ಅಮೀನಗಡ: ಪ್ರವಾಸೋದ್ಯಮ ಅಭಿವೃದ್ಧಿ ಹೊಂದುವಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಪ್ರವಾಸಿ ಮಾರ್ಗದರ್ಶಿಗಳಿಗೆ (ಗೈಡ್ಸ್) ಕೋವಿಡ್ 19 ದೊಡ್ಡ ಹೊಡೆತ ನೀಡಿದೆ. ಇತಿಹಾಸದ ಜ್ಞಾನ ಮತ್ತು ಮಾತನ್ನೇ ಬಂಡವಾಳವಾಗಿಸಿಕೊಂಡು ಸ್ವಾಭಿಮಾನದ ಜೀವನ ಸಾಗಿಸಲು ಗೈಡ್ಸ್ ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಬದುಕು ಕಟ್ಟಿಕೊಂಡವರ ಬದುಕು ಆರ್ಥಿಕವಾಗಿ ಅತಂತ್ರವಾಗಿದೆ.
ಸಂಕಷ್ಟದಲ್ಲಿ ಗೈಡ್‌ಗಳು: ಪ್ರವಾಸಿ ತಾಣಗಳಲ್ಲಿ ಮೂಲಭೂತ ಸಮಸ್ಯೆಗಳಿಂದ ಬಾದಾಮಿ, ಪಟ್ಟದಕಲ್ಲ, ಐಹೊಳೆಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಪ್ರವಾಸಿ ಮಾರ್ಗದರ್ಶಿಗಳ ಬದುಕು ನಡೆಯುವುದೇ ಕಷ್ಟವಾಗಿದೆ. ಇದರ ನಡುವೆ ಕಳೆದ ಆಗಸ್ಟ್‌ನಲ್ಲಿ ಮಲಪ್ರಭಾ ನದಿಯ ಪ್ರವಾಹದಿಂದ ಪ್ರವಾಸಿಗರ ಸಂಖ್ಯೆ ಬಹುತೇಕ ಕಡಿಮೆಯಾಗಿದೆ. ಈಗ ಕೋವಿಡ್ 19 ಭೀತಿಯಿಂದಾಗಿ ಸರ್ಕಾರ ಮುಂಜಾಗ್ರತ ಕ್ರಮವಾಗಿ ಪ್ರವಾಸೋದ್ಯಮಕ್ಕೆ ಸಂಪೂರ್ಣವಾಗಿ ನಿರ್ಬಂಧ ಹೇರಿದೆ. ಪ್ರವಾಸಿಗರ ಮೇಲೆ ಅವಲಂಬಿತವಾಗಿ ಬದುಕು ಕಟ್ಟಿಕೊಂಡ ಪ್ರವಾಸಿ ಮಾರ್ಗದರ್ಶಿಗಳ ಬದುಕು ಸಂಕಷ್ಟದಲ್ಲಿದ್ದಾರೆ.
ನಂಬಿದ ವೃತ್ತಿಗೂ ಕುತ್ತು: ವಿಶ್ವ ದರ್ಜೆಯ ಪ್ರವಾಸಿ ತಾಣ ಪಟ್ಟದಕಲ್ಲ, ವಿಶ್ವದ ಗಮನ ಸೆಳೆದ ಬಾದಾಮಿ ಪ್ರವಾಸಿ ತಾಣ, ಭಾರತೀಯ ದೇವಾಲಯಗಳ ತೊಟ್ಟಿಲು ಖ್ಯಾತಿಯ ಐಹೊಳೆಯ ರಾಷ್ಟ್ರೀಯ ಪ್ರವಾಸಿ ತಾಣಗಳ ವ್ಯಾಪ್ತಿಯಲ್ಲಿ ಸುಮಾರು 25 ಪ್ರವಾಸಿ ಮಾರ್ಗದರ್ಶಿಗಳು ಸೇವೆ ಸಲ್ಲಿಸುತ್ತಾರೆ. ಆದರೆ, ಪ್ರವಾಸಿ ಗೈಡ್ ಉದ್ಯೋಗವನ್ನು ನಂಬಿ ಬದುಕು ಕಟ್ಟಿಕೊಂಡ ಪ್ರವಾಸಿ ಮಾರ್ಗದರ್ಶಿಗಳಿಗೆ ಸತತ ಸಮಸ್ಯೆಗಳು ಕುಟುಂಬ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ.
ಆರ್ಥಿಕ ಸಹಕಾರಕ್ಕೆ ಆಗ್ರಹ: ಪ್ರವಾಸಿ ಗೈಡ್ ಗಳಲ್ಲಿ ಬಹುತೇಕ ಜನ ಪ್ರವಾಸಿಗರ ಮೇಲೆ ಅವರ ಬದುಕು ನಿಂತಿದೆ. ದಿನನಿತ್ಯ ಬರುವ ಆದಾಯದಿಂದ ಅವರ ಕುಟುಂಬಗಳು ನಡೆಯುತ್ತಿವೆ. ಈ ಭಾಗದ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಫೀ ಹೆಚ್ಚಾಗಿ ನೀಡಿದರೂ ಕೂಡಾ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯವಿಲ್ಲ ಇದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ. ಇಂತಹ ಸಂದರ್ಭದಲ್ಲಿ ಪ್ರವಾಹ ಮತ್ತು ಕೋವಿಡ್ 19 ಭೀತಿಯಿಂದ ಗೈಡ್‌ಗಳ ಪರಿಸ್ಥಿತಿ ದುಸ್ತರವಾಗಿದೆ. ಪ್ರವಾಸಿ ಗೈಡ್ ಗಳಿಗೆ ಆರ್ಥಿಕವಾಗಿ ಸಹಕಾರ ನೀಡಬೇಕು ಎಂಬುದು ಪ್ರವಾಸಿ ಗೈಡ್‌ಗಳ ಆಗ್ರಹ.
ಪ್ರವಾಸಿ ತಾಣಗಳಲ್ಲಿ ಪ್ರವಾಸಿ ಗೈಡ್‌ಗಳು ಪ್ರವಾಸಿಗರಿಗೆ ಗೈಡ್ ಮಾಡುವ ಉದ್ಯೋಗ ಬಿಟ್ಟು ಬೇರೆ ಉದ್ಯೋಗ ಗೊತ್ತಿಲ್ಲ. ದಿನನಿತ್ಯ ಮಾಡುವ ಉದ್ಯೋಗದಿಂದ ನಮ್ಮ ಕುಟುಂಬಗಳು ನಡೆಯುತ್ತವೆ. ಈಗ ಕೊರೊನಾ ವೈರಸ್ ನಮ್ಮ ಜೀವನಕ್ಕೆ ಆರ್ಥಿಕವಾಗಿ ಹೊಡೆತ ಬಿದ್ದಿದೆ.
ಅಶೋಕ ಮಾಯಾಚಾರಿ, ರಮೇಶ ಭಜಂತ್ರಿ, ಜಗದೀಶ ಹೊಸಮನಿ, ಶಿವಾನಂದ ಹೂಗಾರ, ಪ್ರವಾಸಿ ಮಾರ್ಗದರ್ಶಿಗಳು
-ಎಚ್.ಎಚ್.ಬೇಪಾರಿ