Advertisement

ಕ್ಯಾನ್ಸರ್‌ ಚಿಕಿತ್ಸೆಗೂ ಕೋವಿಡ್ 19 ಕರಿಛಾಯೆ

11:18 AM Apr 04, 2020 | Suhan S |

ಬೆಂಗಳೂರು: ಕೋವಿಡ್ 19 ತಡೆಗೆ ಜಾರಿಯಾದ ಲಾಕ್‌ ಡೌನ್‌ ವ್ಯವಸ್ಥೆ ರಾಜ್ಯ ಕ್ಯಾನ್ಸರ್‌ ಪೀಡಿತರ ಚಿಕಿತ್ಸೆ ಮೇಲೂ ಕರಾಳ ಛಾಯೆ ಬೀರಿದ್ದು ರಾಜ್ಯ ಮಾತ್ರವಲ್ಲದೆ ನೆರೆಹೊರೆಯ ರಾಜ್ಯಗಳ ರೋಗಿಗಳು ಪರದಾಡುವಂತಾಗಿದೆ.

Advertisement

ಪ್ರತಿಷ್ಠಿತ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ನಿತ್ಯ ನೋಂದಣಿಯಾಗುವ ಹೊಸ ರೋಗಿಗಳ ಸಂಖ್ಯೆಯಲ್ಲಿ ಶೇ. 85ರಷ್ಟು ಇಳಿಕೆಯಾಗಿದೆ. ಜತೆಗೆ ಕಿಮೋ ಚಿಕಿತ್ಸೆ ಪಡೆಯುತ್ತಿದ್ದವರ ಸಂಖ್ಯೆಯಲ್ಲೂ ಶೇ. 50ರಷ್ಟು ಇಳಿಕೆ  ಯಾಗಿದೆ. ಒಳರೋಗಿಗಳ ನೋಂದಣಿಯೂ ಕಡಿಮೆ ಯಾಗಿದೆ. ಸಂಸ್ಥೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದ್ದು, ತುರ್ತು ಚಿಕಿತ್ಸೆ ಅಗತ್ಯವಿದ್ದ ವರಷ್ಟೇ ಬಂದರೆ ಒಳಿತು ಎಂದು ಸಂಸ್ಥೆ ಮನವಿ ಮಾಡಿದೆ.

ಕೋವಿಡ್ 19  ಸೋಂಕು ವ್ಯಾಪಕವಾಗಿ ಹರಡುವ ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್‌ ವ್ಯವಸ್ಥೆ ಜಾರಿಗೊಳಿಸಿವೆ. ಎಲ್ಲ ರೀತಿಯ ಸರ್ಕಾರಿ ಸಮೂಹ ಸಾರಿಗೆ ಸೇವೆ ಸ್ಥಗಿತಗೊಂಡಿದ್ದು, ಇತರೆ ಸಾರಿಗೆ ಸೇವೆಯೂ ಸ್ತಬ್ಧವಾಗಿದೆ. ಇದರಿಂದ ಕ್ಯಾನ್ಸರ್‌ ರೋಗಿಗಳ ಚಿಕಿತ್ಸೆಗೂ ಅಡ್ಡಿಯಾಗಿದೆ. ಖಾಸಗಿ ವಾಹನ ವ್ಯವಸ್ಥೆಯಾದವರಷ್ಟೇ ಸಂಸ್ಥೆಗೆ ಬಂದು ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ.

ಹೊಸ ರೋಗಿ ನೋಂದಣಿ ಶೇ. 85 ಕಡಿತ: ಸಾಮಾನ್ಯ ದಿನಗಳಲ್ಲಿ ನಿತ್ಯ ಸರಾಸರಿ 100ರಿಂದ 120 ಹೊಸ ಕ್ಯಾನ್ಸರ್‌ ರೋಗಿಗಳು ಚಿಕಿತ್ಸೆಗಾಗಿ ಸಂಸ್ಥೆಗೆ ದಾಖಲಾಗುತ್ತಿದ್ದರು. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ನಾನಾ ಭಾಗ ಮತ್ತುನೆರೆಯ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಇತರೆ ರಾಜ್ಯದ ರೋಗಿಗಳು ಚಿಕಿತ್ಸೆಗೆ ನೋಂದಣಿಯಾಗುತ್ತಿದ್ದರು. ಆದರೆ ಕಳೆದ 10 ದಿನಗಳಿಂದ ಹೊಸ ರೋಗಿಗಳ ನೊಂದಣಿಯಲ್ಲಿ ಗಣನೀಯ ಇಳಿಕೆಯಾಗಿದ್ದು, ನಿತ್ಯ ಸರಾಸರಿ 20 ಮಂದಿಯಷ್ಟೇ ಹೊಸ ರೋಗಿಗಳ ನೋಂದಣಿಯಾಗುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಕಿಮೋ ಥೆರಪಿ ರೋಗಿಗಳಲ್ಲೂ ಇಳಿಕೆ: ಸಂಸ್ಥೆಯಲ್ಲಿ 40 ಹಾಸಿಗೆಯ ಡೇ ಕೇರ್‌ ಸೆಂಟರ್‌ ಇದ್ದು, ಇಲ್ಲಿ ಹಲವು ಸುತ್ತು  ಗಳಲ್ಲಿ ಕಿಮೋ ಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ರೋಗಿಗಳ ಸಂಖ್ಯೆ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಒಬ್ಬ ರೋಗಿಗೆ 21 ದಿನಕ್ಕೊಮ್ಮೆ ಕಿಮೋ ಥೆರಪಿ ಚಿಕಿತ್ಸೆ ನೀಡಲಾ ಗುತ್ತದೆ. ರೋಗಿಗಳು ನಿರ್ದಿಷ್ಟ ದಿನದಂದು ಸಂಸ್ಥೆಗೆ ಬಂದು ಡೇ ಕೇರ್‌ ಸೆಂಟರ್‌ಗೆ ದಾಖಲಾಗಿ ಮೂರ್‍ನಾಲ್ಕು ಗಂಟೆಯಲ್ಲಿ ಕಿಮೋ ಥೆರಪಿ ಚಿಕಿತ್ಸೆ ಪಡೆದು ವಾಪಾಸ್‌ ತಮ್ಮ ಮನೆಗಳಿಗೆ ಹಿಂತಿರುಗುತ್ತಾರೆ. ಸಾರಿಗೆ ವ್ಯವಸ್ಥೆ ಇಲ್ಲದಿರುವ ಕಾರಣ ಶೇ.50ರಷ್ಟು ಇಳಿಕೆಯಾಗಿದೆ. ಖಾಸಗಿ ವಾಹನ ಇತರೆ ವ್ಯವಸ್ಥೆಯಿದ್ದವರಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಹೇಳಿವೆ.

Advertisement

ಒಳರೋಗಿಗಳಿಗೆ ಚಿಕಿತ್ಸೆ ಅಬಾಧಿತ: ಒಳರೋಗಿಗಳ ಚಿಕಿತ್ಸೆಯಲ್ಲಿ ಯಾವುದೇ ವ್ಯತ್ಯಯವಾಗಿಲ್ಲ. ಹೊಸದಾಗಿ ಒಳರೋಗಿಗಳಾಗಿ ದಾಖಲಾಗುವವರ ಸಂಖ್ಯೆಯೂ ಕಡಿಮೆ ಇದೆ. ಸಂಸ್ಥೆಯಲ್ಲಿ ನೈರ್ಮಲ್ಯ ಕಾಪಾಡಲು ಒತ್ತು ನೀಡಲಾಗಿದ್ದು, ಸಾಮಾಜಿಕ ಅಂತರ ಕಾಯ್ದು ಕೊಳ್ಳಲು ಆದ್ಯತೆ ನೀಡಲಾಗಿದೆ. ಪ್ರವೇಶ ದ್ವಾರದಲ್ಲೇ ಆರೋಗ್ಯ ತಪಾಸಣೆ ನಡೆಸಿ ಸೈನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಂಡ ಬಳಿಕವಷ್ಟೇ ಪ್ರವೇಶ ನೀಡ ಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಸೋಂಕು ತಡೆಗೆ ಫಾಲೋಅಪ್‌  ಚಿಕಿತ್ಸೆಗಾಗಿ ಸಂಸ್ಥೆಗೆ ಬರುವವರು ಕೆಲಕಾಲ ಭೇಟಿಯನ್ನು ಮುಂದೂಡುವುದು ಒಳಿತು. ರಕ್ತಸ್ರಾವ, ಊಟ ಸೇವಿಸಲಾಗದಿರುವುದು ಸೇರಿದಂತೆ ಇತರೆ ಗಂಭೀರ ಲಕ್ಷಣ ಕಂಡುಬಂದರೆ ತುರ್ತು ಚಿಕಿತ್ಸೆಗಾಗಿ ಬರುವುದು ಸೂಕ್ತ. ಸಂಸ್ಥೆಯಲ್ಲೂ ವೈದ್ಯರು, ಅರೆಸಿಬ್ಬಂದಿ, ನೌಕರರನ್ನು ಸರದಿ ಮೇಲೆ ಬಳಸಿಕೊಳ್ಳಬೇಕಿದ್ದು, ಅಂತರ ಕಾಯ್ದುಕೊಳ್ಳಲು ಸಹಕರಿಸಬೇಕಿದೆ.   ಡಾ.ಸಿ.ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ಸಾಮಾಜಿಕ ಅಂತರ ಸವಾಲು! :  ಸಂಸ್ಥೆಗೆ ಸಾಮಾನ್ಯ ದಿನಗಳಲ್ಲಿ ನಿತ್ಯಹೊಸ ರೋಗಿಗಳು, ಫಾಲೋಅಪ್‌ ಚಿಕಿತ್ಸೆಗೆಂದು ಬರುವವರ ಸಂಖ್ಯೆ 1,200ರಿಂದ 1,500ರಷ್ಟಿದೆ. ಅವರೊಂದಿಗೆ ಸಹಾಯಕರು, ಜೊತೆಗಾರರು 1,,500ರಿಂದ 2000 ಮಂದಿ ಇರುತ್ತಾರೆ. ಧರ್ಮಛತ್ರದಲ್ಲಿ 1000 ಮಂದಿಯಿದ್ದು, ಅವರ ಸಹಾಯಕರು 500 ಮಂದಿ ಇದ್ದಾರೆ. ಒಳರೋಗಿ ವಿಭಾಗದಲ್ಲಿ 650 ಹಾಸಿಗೆಯಿದ್ದು, ಅವರಿಗೆ 750 ಮಂದಿ ಸಹಾಯಕರಿದ್ದಾರೆ.ಸಂಸ್ಥೆ ಸಿಬ್ಬಂದಿ ಹಾಗೂ ವೈದ್ಯರು, ಅರೆವೈದ್ಯ ಸಿಬ್ಬಂದಿ ಸೇರಿ 1000 ಮಂದಿ ಇದ್ದಾರೆ. ಸದ್ಯ ಹೊಸ ರೋಗಿಗಳು, ಫಾಲೋಅಪ್‌ ರೋಗಿಗಳ ಸಂಖ್ಯೆ ಕಡಿಮೆಯಿದ್ದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸವಾಲಾಗಿದೆ.

 

 -ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next