Advertisement

ಕೋವಿಡ್‌ ಕುರಿತ ಸುದ್ದಿಗಳು ಅನಗತ್ಯ ಆತಂಕ

09:54 AM Jul 11, 2020 | sudhir |

ಕೋವಿಡ್ ಸೋಂಕು ಆರಂಭವಾದ ಅನಂತರದಿಂದ ಅದರ ಕುರಿತು ಎಷ್ಟೊಂದು ಮಾಹಿತಿ ಹರಿದಾಡಲಾರಂಭಿಸಿದೆಯೆಂದರೆ, ಈ ಮಾಹಿತಿಯ ಹರಿವಿನಲ್ಲಿ ಸುಳ್ಳು ಸುದ್ದಿಗಳು, ಉತ್ಪ್ರೇಕ್ಷಿತ ವರದಿಗಳೇ ಮೇಲುಗೈ ಸಾಧಿಸುತ್ತಿವೆಯೇನೋ ಅನ್ನಿಸುತ್ತಿದೆ. ವೈಜ್ಞಾನಿಕ ವಲಯವು ಈ ಇನ್ಫೋಡೆಮಿಕ್’ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ, ಸರಿಯಾದ ವೈಜ್ಞಾನಿಕ ಮಾಹಿತಿಯನ್ನು ಜನರಿಗೆ ತಲುಪಿಸಲು ಪ್ರಯತ್ನಿಸುತ್ತಿದ್ದರೂ ಸತ್ಯಕ್ಕಿಂತಲೂ ಸುಳ್ಳಿಗೇ ವೇಗ ಹೆಚ್ಚು ಎನ್ನುವಂತೆ, ಸುಳ್ಳು ಸುದ್ದಿಗಳೇ ವೈರಲ್‌ ಆಗುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಾರ್ಚ್‌ ತಿಂಗಳಲ್ಲೇ ಸಾಮಾಜಿಕ ಜಾಲತಾಣಗಳಿಗೆ, ಅದರಲ್ಲೂ ಮುಖ್ಯವಾಗಿ ಫೇಸ್ ಬುಕ್, ಟ್ವಿರ್ಟ, ಯೂ ಟ್ಯೂಬ್, ಕೋವಿಡ್ ಕುರಿತು ತಪ್ಪು ಮಾಹಿತಿ ಹರಿದಾಡದಂತೆ ಕ್ರಮ ಕೈಗೊಳ್ಳಿ’ ಎಂದು ನಿರ್ದೇಶನ ನೀಡಿತ್ತು. ಆದರೂ ಸಾಮಾಜಿಕ ಜಾಲತಾಣಗಳ ಬಳಕೆದಾರರ ಸಂಖ್ಯೆ ಯಾವ ಮಟ್ಟಕ್ಕಿದೆಎಂದರೆ, ಸುಳ್ಳು ಸುದ್ದಿಗಳು ಪತ್ತೆಯಾಗುವ ಮುನ್ನವೇ ಕೋಟ್ಯಂತರ ಜನರ ಮೊಬೈಲ್ ಗಳಿಗೆ ತಲುಪಿಬಿಟ್ಟಿರುತ್ತವೆ. ಸುಳ್ಳು ಸುದ್ದಿಗಳು ಸೃಷ್ಟಿಸುವ ಹಾವಳಿ ಒಂದೆಡೆಯಾದರೆ, ಉತ್ಪ್ರೇಕ್ಷಿತ ವರದಿಗಳು ಸೃಷ್ಟಿಸುವ ಆತಂಕ ಇನ್ನೊಂದೆಡೆ. ಅದರಲ್ಲೂ ಈ ವಿಚಾರದಲ್ಲಿ ಕೆಲವು ಮಾಧ್ಯಮಗಳಲ್ಲಿ ಬರುವ ವರದಿಗಳು, ಕಾರ್ಯಕ್ರಮಗಳು ಕೋವಿಡ್‌ ಕುರಿತು ಜನರಲ್ಲಿ ಅನಗತ್ಯ ಆತಂಕ ಸೃಷ್ಟಿ ಮಾಡುತ್ತಿವೆ.

Advertisement

ಜಾಗೃತಿ ಮೂಡಿಸುವುದಕ್ಕೂ ಆತಂಕ ಸೃಷ್ಟಿ ಮಾಡುವುದಕ್ಕೂ ಅಜಗಜಾಂತರವಿದೆ. ಕೊರೊನಾ ವಿಷಯದಲ್ಲಿ ಮರಣಮೃದಂಗ’, ರಣಕೇಕೆ’, ರಕ್ಕಸ ವೈರಸ…’ ಎನ್ನುವ ಪದ ಬಳಕೆಯಿಂದ ಜನರಲ್ಲಿ ಸೃಷ್ಟಿಸುತ್ತಿರುವ ಆತಂಕ ಅಷ್ಟಿಷ್ಟಲ್ಲ. ಈ ಕಾರಣಕ್ಕಾಗಿಯೇ ರಾಜ್ಯ ನಾಯಕರು, ವೈದ್ಯರು ಈ ರೀತಿಯ ಪದ ಬಳಕೆ ಮಾಡದಂತೆ ಮಾಧ್ಯಮಗಳಿಗೆ ಪದೇ ಪದೆ ವಿನಂತಿ ಮಾಡುತ್ತಲೇ ಇದ್ದಾರೆ.

ಕೋವಿಡ್‌ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಲೇ ಇದೆ ಎನ್ನುವುದು ಸತ್ಯ. ಆದರೆ ಇದೇ ವೇಳೆಯಲ್ಲಿ ದೇಶದಲ್ಲಿ ಚೇತರಿಸಿಕೊಂಡವರ ಸಂಖ್ಯೆಯೂ ಉತ್ತಮವಾಗುತ್ತಿದೆ. ಅಲ್ಲದೇ, ಕೋವಿಡ್ -19ನಿಂದಾಗಿ ಮರಣ ಪ್ರಮಾಣ ಬಹಳ ಕಡಿಮೆಯಿದೆ ಎನ್ನುವ ಸಂಗತಿಯೂ ಮುಖ್ಯವಾಗಬೇಕು. ರಾಜ್ಯದ ವಿಷಯಕ್ಕೇ ಬರುವುದಾದರೆ, ನಮ್ಮಲ್ಲಿ ಮರಣ ದರ 1.57 ಪ್ರತಿಶತದಷ್ಟಿದೆ.

ಹಾಗೆಂದು ಪ್ರತೀ ಜೀವವೂ ಅಮೂಲ್ಯವಾದದ್ದು ಎನ್ನುವುದನ್ನು ಮರೆಯುವಂತಿಲ್ಲ. ಆದರೆ ಕೋವಿಡ್ ಮರಣಮೃದಂಗ ಬಾರಿಸುತ್ತಿದೆ ಎಂದಾಕ್ಷಣ ಜನರಿಗೆ, ಸೋಂಕು ತಗಲಿದವರಿಗೆಲ್ಲ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವ ಸಂದೇಶ ರವಾನೆಯಾಗುತ್ತದೆ. ಇದರ ಪರಿಣಾಮವಾಗಿ ಸೋಂಕಿತರನ್ನು ಅಪರಾಧಿಗಳಂತೆ ನೋಡುವವರ ಸಂಖ್ಯೆ ಅಧಿಕವಾಗುತ್ತದೆ. ಈ ಕಾರಣಕ್ಕಾಗಿಯೇ, ಮಾಧ್ಯಮಗಳು ಕೋವಿಡ್ ವಿರುದ್ಧದ ದೇಶದ ಹೋರಾಟಕ್ಕೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಿ. ತಮಗಿರುವ ಶಕ್ತಿಯನ್ನು ಸಮಾಜದಲ್ಲಿ ಗುಣಾತ್ಮಕತೆ ಹೆಚ್ಚಿಸಲು ಬಳಸಲಿ.

Advertisement

Udayavani is now on Telegram. Click here to join our channel and stay updated with the latest news.

Next