ಮಂಗಳೂರು: ಕೋವಿಡ್-19 ಸೋಂಕು ವಿಶ್ವದಾದ್ಯಂತ ಹಬ್ಬುತ್ತಿದ್ದು, ಪ್ರಪಂಚದ ವ್ಯವಹಾರಗಳು ನೆಲಕಚ್ಚಿದೆ. ದೇಶದಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಜನರು ಮನೆಯೊಳಗೆ ಇರುವಂತೆ ಸೂಚಿಸಲಾಗಿದೆ. ರಾಜ್ಯದಲ್ಲಿ ಎಲ್ಲಾ ಜಾತ್ರೆ, ಸಭೆ- ಸಮಾರಂಭಗಳು ರದ್ದಾಗಿದೆ. ಇದನ್ನೇ ಅವಲಂಬಿತವಾಗಿರುವ ಸಾಕಷ್ಟು ವ್ಯಾಪಾರ ವ್ಯವಹಾರಗಳು ಸಂಕಷ್ಟ ಅನುಭವಿಸಿದೆ.
ಕೋವಿಡ್-19 ಸೋಂಕಿನ ಕಾರಣದಿಂದ ವಿಜೃಂಬಣೆಯಿಂದ ನಡೆಯಬೇಕಿದ್ದ ಪೊಳಲಿ ರಾಜರಾಜೇಶ್ವರಿ ಅಮ್ಮನವರ ಉತ್ಸವ ರದ್ದಾಗಿದೆ. ಪೊಳಲಿ ಚೆಂಡು ಎಷ್ಟು ಪ್ರಸಿದ್ದವೋ ಅಷ್ಟೇ ಪ್ರಸಿದ್ದಿ ಪಡೆದಿರುವುದು ಪೊಳಲಿ ಕಲ್ಲಂಗಡಿ. ಪೊಳಲಿ ಜಾತ್ರೆಗಾಗಿಯೇ ಇಲ್ಲಿ ರೈತರು ಎಕರೆಗಟ್ಟಲೆ ಪ್ರದೇಶದಲ್ಲಿ ಕಲ್ಲಂಗಡಿ ಬೆಳೆಯುತ್ತಿದ್ದು, ಈ ವರ್ಷ ಜಾತ್ರೆಯಿರದೆ ಕಷ್ಟ ಅನುಭವಿಸಿದ್ದಾರೆ.
ಪೊಳಲಿ ಜಾತ್ರೆಗಾಗಿಯೇ ಕಲ್ಲಂಗಡಿ ಬೆಳೆದು ಮಾರುವ ಇಲ್ಲಿನ ರೈತ ಪ್ರವೀಣ್ ಈ ವರ್ಷ ಕಲ್ಲಂಗಡಿ ಕೊಳ್ಳಲು ಜನರಿಲ್ಲದೆ ಕೊಳೆಯುವ ಭೀತಿಯಲ್ಲಿದ್ದಾರೆ. ಮೂರು ತಿಂಗಳು ಕಷ್ಟಪಟ್ಟು ಬಳೆದ ಕಲ್ಲಂಗಡಿ ಹಾಳಾಗಬಾರದು ಎಂದು ಪ್ರವೀಣ್ ಬೆಳೆದ ಹಣ್ಣನ್ನು ಮನೆಯಲ್ಲಿಯೇ ಮಾರಲು ಮುಂದಾಗಿದ್ದಾರೆ.
ಪ್ರವೀಣ್ ಅವರು ಕಳೆದ ಸುಮಾರು 40 ವರ್ಷಗಳಿಂದ ಪೊಳಲಿ ಜಾತ್ರೆಯಲ್ಲಿ ಕಲ್ಲಂಗಡಿ ಮಾರಾಟ ನಡೆಸಿಕೊಂಡು ಬರುತ್ತಿದ್ಧಾರೆ. ಆದರೆ ಈ ವರ್ಷ ಪೊಳಲಿ ಅಮ್ಮನ ಸನ್ನಿಧಿಯಲ್ಲಿ ಕಲ್ಲಂಗಡಿ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಬೇಸರ ಅವರದ್ದು. ಕೈಗೆ ಬಂದಿರುವ ಫಸಲು ಕೊಳೆತು ಹಾಳಾಗಬಾರದು ಎಂದು ಪ್ರವೀಣ್ ಮನೆಯಲ್ಲಿಯೇ ಹಣ್ಣು ಮಾರಾಟ ಮಾಡಲು ಮುಂದಾಗಿದ್ದಾರೆ.