ಧಾರವಾಡ: ಲಾಕ್‌ಡೌನ್ ಜಾರಿಯಾದ ದಿನದಿಂದಲೇ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿದ್ದ ಟೈಲರ್‌ಗಳ ಬದುಕು ಅಕ್ಷರಶ: ಮೂರಾಬಟ್ಟೆಯಾಗಿದೆ. ಭಾವಸಾರ ಕ್ಷತ್ರಿಯ ಸಮಾಜ ಹಾಗೂ ತಮ್ಮ ಜೀವನಾಧಾರಕ್ಕಾಗಿ ಬಟ್ಟೆ ಹೊಲಿಯುವುದನ್ನು ಅವಲಂಬಿಸಿರುವ ಇನ್ನಿತರ ಸಮುದಾಯದ ಜನರು ಆದಾಯವಿಲ್ಲದೇ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆರ್ಥಿಕವಾಗಿ ತಕ್ಕಮಟ್ಟಿಗೆ ಇರುವವರು ನಿರಾಳವಾಗಿದ್ದರೆ, ಇನ್ನೂ ಕೆಲವರು ತಮ್ಮಲ್ಲಿರುವ ಬಟ್ಟೆಯನ್ನು ಹೊಲಿದು ಉಚಿತವಾಗಿ ಹಂಚುವ ಮೂಲಕ ಸಾಮಾಜಿಕ ಜವಾಬ್ದಾರಿ ಮೆರೆಯುತ್ತಿದ್ದಾರೆ. ಆದರೆ, ಬಾಡಿಗೆ ಕಟ್ಟಡದಲ್ಲಿ, ಬಟ್ಟೆ ಅಂಗಡಿಯ ಕಟ್ಟೆಯ ಮೇಲೆ ವೃತ್ತಿ ನಡೆಸುತ್ತಿದ್ದವರ ಬದುಕೀಗ ಮುಳ್ಳಿನ ಹಾಸಿಗೆಯಂತಾಗಿದೆ.
ಜಿಲ್ಲಾದ್ಯಂತ ಸುಮಾರು 8-10 ಸಾವಿರಕ್ಕೂ ಹೆಚ್ಚು ಕುಟುಂಬಗಳು ಬಟ್ಟೆ ಹೊಲಿಯುವ ಕಾಯಕ ನಂಬಿ ಬದುಕಿನ ಬಂಡಿ ಸಾಗಿಸುತ್ತಿದ್ದಾರೆ. ಬಾಡಿಗೆ ಕಟ್ಟಡದಲ್ಲಿರುವವರಿಗೆ ಬಟ್ಟೆ ಹೊಲಿಸಲು ಯಾರೂ ಬರದಿರುವುದರಿಂದ ಬಾಡಿಗೆ ಕಟ್ಟುವುದು, ಜೀವನ ಸಾಗಿಸುವುದು ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಕೈ ತುಂಬಾ ಕೆಲಸವಿರುವ ಈ ಸಂದರ್ಭದಲ್ಲಿ ಕೋವಿಡ್ 19 ಸೋಂಕಿನ ಭೀತಿಯಲ್ಲಿ ಮದುವೆ, ಗೃಹ ಪ್ರವೇಶ ಸೇರಿದಂತೆ ಮತ್ತಿತರ ಶುಭ ಸಮಾರಂಭಗಳು ರದ್ದಾಗಿರುವುದು ಹಾಗೂ ಹಬ್ಬಗಳ ಆಚರಣೆಗಳು ಸರಳಗೊಂಡಿರುವುದರಿಂದ ಬಟ್ಟೆ ಹೊಲಿಸಲು ಯಾರು ಬರುತ್ತಿಲ್ಲ. ಹೀಗಾಗಿ ಗಂಟೆಗಳ ಲೆಕ್ಕ ಹಾಕುತ್ತಾ ದಿನಗಳನ್ನು ದೂಡುವುದೇ ದುಡಿಮೆ ಎಂಬಂತಾಗಿದೆ.
ಟೈಲರ್‌ಗಳ ಮನೆಗೆ ಬಟ್ಟೆ ಹೊಲಿಯಲು ತಂದು ಕೊಟ್ಟರೂ ಅದನ್ನು ಹೊಲಿಯಲು ಬೇಕಾಗುವ ಮ್ಯಾಚಿಂಗ್ ದಾರ, ಕ್ಯಾನ್‌ವಾಸ್, ಗುಂಡಿ (ಬಟನ್) ಜಿಪ್, ರವಿಕೆಗೆ ಲೈನಿಂಗ್ ಮತ್ತಿತರ ಸಾಮಗ್ರಿಗಳು ಬೇಕು. ಇವೆಲ್ಲವನ್ನೂ ಮಾರಾಟ ಮಾಡುತ್ತಿದ್ದ ಅಂಗಡಿಗಳ ಬಾಗಿಲು ಹಾಕಿರುವುದರಿಂದ ಲಭಿಸುತ್ತಿಲ್ಲ ಎಂಬುದು ವೃತ್ತಿ ಅವಲಂಬಿಸಿರುವವರ ಅಳಲು.
ಈಗ ಬೇಡ, ಮುಂದೆ ನೋಡೋಣ : ಈ ಹಿಂದೆ ಬಟ್ಟೆ ಹೊಲಿಸಲು ಹಾಕಿದ್ದ ಗ್ರಾಹಕರ ಬಟ್ಟೆ ಸಿದ್ಧವಾಗಿವೆ. ಆದರೆ, ಅವುಗಳನ್ನು ದುಡ್ಡು ಕೊಟ್ಟು ಬಿಡಿಸಿಕೊಂಡು ಹೋಗಲು ಗ್ರಾಹಕರಿಗೆ ಬರಲಾಗುತ್ತಿಲ್ಲ, ನಾವೇ ತಂದು ಕೊಡುತ್ತೇವೆ ಎಂದರೂ ಗ್ರಾಹಕರು ಇದೀಗ ಬಟ್ಟೆಯ ಅವಸರವಿಲ್ಲ, ಕೋವಿಡ್ 19
ಹಾವಳಿ ಮುಗಿದ ಮೇಲೆ ನಾವೇ ಬಂದು ಬಿಡಿಸಿಕೊಳ್ಳುತ್ತೇವೆ ಎನ್ನುತ್ತಿರುವುದು ಟೈಲರ್‌ಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಮದುವೆ, ಶುಭ ಸಮಾರಂಭ ರದ್ದಾಗಿರುವ ಕಾರಣ ಬಟ್ಟೆ ಹೊಲಿಸಲು ಯಾರೂ ಬರುತ್ತಿಲ್ಲ. ಮನೆಯಲ್ಲಿಯೇ ಈ ವೃತ್ತಿ ಆರಂಭಿಸಿದವರ ಸ್ಥಿತಿ ಹೇಳತೀರದಾಗಿದೆ. ಸಂಘಟಿತ ವಲಯದ ಕಾರ್ಮಿಕರಿಗೆ ನೀಡಿರುವ ಸೌಲಭ್ಯವನ್ನು ಟೈಲರ್ ಗಳಿಗೂ ವಿಸ್ತರಿಸಬೇಕು. ಈ ವೃತ್ತಿ ಅವಲಂಬಿಸಿರುವವರಿಗೆ ಸಹಾಯಧನವನ್ನೂ ನೀಡಬೇಕು. –
ಮಹಾದೇವಿ ನೀಲವಾಣಿ, ಟೈಲರ್
ಲಾಕ್‌ಡೌನ್‌ನಿಂದಾಗಿ ಪೇಟೆಯಲ್ಲಿರುವ ಅಂಗಡಿ ತೆರೆಯದಂತೆ ಆಗಿದ್ದು, ಈ ಹಿಂದೆಯೇ ಹೊಲಿದಿಟ್ಟಿದ್ದ ಬಟ್ಟೆಗಳನ್ನು ಸಹ ತೆಗೆದುಕೊಂಡು ಹೋಗಲು ಜನ ಬರುತ್ತಿಲ್ಲ. ಮನೆಯಲ್ಲೇ ಕೆಲಸ ಆರಂಭಿಸಬೇಕೆಂದರೆ ಹೊಸ ಬಟ್ಟೆ ಹೊಲಿಸುವವರೂ ಯಾರೂ ಇಲ್ಲದಂತಾಗಿದೆ. –
ಉಳವಪ್ಪಾ ಕೋಟೂರ, ಟೈಲರ್, ಉಪ್ಪಿನಬೆಟಗೇರಿ
-ಶಶಿಧರ ಬುದ್ನಿ