Advertisement

ಅದ್ಧೂರಿಗೆ ಅಡ್ಡಿ; ಸಂಭ್ರಮಕ್ಕೆ ಸುಗ್ಗಿ

05:14 PM Aug 22, 2020 | Suhan S |

ವಿಜಯಪುರ: ಕಳೆದ ಆರೇಳು ತಿಂಗಳಿಂದ ಜಿಲ್ಲೆಯಲ್ಲಿ ಅಬ್ಬರ ಸೃಷ್ಟಿಸಿರುವ ಕೋವಿಡ್‌-19 ಕೋವಿಡ್ ಸಾಂಕ್ರಾಮಿಕ ರೋಗದ ಕಾರಣಕ್ಕೆ ಪ್ರಸಕ್ತ ವರ್ಷದಲ್ಲಿ ಬಹುತೇಕ ಹಲವು ಹಬ್ಬಗಳು ಸರ್ಕಾರದ ನಿರ್ಬಂಧಗಳಿಂದಾಗಿ ಸಂಭ್ರಮವಿಲ್ಲದೇ ಮಕ್ತಾಯ ಕಂಡಿವೆ. ಈ ಹಂತದಲ್ಲೇ ಗಣೇಶ ಹಾಗೂ ಮೊಹರಂ ಹಬ್ಬಗಳು ಜಂಟಿಯಾಗಿ ಬಂದಿದೆ.

Advertisement

ಎರಡೂ ಹಬ್ಬಗಳ ಆಚರಣೆಗೆ ಸರ್ಕಾರ ವಿಧಿಸಿರುವ ಷರತ್ತು ಹಾಗೂ ನಿರ್ಬಂಧದ ಕಾರಣಕ್ಕೆ ಅದ್ಧೂರಿತನಕ್ಕೆ ಕೊರತೆ ಇದ್ದರೂ ಭಕ್ತರ ಸಂಭ್ರಮಕ್ಕೆ ಕೊನೆ ಇಲ್ಲವಾಗಿದೆ. ಪ್ರಸಕ್ತ ವರ್ಷ ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಪ್ರಮುಖವಾದ ಶಿವರಾತ್ರಿ, ಯುಗಾದಿ, ಪಂಚಮಿ, ಇಸ್ಲಾಂ ಧರ್ಮೀಯರ ಪ್ರಮುಖ ಪವಿತ್ರ ಹಬ್ಬಗಳಾದ ರಂಜಾನ್‌, ಬ್ರಕೀದ್‌ನಂಥ ದೊಡ್ಡ ಹಬ್ಬಗಳು ಕೋವಿಡ್‌ ಭಯದಿಂದಾಗಿ ಅದ್ಧೂರಿ ವಿಷಯದಲ್ಲಿ ಮಬ್ಬಾಗಿ ಹೋದವು. ಇದೀಗ ಭಾದ್ರಪದ ಮಾಸದಲ್ಲಿ ಬಂದಿರುವ ಗಣೇಶ ಹಬ್ಬಕ್ಕೂ, ಭಾವೈಕ್ಯ ಸಾರುವ ಮೊಹರಂಗೂ ಕೋವಿಡ್‌ ಕಾಟ ತಪ್ಪಿಲ್ಲ. ಈ ಮಧ್ಯೆ ಆ. 22ರಂದು ನಡೆಯಲಿರುವ ಗಣೇಶ ಹಬ್ಬದ ಆಚರಣೆಗೆ ಸರ್ಕಾರ ವಿಧಿಸಿರುವ ಹಲವು ನಿರ್ಬಂಧಗಳಿಂದಾಗಿ ಅದ್ಧೂರಿತನಕ್ಕೆ ಅವಕಾಶವಿಲ್ಲ. ಆದರೆ ಸರಳತೆಯಲ್ಲಿ ಸಂಭ್ರಮಕ್ಕೆ ಕೊನೆ ಇಲ್ಲದಂತೆ ಗಣೇಶ ಭಕ್ತರು ಹಬ್ಬ ಆಚರಣೆಗೆ ಸಿದ್ಧವಾಗಿದ್ದಾರೆ.

ಗಣೇಶ ಹಬ್ಬದ ಆಚರಣೆ ವಿಷಯವಾಗಿ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ. ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಪಡೆಯುವುದು ಕಡ್ಡಾಯ. ಮೆರವಣಿಗೆ ನಡೆಸುವಂತಿಲ್ಲ, ಧ್ವನಿವರ್ಧಕ ಬಳಕೆ, ಸಂಗೀತ ಕಾರ್ಯಕ್ರಮಗಳಂಥ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ನಿಷೇಧ ಹೇರಿದೆ. ಪ್ರಚೋದನಕಾರಿ ಹಾಡುಗಳನ್ನು ಹಾಕುವಂತಿಲ್ಲ. ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಸೇಶನ್‌ ವ್ಯವಸ್ಥೆ ಇರಬೇಕು. 20ಜನಕ್ಕಿಂತ ಹೆಚ್ಚಿನ ಜನರು ಒಂದೇ ಕಡೆ ಸೇರಬಾರದು ಎಂಬ ಷರತ್ತು ವಿಧಿಸಿದೆ.

ಪ್ರತಿಷ್ಠಾಪಿಸುವ ಗನೇಶ ಮೂರ್ತಿಗಳು ಪರಿಸರ ಸ್ನೇಹಿ ಮಣ್ಣಿನಿಂದ ಮಾಡಿರಬೇಕು. ಮನೆಗಳಲ್ಲಿ ಕೂಡಿಸುವ ಗಣೇಶ 2 ಅಡಿಗಿಂತ ಎತ್ತರ ಇರುವಂತಿಲ್ಲ. ಸಾರ್ವಜನಿಕ ಸಮಿತಿಗಳು ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳು 4 ಅಡಿ ಮೀರುವಂತಿಲ್ಲ. ಪೆಂಡಾಲ್‌ನಲ್ಲಿ ದಿನದ 24 ಗಂಟೆಯೂ ಕಾರ್ಯಕರ್ತರು ಇರಲೇಬೇಕು. ಸಿಸಿ ಟಿವಿ ಕ್ಯಾಮರಾ ಅಳವಡಿಸುವುದು ಕಡ್ಡಾಯ ಎಂಬ ಹಲವು ಷರತ್ತು ವಿಧಿಸಿ ಅನುಮತಿಸಿದೆ.

ಮತ್ತೂಂದೆಡೆ ಗಣೇಶ ಹಬ್ಬದ ಸಿದ್ಧತೆಗಾಗಿ ಹಣ್ಣು, ಹೂ ಸೇರಿದಂತೆ ವಿವಿಧ ಪೂಜಾ ಸಾಮಗ್ರಿಗಳ ಬೆಲೆ ಮುಗಿಲು ಮುಟ್ಟಿವೆ. ಗಣೇಶ ಹಬ್ಬಕ್ಕೆ ಮಾಡುವ ನೈವೇದ್ಯದ ಕಾಯಿ, ಕಡುಬು, ಹೋಳಿಗೆಗಳಂಥ ಸಿಹಿ ಖಾದ್ಯದ ತಯಾರಿಗೆ ಕಿರಾಣಿ ಸಾಮಗ್ರಿ ಖರೀದಿಯೂ ಜೋರಾಗಿದೆ. ಇನ್ನು ಹಿಂದೂ-ಮುಸ್ಲಿಂ ಸಮುದಾಯಗಳು ಜಂಟಿಯಾಗಿ ಸಂಭ್ರಮದಿಂದ ಆಚರಿಸುವ ಮೊಹರಂ ಕೂಡ ಆಗಸ್ಟ್‌ ತಿಂಗಳಲ್ಲೇ ಬಂದಿದೆ. ಆ. 21ರಿಂದ ಮೊಹರಂ ಆರಂಭಗೊಳ್ಳಲಿದ್ದು, 30ರಂದು ಮೊಹರಂ ಹಬ್ಬದಲ್ಲಿ ಪ್ರತಿಷ್ಠಾಪಿಸಿದ ಪೀರಾ ದೇವರುಗಳು ಆ. 30ರಂದು ಹೊಳೆಗೆ ಹೋಗುವ ಕೊನೆ ದಿನ. ಈ ಹಬ್ಬವನ್ನು ಕೂಡ ಸಮಾಜದಲ್ಲಿ ಶಾಂತಿ ಕದಡದಂತೆ ಎಲ್ಲ ಸಮುದಾಯಗಳು ಸೌಹಾರ್ದಯುತವಾಗಿ ಆಚರಿಸುವಂತೆ ಸರ್ಕಾರ ಹಾಗೂ ಜಿಲ್ಲಾಡಳಿತ ಸಾರ್ವಜನಿಕರಿಗೆ ಸಲಹೆ, ಸೂಚನೆ ನೀಡಿದೆ. ಹೀಗೆ ಹಲವು ಷರತ್ತು ಹಾಗೂ ನಿರ್ಬಂಧದ ಮಧ್ಯೆಯೂ ಗಣೇಶ ಹಾಗೂ ಮೊಹರಂ ಹಬ್ಬಗಳು ಅದ್ಧೂರಿತನಕ್ಕೆ ಕೊರತೆ ಇದ್ದರೂ ಸಂಭ್ರಮಕ್ಕೆ ಮಿತಿ ಇಲ್ಲದಂತೆ ಸರಳ ರೀತಿಯಲ್ಲಿ ಆಚರಿಸಲು ಜಿಲ್ಲೆಯ ಜನರು ಸಿದ್ಧವಾಗಿದ್ದಾರೆ.

Advertisement

ಗಣೇಶ ಹಾಗೂ ಮೊಹರಂ ಆಚರಣೆಗೆ ಸರ್ಕಾರ ರೂಪಿಸಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವ ಮೂಲಕ ಜಿಲ್ಲೆಯ ಜನರು ಸೌಹಾರ್ದಯುತವಾಗಿ ಹಬ್ಬ ಆಚರಿಸಿ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಮಾರ್ಗಸೂಚಿ ಹೊರತಾಗಿ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಅನಿವಾರ್ಯ. -ಪಿ.ಸುನೀಲಕುಮಾರ ಜಿಲ್ಲಾಧಿಕಾರಿ, ವಿಜಯಪುರ

 ಗಣೇಶ ಉತ್ಸವ ಹಾಗೂ ಮೊಹರಂ ಹಬ್ಬ ವನ್ನು ಪ್ರತಿಯೊಬ್ಬರೂ ತಮ್ಮ ಭಕ್ತಿ ಶ್ರದ್ಧೆ ಮೂಲಕ ಆಚರಿಸಲು ಸರ್ಕಾರ ನೀಡಿರುವ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಷರತ್ತು ಉಲ್ಲಂಘಿಸಿದವರ ವಿರುದ್ಧ ಪೊಲೀಸ್‌ ಇಲಾಖೆ ಪ್ರಕೃತಿ ವಿಕೋಪ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆಯಂತೆ ಪ್ರಕರಣ ದಾಖಲಿಸಲಿದೆ. -ಅನುಪಮ್‌ ಅಗರವಾಲ ಎಸ್ಪಿ, ವಿಜಯಪುರ

 

– ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next