Advertisement

ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19 ಕಂಟಕ

04:57 PM Apr 04, 2020 | Suhan S |

ಹೊನ್ನಾವರ: ಜಿಲ್ಲೆಯ ಆಯುಷ್ಮಾನ್‌ ಫಲಾನುಭವಿಗಳಿಗೆ ಕೋವಿಡ್ 19 ಸಮಸ್ಯೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಹೃದಯಾಘಾತ, ಅಪಘಾತ ಮತ್ತು ಹೆರಿಗೆಯ ಸಮಸ್ಯೆಗಳ ಹೆಚ್ಚಿನ ಚಿಕಿತ್ಸೆಗೆ ಜಿಲ್ಲೆಯ ಜನರು ದಕ್ಷಿಣ ಕನ್ನಡದ ದೊಡ್ಡ ಆಸ್ಪತ್ರೆಗಳಿಗೆ ರೋಗಿಗಳನ್ನು ಕೂಡಲೇ ಸಾಗಿಸಬೇಕಾಗುತ್ತದೆ. ರಾತ್ರಿ ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಸಂಬಂಧಿಕರು ಸಾಗಿಸುತ್ತಾರೆ. ಅಲ್ಲಿಯ ಆಸ್ಪತ್ರೆಗೆ 24 ತಾಸಿನಲ್ಲಿ ಆಯುಷ್ಮಾನ್‌ ಪ್ರಯೋಜನ ಪಡೆಯಲು ವಾಪಸ್‌ ಊರಿಗೆ ಬಂದು ಸ್ಥಳೀಯ ಆಸ್ಪತ್ರೆಗಳಿಂದ, ಕೆಲವೊಮ್ಮೆ ಜಿಲ್ಲಾಸ್ಪತ್ರೆಗಳಿಂದ ದಾಖಲೆ ಮುಟ್ಟಿಸದಿದ್ದರೆ ಆಯುಷ್ಮಾನ್‌ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ.

Advertisement

ರೋಗಿಗಳೊಂದಿಗೆ ದಕ್ಷಿಣ ಕನ್ನಡಕ್ಕೆ ಹೋದವರು ಕಾಗದ ಪತ್ರ ಪಡೆಯಲು ಊರಿಗೆ ಬರುವಂತಿಲ್ಲ. ಊರಿನಲ್ಲಿದ್ದವರು ಕಾಗದಪತ್ರವನ್ನು ಅಲ್ಲಿಗೆ ಮುಟ್ಟಿಸುವಂತಿಲ್ಲ. ಅದಕ್ಕೆ ಉಪವಿಭಾಗಾಧಿಕಾರಿಗಳ ಪರವಾನಗಿ ಬೇಕು. ಎರಡುಮೂರು ತಾಲೂಕುಗಳಿಗೆ ಒಬ್ಬ ಉಪವಿಭಾಗಾಧಿಕಾರಿ ಇರುವುದರಿಂದ ಎಲ್ಲ ಸಮಯದಲ್ಲಿ ಅವರು ಲಭ್ಯವಾಗುವುದಿಲ್ಲ. ಅವರಿಗೆ ಅರ್ಜಿ ನೀಡಿ, ಸಹಿ ಪಡೆಯಲು ಎರಡು ದಿವಸ ಬೇಕು. ಇಲ್ಲವಾದರೆ ಲಕ್ಷಾಂತರ ರೂಪಾಯಿ ಹಣ ಕೊಟ್ಟು ಚಿಕಿತ್ಸೆ ಪಡೆಯಬೇಕಾಗುತ್ತದೆ. ಸುಟ್ಟ ಗಾಯಗಳಿಂದ ನರಳುತ್ತಿದ್ದ ವ್ಯಕ್ತಿಯೊಬ್ಬರನ್ನು ತುರ್ತು ದಕ್ಷಿಣ ಕನ್ನಡದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೊತೆಗೆ ಹೋಗುವವರು ನಿನ್ನೆ ಸಂಜೆಯೊಳಗೆ ಸ್ಥಳೀಯ ಆಸ್ಪತ್ರೆಯ ಪತ್ರ ತರುವಂತೆ ಹೇಳಿದ್ದರು.  ದಕ್ಷಿಣ ಕನ್ನಡಕ್ಕೆ ಹೋಗಲು ಪರವಾನಗಿ ಕೊಡಲು ಬೆಳಗ್ಗೆ ಅರ್ಜಿ ಕೊಟ್ಟರೂ ಸಂಜೆಯ ತನಕ ಪರವಾನಗಿ ಸಿಗಲಿಲ್ಲ. ಶಾಸಕರಿಂದ ಹೇಳಿಸಿದ ಮೇಲೆ ರಾತ್ರಿ 8ಕ್ಕೆ ಸಿಕ್ಕ ಪರವಾನಗಿ ಹಿಡಿದುಕೊಂಡು ಇಬ್ಬರು ಬೈಕ್‌ನಲ್ಲಿ ಹೋಗಿ ಕೊಟ್ಟು ಬರಲು ಪೆಟ್ರೋಲಿಗೆ ಮತ್ತೆ ಪರವಾನಗಿ ಪಡೆಯಬೇಕಾಯಿತು.

ಆಯುಷ್ಮಾನ್‌ ನಿರ್ದೇಶಕರು ಮತ್ತು ಆಸ್ಪತ್ರೆಗಳು ಇ-ಮೇಲ್‌ ಅಥವಾ ವಾಟ್ಸ್‌ ಆ್ಯಪ್‌ ಮುಖಾಂತರ ದಾಖಲೆ ಪಡೆಯಬೇಕು. ನಿತ್ಯ ಇಂತಹ ದೂರುಗಳು ದಾಖಲಾಗುತ್ತಿವೆ. ಸಹಾಯವಾಣಿಯಲ್ಲಿ ಇದಕ್ಕೆ ಪರಿಹಾರ ಸಿಗುವುದಿಲ್ಲ. ತರಕಾರಿ ಮತ್ತು ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯ ಕುರಿತು ನಿತ್ಯ ಇಂತಹ ದೂರುಗಳು ದಾಖಲಾಗುತ್ತವೆ.

ಆಯುಷ್ಮಾನ್‌ ಫಲಾನುಭವಿಗಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪತ್ರಿಕೆಗಳಿಗೆ ಹೇಳಿಕೊಳ್ಳುತ್ತಿದ್ದಾರೆ. ಜಿಲ್ಲೆಯ ಶಾಸಕರು ಮತ್ತು ಮಂತ್ರಿಗಳು ಕೂಡಲೇ ಇದನ್ನು ನಿವಾರಿಸಿಕೊಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next