನಗರದಿಂದ ಬೇರೆ ಜಿಲ್ಲೆಗಳಿಗೆ ತೆರಳುವವರು ಕೂಡ ಅನುಮತಿ ಪಡೆಯಬೇಕಿತ್ತು. ಜತೆಗೆ ಪ್ರತಿ ಚೆಕ್ ಪೋಸ್ಟ್ ನಲ್ಲಿ ಲಕ್ಷಾಂತರ ಸಾರ್ವಜನಿಕರ ತಪಾಸಣೆ ನಡೆಸಿದರು. ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಪೊಲೀಸರ ಸಂಪರ್ಕದಲ್ಲಿದ್ದರು. ಈ ಮಾರ್ಗದಲ್ಲಿಯೂ ಸೋಂಕು ತಗುಲಿರುವ ಸಾಧ್ಯತೆಯಿದೆ. ಆದರೆ, ಆರಂಭದಲ್ಲಿ ಯಾವುದೇ ಸುಳಿವು ನೀಡದ ಕೋವಿಡ್ 19 ಇದೀಗ ಪ್ರತಿಯೊಬ್ಬರಲ್ಲೂ ಕಾಡತೊಡಗಿದೆ.
ಪೊಲೀಸರಿಗೆ ಆರೋಪಿಗಳೇ ಕಂಟಕ: ಪೊಲೀಸರಿಗೆ ಕಂಟಕವಾಗಿದ್ದು ಅಪರಾಧ ಪ್ರಕರಣಗಳಲ್ಲಿ ಬಂಧನಕ್ಕೊಳಗಾಗುತ್ತಿದ್ದ ಆರೋಪಿಗಳು. ಅಂಕಿ-ಅಂಶಗಳ ಪ್ರಕಾರ ಶೇ. 95 ಪೊಲೀಸ್ ಸಿಬ್ಬಂದಿ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಆರೋಪಿಗಳಿಂದಲೇ ಸೋಂಕು ತಗುಲಿರುವುದು ದೃಢಪಟ್ಟಿದೆ. ಠಾಣೆಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಬಂಧ ಆರೋಪಿಗಳನ್ನು ಬಂಧಿಸುತ್ತಿರುವ ಪೊಲೀಸರು ಕೋರ್ಟ್ ಸೂಚನೆ ಮೇರೆಗೆ ಮೊದಲಿಗೆ ಕೋವಿಡ್-19 ಪರೀಕ್ಷೆ ನಡೆಸುತ್ತಾರೆ. ಆದರೆ, ಪರೀಕ್ಷಾ ವರದಿ ಎರಡು ದಿನಗಳ ಬಳಿಕ ಬರುತ್ತದೆ. ಅದುವರೆಗೂ ಆರೋಪಿಗಳನ್ನು ಠಾಣೆಯಲ್ಲೇ ಇಡಬೇಕಿದೆ.
ಇದು ಸಾವಿನೊಂದಿಗಿನ ಜೀವನ ಎಂಬಂತಾಗಿದೆ. ಆರೋಪಿಗೆ ಸೋಂಕು ಲಕ್ಷಣಗಳಿದ್ದರೆ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯ ಲಾಗುತ್ತದೆ. ಯಾವುದೇ ಲಕ್ಷಣಗಳಿಲ್ಲದೆ ವರದಿಯಲ್ಲಿ ಸೋಂಕು ದೃಢಪಟ್ಟರೆ, ಆಗ ಇಡೀ ಠಾಣೆಯನ್ನು ಸೀಲ್‌ಡೌನ್ ಮಾಡಿ, ಆತನ ಸಂಪರ್ಕದಲ್ಲಿದ್ದ ಪ್ರತಿಯೊಬ್ಬರಿಗೂ ಕ್ವಾರಂಟೈನ್ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಆತನನ್ನು ಖಾಸಗಿ ಸ್ಥಳದಲ್ಲಿ ಇಡುವುದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದರು. ಈ ಮಧ್ಯೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳನ್ನು ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ. ಒಂದು ವೇಳೆ ಜಾಮೀನು ಸಿಕ್ಕರೆ ಸ್ಥಳದಲ್ಲೇ ಜಾಮೀನು ಪಡೆದು ಕೊಳ್ಳುತ್ತಾರೆ.
ಇಲ್ಲವಾದರೆ, ಆತನ ಕೋವಿಡ್ -19 ಪರೀಕ್ಷಾ ವರದಿ ಬರುವವರೆಗೂ ಠಾಣೆಯಲ್ಲೇ ಇಡಲಾಗುವುದು. ಈ ನಡುವೆ ಇತ್ತೀಚೆಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ನೀಡಿರುವ ಸೂಚನೆಗಳ ಪೈಕಿ ಆರೋಪಿಗಳ ಬಂಧನಕ್ಕೂ ಮೊದಲು ಡಿಸಿಪಿ, ಎಸಿಪಿ ಅನುಮತಿ ಅಗತ್ಯ ಎಂಬ ಆದೇಶ ಎಲ್ಲ ಪೊಲೀಸರಲ್ಲೂ ಆತ್ಮವಿಶ್ವಾಸ ಹೆಚ್ಚಿಸಿದೆ. ಪೊಲೀಸರಲ್ಲಿ ಸೋಂಕು ಅಧಿಕವಾಗುತ್ತಿದ್ದಂತೆ ಗಂಭೀರ ಸ್ವರೂಪ ಪ್ರಕರಣ ಹೊರತುಪಡಿಸಿ ಬೇರೆ ಯಾವುದೇ ಪ್ರಕರಣಗಳಲ್ಲೂ ಆರೋಪಿ ಗಳನ್ನು ಬಂಧಿಸುತ್ತಿಲ್ಲ. ಆದರೂ,ಆರೋಪಿಗಳನ್ನು ಠಾಣೆಯಲ್ಲಿ ಇಟ್ಟುಕೊಳ್ಳಲು ಭಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಕಾನೂನು ತೊಡಕು: ಅಪರಾಧ ಪ್ರಕರಣಗಳಲ್ಲಿ ಬಂಧಿಸುತ್ತಿರುವ ಆರೋಪಿಗಳ ಕೋವಿಡ್-19ರ ಪರೀಕ್ಷಾ ವರದಿ ಬರುವವರೆಗೂ ಠಾಣೆಯಲ್ಲೇ ಇಟ್ಟುಕೊಳ್ಳುತ್ತಿದ್ದು, ಅದು ಪೊಲೀಸ್ ಅಧಿಕಾರಿ-ಸಿಬ್ಬಂದಿ ವರ್ಗದಲ್ಲಿ ಆತಂಕ ಎದುರಾಗಿದೆ. ಕಾನೂನು ಪ್ರಕಾರ ಬಂಧಿಸಿದ ಅಥವಾ ವಶಕ್ಕೆ ಪಡೆದುಕೊಂಡ ಆರೋಪಿಯನ್ನು ನಿಗದಿತ ಪೊಲೀಸ್ ಠಾಣೆ ಅಥವಾ ನಿಗದಿತ ಪೊಲೀಸರ ವಶದಲ್ಲೇ ಇಟ್ಟುಕೊಳ್ಳಬೇಕು. ಒಂದು ವೇಳೆ ಬೇರೆಡೆ ಸ್ಥಳಾಂತರಿಸಿದರೆ ಕಾನೂನು ತೊಡಕಾಗುತ್ತದೆ. ಪ್ರಮುಖವಾಗಿ ಅಕ್ರಮವಾಗುತ್ತದೆ. ಹೀಗಾಗಿ ಪ್ರತಿಯೊಬ್ಬ ಆರೋಪಿಯ ಕೋವಿಡ್ 19 ಪರೀಕ್ಷಾ ವರದಿ ಬರುವವರೆಗೂ ಆಯಾ ಠಾಣೆಯಲ್ಲೇ ಇಟ್ಟುಕೊಳ್ಳಬೇಕು. ಹೀಗಾಗಿ ಸೋಂಕಿತ ಆರೋಪಿಯಿದ್ದ ಠಾಣೆ ಸೀಲ್‌ಡೌನ್ ಮಾಡಿ, ಆತನ ಸಂಪರ್ಕದಲ್ಲಿದ್ದರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ.
ದೂರು ಕೊಟ್ಟವರಿಗೂ ಢವ ಢವ!: ಕಳವು, ದರೋಡೆ, ಸುಲಿಗೆ ಪ್ರಕರಣಗಳಲ್ಲಿ ಬಂಧನಕ್ಕೊಳಗಾದ ಆರೋಪಿಗಳಿಂದ ಪೊಲೀಸರಿಗೆ ಕೋವಿಡ್ 19 ಪತ್ತೆಯಾಗುತ್ತಿರುವುದರಿಂದ ಆರೋಪಿಗಳ ವಿರುದ್ಧ ದೂರು ಕೊಟ್ಟವರಲ್ಲಿಯೂ ಇದೀಗ ಆತಂಕ ಶುರು ವಾಗಿದೆ. ಸ್ಥಳ ಮಹ ಜರು ಮತ್ತು ಆರೋಪಿ ಗುರುತಿಸುವಿಕೆಯಲ್ಲಿ ದೂರುದಾರರು ಸ್ಥಳದಲ್ಲಿ ಇರಲೇ ಬೇಕು. ಹೀಗಾಗಿ ದೂರುದಾರರು ಹಾಗೂ ಕೃತ್ಯಕ್ಕೊಳಗಾದ ಮನೆ ಮಾಲಿಕರು ಭಯಗೊಂಡಿದ್ದಾರೆ. ಆದರೆ, ಇದುವರೆಗೂ ಅಂತಹ ಯಾವುದೇ ಘಟನೆಗಳ ಬಗ್ಗೆ ವರದಿಯಾಗಿಲ್ಲ. ಯಾಕೆಂದರೆ, ಆರೋಪಿ ಕೃತ್ಯ ಎಸಗಿದ 2- 3 ತಿಂಗಳ ಬಳಿಕ ಬಂಧನಕ್ಕೊಳಗಾಗುತ್ತಾನೆ. ಆದರೆ, ಪೊಲೀಸ್ ಠಾಣೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಕೈಗೊಳ್ಳ ಲಾಗಿದೆ ಎಂದು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ಮಾಹಿತಿ ನೀಡಿದರು.
50 ವರ್ಷಕ್ಕೆ ಇಳಿಕೆ: ನಗರದ ಕಾನೂನು ಸುವ್ಯವಸ್ಥೆ, ಸಂಚಾರ ಪೊಲೀಸ್ ಠಾಣೆ, ಸಿಎಆರ್, ಸಿಸಿಬಿ, ವಿಶೇಷ ಘಟಕಗಳಲ್ಲಿ ಕೆಲಸ ಮಾಡುತ್ತಿರುವ 50 ವರ್ಷ ಮೇಲ್ಪಟ್ಟ ಅಧಿಕಾರಿ- ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡುವಂತೆ ಆದೇಶಿಸಿದ್ದಾರೆ. ಈ ಹಿಂದೆ 55 ವರ್ಷ ಮೇಲ್ಪಟ್ಟವರು ಮಾತ್ರ ಮನೆಯಿಂದಲೇ ಕೆಲಸ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೊಸ ಆದೇಶ ಹೊರಡಿಸಿದ್ದಾರೆ.
3.5 ಲಕ್ಷ ಮಂದಿ ವಲಸಿಗರು: ನಗರದಲ್ಲಿ ವಾಸವಾಗಿದ್ದ ಲಕ್ಷಾಂತರ ವಲಸಿಗರ ಪೈಕಿ ಇದುವರೆಗೂ ಶ್ರಮಿಕ ಎಕ್ಸ್ ಪ್ರಸ್ ರೈಲು ಮೂಲಕ ಇದುವರೆಗೂ 3.76 ಲಕ್ಷ ಮಂದಿ ವಲಸಿಗರನ್ನು ಉತ್ತರ ಪ್ರದೇಶ, ಕೊಲ್ಕತ್ತ, ದೆಹಲಿ, ಒಡಿಶಾ ಮತ್ತಿತರ ಕಡೆ ಕಳುಹಿಸಲಾಗಿದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ಗಳು ಮಾಹಿತಿ ನೀಡಿದರು.
ತುರ್ತು ವರದಿ ಅಗತ್ಯ: ಆರೋಪಿಗಳನ್ನು ನೇರವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುತ್ತದೆ. ಆದರೆ, ವರದಿಗಾಗಿ 48 ಗಂಟೆಗಳು ಕಾಯುವ ಬದಲು ನಾಲ್ಕೈದು ಗಂಟೆಗಳಲ್ಲೇ ವರದಿ ಸಿಕ್ಕರೆ ಪೊಲೀಸರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.
28ಕ್ಕೂ ಅಧಿಕ ಠಾಣೆಗಳು ಸೀಲ್!: ಸೋಂಕಿಗೆ ನಗರದಲ್ಲಿ ನಾಲ್ವರು ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದು, ಕನಿಷ್ಠ 650 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಸಿಸಿಬಿ ಸೇರಿ 28ಕ್ಕೂ ಅಧಿಕ ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್‌ಮಾಡಲಾಗಿದೆ.
* ಮೋಹನ್ ಭದ್ರಾವತಿ