ಅಥಣಿ: ಕೋವಿಡ್ ಲಾಕಡೌನ್ ಪರಿಣಾಮ ಅನೇಕ ಉದ್ಯಮಗಳಿಗೆ ಹೊಡೆತ ಬಿದ್ದಂತೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಭೆ, ಸಮಾರಂಭ, ಅದರಲ್ಲೂ ಶುಭ ಸಮಾರಂಭಗಳಲ್ಲಿ ಅಡುಗೆ ತಯಾರಿಸಲು ತೆರಳುತ್ತಿದ್ದ ಬಾಣಸಿಗರು ಕೆಲಸ ಇಲ್ಲದೇ ಈಗ ಬೆಂದು ಬೆಂಡಾಗಿದ್ದಾರೆ.
ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸರಕಾರಗಳು ಮದುವೆ, ನಾಮಕರಣ, ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ 50 ಜನಕ್ಕಿಂತ ಹೆಚ್ಚು ಜನ ಸೇರಬಾರದೆಂದು ಮಿತಿ ಹೇರಿರುವುದರಿಂದ ಅಡುಗೆ ತಯಾರಿಸುವ ಬಾಣಸಿಗರು ಕೆಲಸವಿಲ್ಲದೆ ಪರದಾಡುವಂತಾಗಿದೆ.
800 ಕ್ಕೂ ಹೆಚ್ಚು ಬಾಣಸಿಗರು: ಒಂದು ಅಂದಾಜಿನ ಪ್ರಕಾರ ಸುಮಾರು 800 ಕ್ಕೂ ಅಧಿಕ ಮಂದಿ ಅಡುಗೆ ತಯಾರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜತೆಗೆ ಬಡಸುವ ಮಂದಿಗೂ ಲೆಕ್ಕವಿಲ್ಲ. ಆದರೆ ಸತತ ಎರಡು ತಿಂಗಳಿನಿಂದ ಕಾರ್ಯವಿಲ್ಲದೇ ಬಾಣಸಿಗರು ಹಾಗೂ ಅವರ ಸಹಾಯಕರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.
ನಮಗೂ ಪರಿಹಾರ ಪ್ಯಾಕೇಜ್ ಘೋಷಿಸಿ: ಸರ್ಕಾರ ಇತ್ತೀಚಿಗೆ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳಿಗೆ ಪರಿಹಾರ ಘೋಷಿಸಿದ್ದು, ಬಾಣಸಿಗರು ಹಾಗೂ ಅವರ ಸಹಾಯಕರಿಗೂ ಸರ್ಕಾರ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.
ಸರಕಾರ ಈಗಾಗಲೇ ಕಟ್ಟಡ ನಿರ್ಮಾಣ ಕೂಲಿ ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿರುವಂತೆ ಶುಭ ಸಮಾರಂಭಗಳಲ್ಲಿ ಅಡುಗೆ ತಯಾರಿಸುವ ನಮ್ಮಂತಹ ಬಾಣಸಿಗರಿಗೂ ಸರಕಾರ ಆರ್ಥಿಕ ನೆರವಿನ ಪ್ಯಾಕೇಜ್ ಘೋಷಿಸಲಿ.
– ಭೀಮಪ್ಪ ನರವಡೆ, ಬಾಣಸಿಗ, ಅಥಣಿ
-ಸಂತೋಷ ರಾ. ಬಡಕಂಬಿ