ಧಾರವಾಡ: ಬಳಪವೇ ಮೂಡದ ಕ್ಲಾಸಿನ ಫಲಕಗಳು, ಬೋಧನೆಯ ಸದ್ದೇ ಇಲ್ಲದೆ ನೀರವ ಮೌನಕ್ಕೆ ಶರಣಾಗಿರುವ ಕೋಚಿಂಗ್ ಸೆಂಟರ್‌ಗಳು, ಬೀಕೋ ಎನ್ನುತ್ತಿರುವ ಟ್ಯೂಶನ್ ಕ್ಲಾಸುಗಳು, ಒಂದೆಡೆ ಕಟ್ಟಿಕೊಂಡ ಕನಸು, ಇನ್ನೊಂದೆಡೆ ಆತಂಕ. ಒಟ್ಟಿನಲ್ಲಿ ಐಎಎಸ್, ಕೆಎಎಸ್ ಕನಸು ಹೊತ್ತು ಬಂದವರನ್ನು ಮಂಡಿಯೂರಿಸಿ ಮನೆಗೆ ಕಳುಹಿಸಿದ ಕೋವಿಡ್ 19 ಭಯ.
ಹೌದು…, ವಿದ್ಯಾಕಾಶಿ ಧಾರವಾಡಕ್ಕೆ ವಿದ್ಯಾಭ್ಯಾಸಕ್ಕಾಗಿ ಹೊರಗಿನ ಜಿಲ್ಲೆಗಳಿಂದ ಬಂದಿದ್ದ 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಕೊನೆಗೂ ಕೊರೊನಾ ಮುನ್ನೆಚ್ಚರಿಕೆ ಪಾಲಿಸಲು ಅನಿವಾರ್ಯವಾಗಿ ತಮ್ಮ ಊರುಗಳಿಗೆ ತೆರಳಿದ್ದಾರೆ. ಇಲ್ಲಿನ ಸಪ್ತಾಪುರ, ಜಯನಗರ, ಶಿವಗಿರಿ, ಬಾರಾಕುಟ್ರಿ, ಮಾಳಮಡ್ಡಿ, ಉಳವಿ ಚೆನ್ನಬಸವೇಶ್ವರ ನಗರ ಸೇರಿದಂತೆ ಸುತ್ತಲಿನ ಪ್ರದೇಶಗಳಲ್ಲಿ ಪಿಜಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಇದೀಗ ತೀವ್ರ ಆತಂಕಕ್ಕೆ ಒಳಗಾಗಿ ಕೊನೆಗೆ ತಮ್ಮ ಕ್ಲಾಸುಗಳನ್ನೇ ಮೊಟಕುಗೊಳಿಸಿ ಊರುಗಳತ್ತ ಸಾಗಿದ್ದಾರೆ.
50 ಸಾವಿರ ವಿದ್ಯಾರ್ಥಿಗಳು ಒಂದೆಡೆ: ಕರ್ನಾಟಕ ವಿಶ್ವವಿದ್ಯಾಲಯದಿಂದ ಹಿಡಿದು ಹಿಂದಿ ಪ್ರಚಾರ ಸಭಾ ವರೆಗಿನ ಎರಡುಚದುರ ಕಿಮೀ ಪ್ರದೇಶದಲ್ಲಿ ಸುಮಾರು 150 ಪಿಜಿಗಳಿವೆ. ಇಲ್ಲಿ 23 ಸಾವಿರದಷ್ಟು ವಿದ್ಯಾರ್ಥಿನಿಯರಿದ್ದು ಅವರೆಲ್ಲರೂಐಎಎಸ್, ಕೆಎಎಸ್ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಹುದ್ದೆಗಳ ಪರೀಕ್ಷೆಗಳಿಗೆ ತರಬೇತಿ ಮತ್ತು ಕೋಚಿಂಗ್ ಪಡೆದುಕೊಳ್ಳುತ್ತಿದ್ದಾರೆ. ಕೋಚಿಂಗ್ ಕ್ಲಾಸ್‌ಗಳು ಸಪ್ತಾಪುರದಲ್ಲಿ ಮಾತ್ರ ಇದ್ದು, ದಿನದ 12 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದವು. ಅವು ಕೂಡ ವರ್ಗೀಕರಿಸಿದ ಸಮಯಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಇಲ್ಲಿ ತರಬೇತಿಗೆ ಬರುತ್ತಿದ್ದು, ಕೋವಿಡ್19 ವೈರಸ್‌ಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅಗತ್ಯ ಎನ್ನುವ ಸರ್ಕಾರದ ಮುಂಜಾಗೃತಾ ಕ್ರಮಕ್ಕೆ ಎಲ್ಲರೂ ಒಪ್ಪಿಕೊಂಡು ನಿನ್ನೆಯಿಂದಲೇ ಕೋಚಿಂಗ್ ಕ್ಲಾಸ್‌ಗಳಿಗೆ ಬೀಗ ಜಡಿದಿದ್ದಾರೆ.
ಥ್ರಿಬಲ್‌ಬೆಡ್ ಪಿಜಿಗಳು: ಇನ್ನು ಜನತಾ ಕರ್ಫ್ಯೂ ನಂತರ ಮತ್ತೆ ಕ್ಲಾಸುಗಳು ಪುನರಾರಂಭಗೊಳ್ಳುತ್ತವೆ ಎಂದು ನಂಬಿದ್ದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಅವರೆಲ್ಲರೂ ಕೂಡ ಇದೀಗ ತಮ್ಮ ಊರುಗಳಿಗೆ ಮರಳಬೇಕಿದೆ. ಕಳೆದ ಎರಡು ದಿನಗಳಿಂದ ಅವರೆಲ್ಲ ಪಿಜಿಯಲ್ಲಿಯೇ ಕುಳಿತುಕೊಂಡಿದ್ದಾರೆ. ಪಿಜಿ ಮಾಲೀಕರಿಗೂ ಆತಂಕವಿದ್ದು, ಕೋವಿಡ್ 19 ವೈರಸ್‌ಗೆ ಸಾಮಾಜಿಕ ಅಂತರ ಅತ್ಯಂತ ಅಗತ್ಯವಾಗಿದೆ. ಆದರೆ ಇಲ್ಲಿ ಒಂದೊಂದು ಪಿಜಿ ಮನೆಗಳಲ್ಲಿ 40-50 ವಿದ್ಯಾರ್ಥಿಗಳು ಇರುವ ಉದಾಹರಣೆ ಯೂ ಉಂಟು.
ಹೀಗಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪಿಜಿಗಳಲ್ಲಿ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಎರಡೆರಡು ಅಡಿ ಅಂತರದಲ್ಲಿ ರೈಲ್ವೆ ಸ್ಲಿಪರ್ ಕೋಚ್ ಮಾದರಿಯಲ್ಲಿಯೇ ಪಿಜಿಗಳಲ್ಲಿ ಬೆಡ್‌ಗಳಿದ್ದು, ವೈರಸ್ ಸೊಂಕು ತಗುಲಿದರೆ ದೊಡ್ಡ ಅನಾಹುತ ಸಂಭವಿಸುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಹೆದರಿ ಕಂಗಾಲಾಗಿರುವ ಪಿಜಿ ಮಾಲೀಕರು ವಿದ್ಯಾರ್ಥಿನಿಯರ ಪೋಷಕರಿಗೆ ಕರೆ ಮಾಡಿ ಅವರನ್ನು ಊರುಗಳಿಗ ಮರಳಿ ಕರೆದುಕೊಂಡು ಹೋಗುವಂತೆ ಕೇಳಿದ್ದಾರೆ.
ಮನೆಗೆ ಮರಳಲು ಹರಸಾಹಸ: ಈಗಾಗಲೇ ಕೋಚಿಂಗ್ ಕ್ಲಾಸ್‌ಗಳಿಗೆ ಹಣ ತುಂಬಿ ಪಿಜಿಗಳಲ್ಲಿ ವಾಸವಾಗಿರುವ ವಿದ್ಯಾರ್ಥಿಗಳು ಕೋವಿಡ್ 19 ಜನತಾ ಕರ್ಫ್ಯೂನಿಂದಾಗಿ ಕಂಗಾಲಾಗಿದ್ದಾರೆ. ಓದಲು ಬಂದ ವಿದ್ಯಾರ್ಥಿಗಳ ಪೈಕಿ 28 ಸಾವಿರದಷ್ಟು ಜನ ಉತ್ತರ ಕರ್ನಾಟಕದ ಬೀದರ್, ಕಲಬುರಗಿ, ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ, ಹಾವೇರಿ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗೆ ಸೇರಿದವರಾಗಿದ್ದಾರೆ.
ಕಲಬುರಗಿ ಮತ್ತು ವಿಜಯಪುರದಲ್ಲಿ ಕೋವಿಡ್ 19 ಪ್ರಕರಣಗಳು ಪತ್ತೆಯಾದಾಗ ತಾವು ಧಾರವಾಡದಲ್ಲಿಯೇ ಇರುವುದು ಸೂಕ್ತ ಎಂದುಕೊಂಡಿದ್ದ ವಿದ್ಯಾರ್ಥಿಗಳಿಗೆ ಇದೀಗ ಧಾರವಾಡದಲ್ಲಿಯೂ ಕೋವಿಡ್ 19 ಸೊಂಕಿರುವುದು ಪತ್ತೆಯಾಯಾಗಿದ್ದರಿಂದ ಆತಂಕಕ್ಕೆ ಒಳಗಾಗಿ ಮರಳಿ ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿದ್ದಾರೆ. ಆದರೆ ಸಾರಿಗೆ ವ್ಯವಸ್ಥೆ ಸಂಪೂರ್ಣ ಬಂದ್ ಆಗಿದ್ದರಿಂದ ವಿದ್ಯಾರ್ಥಿಗಳು ಬಾಡಿಗೆ ಕೊಣೆಗಳಲ್ಲಿಯೇ ಅನಿವಾರ್ಯವಾಗಿ ಉಳಿದುಕೊಂಡಿದ್ದಾರೆ.
ಕೋವಿಡ್ 19 ವೈರಸ್‌ನ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಜಿಲ್ಲಾಡಳಿತ ಮಾಡಿದ ಮನವಿಗೆ ನಾವು ಸ್ಪಂದಿಸಿದ್ದೇವೆ. ಹೀಗಾಗಿ ನಮ್ಮ ಕೋಚಿಂಗ್ ಸೆಂಟರ್ ಗಳನ್ನು ಮುಚ್ಚಿದ್ದು, ಸರ್ಕಾರದ ಮುಂದಿನ ಆದೇಶ ಬರುವ ವರೆಗೂ ಕ್ಲಾಸ್‌ಗಳನ್ನು ನಡೆಸುತ್ತಿಲ್ಲ.
–ಬಸವರಾಜ ಅಳಗವಾಡಿ, ಕೋಚಿಂಗ್ ಸೆಂಟರ್ ಮುಖ್ಯಸ
–ಬಸವರಾಜ ಹೊಂಗಲ್