ಧಾರವಾಡ: ಕೋವಿಡ್ 19 ಲಾಕ್‌ಡೌನ್‌ದಿಂದ ಬಿದಿರನ್ನೇ ನಂಬಿ ಬದುಕು ನಡೆಸುವ ಮೇದಾರ ಜನಾಂಗದವರು ಈಗ ಅತಂತ್ರರಾಗಿದ್ದಾರೆ. ಬಿದಿರು ಪೂರೈಕೆಯಿಲ್ಲದೇ ಇಡೀ ಜನಾಂಗ ಸಂಕಷ್ಟಕ್ಕೆ ಸಿಲುಕಿದ್ದು, ಕಾಯಕವಿಲ್ಲದೇ ಕೈಕಟ್ಟಿ ಕುಳಿತುಕೊಳ್ಳುವಂತಾಗಿದೆ. ಈಗಾಗಲೇ ಕಷ್ಟಪಟ್ಟು ಸಿದ್ಧಪಡಿಸಿದ ಬಿದಿರಿನ ವಸ್ತುಗಳು ಖರೀದಿಸುವವರಿಲ್ಲದೇ ಮನೆಯಲ್ಲೇ ಉಳಿದಿವೆ.
ಗುಡ್ಡವೇ ಪ್ರಮುಖ ಮಾರುಕಟ್ಟೆ: ಸವದತ್ತಿಯ ಯಲ್ಲಮ್ಮನಗುಡ್ಡದ ಜಾತ್ರೆಯೇ ಮೇದಾರ ಜನಾಂಗದವರ ಮಾರುಕಟ್ಟೆಯ ಮುಖ್ಯ ವೇದಿಕೆಯಾಗಿದೆ. ವರ್ಷದ 12 ತಿಂಗಳ ಪೈಕಿ 7-8 ದಿನ ಕಾಲ ಬಿದಿರಿನಿಂದ ಪಡ್ಡಲಗಿ ಸೇರಿದಂತೆ ವಿವಿಧ ವಸ್ತುಗಳನ್ನು ತಯಾರಿಸುವ ಈ ಜನಾಂಗವು ಜನವರಿ ತಿಂಗಳಿನಿಂದ ಅವುಗಳನ್ನು ಮಾರಲು ಯಲ್ಲಮ್ಮನಗುಡ್ಡನತ್ತ ಹೆಜ್ಜೆ ಹಾಕುತ್ತಾರೆ. ಅದರಲ್ಲೂ ದವನದ ಹುಣ್ಣಿಮೆಯಿಂದ ಅವುಗಳ ಮಾರಾಟ ಬಲು ಜೋರು. ಆದರೆ ಈ ಸಲ ಲಾಕ್‌ಡೌನ್ ಕಾರಣದಿಂದ ಯಲ್ಲಮನ ಗುಡ್ಡ ಬಂದ್ ಆಗಿರುವ ಕಾರಣ ತಯಾರಿಸಿದ ಪಡ್ಡಲಗಿ, ಬುಟ್ಟೆಗಳು ಮನೆಯಲ್ಲೇ ಉಳಿಯುವಂತಾಗಿದೆ.
ಬಿದಿರು ಪೂರೈಕೆ ಸ್ಥಗಿತ: ಒಂದು ಬಿದಿರಿಗೆ ಅದರ ಗಾತ್ರದ ಅನುಸಾರ 100-150 ರೂ.ಗಳ ಬೆಲೆಯಿದೆ. ಅದರನ್ವಯ ತಿಂಗಳಿಗೆ ಬೇಕಾದ ಬಿದಿರನ್ನು ವ್ಯಾಪಾರಸ್ಥರೇ ತಂದು ಕೊಡುತ್ತಾರೆ. ಆದರೀಗ ಲಾಕ್ ಡೌನ್ ಹಿನ್ನೆಲೆಯಿಂದ ಬಿದಿರಿನ ಪೂರೈಕೆ ಸ್ಥಗಿತಗೊಂಡ ಕಾರಣ ಈಗ ಸ್ಟಾಕ್ ಇರುವ ಬಿದಿರಿನ ಮೇಲೆಯೇ ಕಾಯಕ ನಡೆದಿದೆ. ಮೇ 3ನಂತರವೂ ಲಾಕ್ ಡೌನ್ ಮುಂದುವರಿದರೆ ಕಾಯಕ ಸಂಪೂರ್ಣ ಸ್ಥಗಿತಗೊಳ್ಳಲಿದೆ.
ಜಿಲೆಯಲ್ಲಿವೆ 1500ಕ್ಕೂ ಹೆಚ್ಚು ಕುಟುಂಬಗಳು: ಹುಬ್ಬಳ್ಳಿ-ಧಾರವಾಡ ಸೇರಿದಂತೆ ಜಿಲ್ಲೆಯಲ್ಲಿ 1500ಕ್ಕೂ ಹೆಚ್ಚು ಮೇದಾರದ ಸಮುದಾಯ ಕುಟುಂಬಗಳಿವೆ. ಆ ಪೈಕಿ ಉಪ್ಪಿನಬೆಟಗೇರಿ ಗ್ರಾಮದಲ್ಲಿಯೇ 50ಕ್ಕೂ ಹೆಚ್ಚು ಕುಟುಂಬಗಳಿವೆ. ಇದು ಬರೀ ಈ ಜಿಲ್ಲೆಯ ಕುಟುಂಬಗಳ ಪರಿಸ್ಥಿತಿಯಲ್ಲ ಬದಲಾಗಿ ರಾಜ್ಯದ ವಿವಿಧ ಭಾಗಗಳಲ್ಲಿರುವ ಮೇದಾರ ಜನಾಂಗದವರ ಈಗಿನ ಸಂಕಷ್ಟ ಪರಿಸ್ಥಿತಿಯಾಗಿದೆ.
ಸಂಕಷ್ಟದ ಸುಳಿ: ಬಿದಿರು ಪೂರೈಸುವ ವ್ಯಾಪಾರಸ್ಥರಿಗೆ ಸವದತ್ತಿ ಯಲ್ಲಮ್ಮನ ಜಾತ್ರೆ ಮುಗಿದ ಬಳಿಕವೇ ಹಣ ಸಂದಾಯ ಮಾಡುವ ಪದ್ಧತಿ ಮೊದಲನಿಂದಲೂ ಇದೆ. ಆದರೆ ಈ ಸಲ ಜಾತ್ರೆ ಇಲ್ಲದೇ ತಯಾರಿಸಿರುವ ಪಡ್ಡಲಗಿ, ಬುಟ್ಟೆಗಳು ಮನೆಯಲ್ಲೇ ಉಳಿದ ಕಾರಣ ಬಿದಿರು ಪೂರೈಸಿರುವ ವ್ಯಾಪಾರಸ್ಥರಿಗೆ ಹಣ ಹೇಗೆ ನೀಡಬೇಕೆಂಬ ಚಿಂತೆಯಲ್ಲಿದೆ ಮೇದಾರ ಜನಾಂಗ. ಇದನ್ನೇ ನಂಬಿ ಮದುವೆ ಸೇರಿದಂತೆ ಇನ್ನಿತರ ಶುಭ ಕಾರ್ಯಗಳಿಗೆ ಮಾಡಿರುವ ಸಾಲವನ್ನೂ ತೀರಿಸಲಾಗದೇ ಮೇದಾರ ಜನಾಂಗ ಸಂಕಷ್ಟದ ಸುಳಿಯಲ್ಲಿ ಸಿಲುಕುವಂತಾಗಿದೆ.
ಬಿದಿರು ಪೂರೈಕೆ ಸ್ಥಗಿತಗೊಂಡಿದ್ದು, ಜಾತ್ರಾ ಮಹೋತ್ಸವಕ್ಕಾಗಿ ಮಾಡಿದ ಪಡ್ಡಲಗಿ, ಬುಟ್ಟಿ ಸೇರಿದಂತೆ ಇತರೆ ವಸ್ತುಗಳು ಮಾರಾಟ ಆಗದೇ ಮನೆಯಲ್ಲೇ ಉಳಿಯುವಂತಾಗಿದೆ. ಇದರಿಂದ ಬಿದಿರು ಪೂರೈಕೆ ಮಾಡಿದ ವ್ಯಾಪಾರಸ್ಥರಿಗೆ ಹಣ ಕೊಡಲಾಗದ ಸ್ಥಿತಿ ಇದೆ. –
ಗಂಗಪ್ಪ ಮೇದಾರ
ಯಲ್ಲಮ್ಮನಗುಡ್ಡಕ್ಕೆ ಒಯ್ಯಲೆಂದು ತಯಾರಿಸಿದ ಪಡ್ಡಲಗಿ ಸೇರಿದಂತೆ ಇನ್ನಿತರ ವಸ್ತುಗಳು ಮಾರಾಟವಾಗದೇ ಹಾಗೇ ಉಳಿದಿವೆ. ಹೀಗಾಗಿ ಕೃಷಿ ಚಟುವಟಿಕೆಗಳಿಗೆ ಜಲ್ಲಿ ತಯಾರಿಸಿ ಜೀವನ ನಡೆಸುವಂತಾಗಿದೆ. ವರ್ಷವಿಡಿ ಕಷ್ಟಪಟ್ಟು ಮಾಡಿದ ವಸ್ತುಗಳನ್ನು ಮಾರದಂತಾಗಿದೆ. –
ದ್ರಾಕ್ಷಾಯಣಿ, ಮೇದಾರ ಜನಾಂಗದ ಮಹಿಳೆ.
–ಶಶಿಧರ್ ಬುದ್ನಿ