Advertisement

ಕೋವಿಡ್ 19 ಹೊಡೆತಕ್ಕೆ ಬಾಳೆ-ಕಲ್ಲಂಗಡಿ ಕೇಳ್ಳೋರಿಲ್ಲ

01:53 PM Apr 05, 2020 | Suhan S |

ಬೀಳಗಿ: ಕೈ ತುಂಬ ಹಣ ತಂದು ಕೊಡುತ್ತಿದ್ದ ಲಾಭದಾಯಕ ಬೆಳೆಗಳಾದ ಬಾಳೆ, ಕಲ್ಲಂಗಡಿ ಹಾಗೂ ಪಪ್ಪಾಯಿ ಕೋವಿಡ್ 19 ಹೊಡೆತಕ್ಕೆ ಸಿಲುಕಿ ತೀರಾ ಕನಿಷ್ಠ ಬೆಲೆಗೂ ಕೇಳುವವರಿಲ್ಲದೆ ರೈತನ ಮೊಗದಲ್ಲಿ ನಿರಾಶೆಯ ಕಾರ್ಮೋಡ ಆವರಿಸಿದೆ.

Advertisement

ಕಹಿಯಾದ ಕಲ್ಲಂಗಡಿ: ತಾಲೂಕಿನಾದ್ಯಂತ 12 ಹೆಕ್ಟರ್‌ ಪ್ರದೇಶದಲ್ಲಿ ಸುಮಾರು 935 ಕ್ಕೂ ಹೆಚ್ಚು ಟನ್‌ನಷ್ಟು ಕಲ್ಲಂಗಡಿ ಬೆಳೆ ಭೂತಾಯಿ ಮಡಿಲು ತುಂಬಿಕೊಂಡಿದೆ. ಪ್ರಸಕ್ತ ಬೇಸಿಗೆಯ ಆರಂಭದ ಹೊತ್ತಲ್ಲಿ ಕಲ್ಲಂಗಡಿಗೆ ಭಾರಿ ಡಿಮ್ಯಾಂಡ್‌ ಇತ್ತು. ಟನ್‌ಗೆ 9 ರಿಂದ 10 ಸಾವಿರ ರೂ, ಬೆಲೆಗೆ ಮಾರಾಟವಾದ ಕಲ್ಲಂಗಡಿ ಇದೀಗ, ಟನ್‌ಗೆ 1500, 2000 ರೂಪಾಯಿಗೆ ಬಂದು ನಿಂತಿದೆ. ಅಂದರೆ ಕೆಜಿಗೆ ಒಂದುವರೆ, ಎರಡು ರೂಪಾಯಿ. ಎಲ್ಲಿ ಹೋದರೂ ಸೂಕ್ತ ಮಾರುಕಟ್ಟೆ ದೊರಕುತ್ತಿಲ್ಲ. ಕೋವಿಡ್ 19  ಹಾವಳಿಯಿಂದಾಗಿ ರೈತನ ಪಾಲಿಗೆ ಕಲ್ಲಂಗಡಿ ಕಹಿಯಾಗಿ ಪರಿಣಮಿಸಿದೆ.

ಬಾಳೆಗಿಲ್ಲ ಬೆಲೆ: ಬಾಳೆಹಣ್ಣಿಗೆ ಈ ಮೊದಲು ಬಂಗಾರದಂತಹ ಬೆಲೆಯಿತ್ತು. ಟನ್‌ಗೆ 10 ರಿಂದ 12 ಸಾವಿರವರೆಗೆ ಇದ್ದ ಬಾಳೆಯ ಬೆಲೆ, ಕೋವಿಡ್ 19  ಸುಳಿಗೆ ಸಿಲುಕಿ, ಟನ್‌ಗೆ 2 ರಿಂದ 3 ಸಾವಿರ ರೂಪಾಯಿಗೂ ಕೇಳುವವರು ದಿಕ್ಕಿಲ್ಲದಂತಾಗಿದೆ. ತಾಲೂಕಿನಾದ್ಯಂತ ಒಟ್ಟು 19.7 ಹೆಕ್ಟರ್‌ ಪ್ರದೇಶದಲ್ಲಿ 582ಟನ್‌ನಷ್ಟು ಬಾಳೆ ಕಂಗೊಳಿಸುತ್ತಿದೆ. ಆದರೆ, ಬೆಲೆ ಸಿಗದೆ ಬಾಳೆ ನೆಲಕ್ಕುರುಳುತ್ತಿದೆ. ಬಾಳೆಯನ್ನೇ ನಂಬಿದ ರೈತನ ಬದುಕು ಕೋವಿಡ್ 19 ದವಡೆಗೆ ಸಿಕ್ಕು ನುಚ್ಚುನೂರಾಗಿದೆ|

ಪಪ್ಪಾಯಿ ಪಾಡು: ತಾಲೂಕಿನಾದ್ಯಂತ 5.4 ಹೆಕ್ಟೇರ್‌ ಪ್ರದೇಶದಲ್ಲಿ 390 ಟನ್‌ನಷ್ಟು ಪಪ್ಪಾಯಿ ಬೆಳೆ ಬೆಳೆಯಲಾಗಿದೆ. ಮೊದಲು ಟನ್‌ ಒಂದಕ್ಕೆ 6 ರಿಂದ 15 ಸಾವಿರ ರೂಪಾಯಿಗೆ ಮಾರಾಟವಾಗುತ್ತಿದ್ದ ಪಪ್ಪಾಯಿ ಪಾಡು, ಇದೀಗ 3 ರಿಂದ 4 ಸಾವಿರಕ್ಕಿಳಿದಿರುವುದು ರೈತನನ್ನು ಕಂಗೆಡೆಸಿದೆ.

ಹಾಕಿದ ಖರ್ಚು ಬರುತ್ತಿಲ್ಲ: ಬಾಳೆ, ಕಲ್ಲಂಗಡಿ. ಪಪ್ಪಾಯಿ ಬೆಳೆಗೆ ಹಾಕಿದ ಖರ್ಚು ಕೂಡ ರೈತನ ಕೈ ಸೇರುತ್ತಿಲ್ಲ. ಸರಕಾರ ಈ ನಿಟ್ಟಿನಲ್ಲಿ ನೆರವಿಗೆ ಧಾವಿಸಬೇಕೆನ್ನುವುದೇ ರೈತರ ಒತ್ತಾಸೆಯಾಗಿದೆ.

Advertisement

ಕಲ್ಲಂಗಡಿ, ಬಾಳೆ, ಪಪ್ಪಾಯಿ ಬೆಳೆಗೆ ಬೆಲೆ ಕುಸಿದಿದೆ. ಕೋವಿಡ್ 19  ಹಾವಳಿಗಿಂತ ಮುಂಚೆ ಈ ಎಲ್ಲ ಬೆಳೆಗಳಿಗೆ ಭಾರಿ ಡಿಮ್ಯಾಂಡ್‌ ಇತ್ತು. ಇದೀಗ ಹೊರರಾಜ್ಯ, ಹೊರಜಿಲ್ಲೆ ಮಾರುಕಟ್ಟೆಗೆ ಮಾಲು ಕಳುಹಿಸಲು ರೈತರಿಗೆ ಪಾಸ್‌ ನೀಡಲು ಕ್ರಮ ಕೈಗೊಳ್ಳಲಾಗಿದೆ. –ಮಹೇಶ ದಂಡನ್ನವರ, ಸಹಾಯಕ ತೋಟಗಾರಿಕೆ ನಿರ್ದೇಶಕರು, ಬೀಳಗಿ

ಹೋದವರ್ಷ ಲಕ್ಷಗಟ್ಟಲೆ ಲಾಭಕೊಟ್ಟ ಬಾಳೆ ಇಂದು ಯಾರೂ ಕೇಳದಂಗ್‌ ಆಗೈತ್ರಿ. ಎರಡೂ ರೂಪಾಯಿಗೆ ಕಿಲೋ ಕೇಳ್ತಾರ್ರೀ. ಬಾಳೆ ನೆಲಕ್ಕ ಬಿದ್ದೈತ್ರಿ. ಹೊಲದಾಗ ಕೊಳತು ಗೊಬ್ರ ಆಗಲಿ ಅಂತ ಬಿಟ್ಟಿನ್ರಿ. ಮಾಡಿದ ಸಾಲಾ ಹೆಂಗ್‌ ತೀರಿಸುವುದು ಚಿಂತಿ ಆಗೈತ್ರಿ. ಸರಕಾರ ಸಹಾಯಕ್ಕೆ ಬಂದ್ರ ನಾವು ಬದಕ್ತೇವ್ರಿ. ಇಲ್ದಿದ್ರ ದೇವರೇ ಗತಿ. -ಪುಂಡಲೀಕ ದಿವಾಣ, ರೈತರು, ಕೋವಳ್ಳಿ

 

-ರವೀಂದ್ರ ಕಣವಿ

Advertisement

Udayavani is now on Telegram. Click here to join our channel and stay updated with the latest news.

Next