Advertisement

ಪಿಜಿ ಖಾಲಿ ಮಾಡಿ ಪ್ಲೀಸ್‌

11:43 AM Mar 24, 2020 | Suhan S |

ಬೆಂಗಳೂರು: ವಿಮಾನ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸುವ ನೂರಾರು ಜನ ಸಿಬ್ಬಂದಿಗೆ ಸುತ್ತಲಿನ ಹಳ್ಳಿಗಳಲ್ಲಿ ಈಗ ದಿಗ್ಬಂಧನ ವಿಧಿಸಿದ್ದು, ಪಿಜಿಗಳಿಂದಲೂ ಹೊರಹಾಕಲಾಗುತ್ತಿದೆ. ಇದರಿಂದ ಆ ಸಿಬ್ಬಂದಿ ಅತಂತ್ರರಾಗಿದ್ದಾರೆ.

Advertisement

ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಒಂದೇ ಕಡೆ ಇಂಡಿಗೊ, ಡೆಕನ್‌ ಏವಿಯೇಷನ್‌, ಇಂಡಿಯನ್‌ ಏರ್‌ಲೈನ್ಸ್‌, ಜೆಟ್‌ ಏರ್‌ವೇಸ್‌ ಸೇರಿದಂತೆ ಹತ್ತಾರು ಕಂಪನಿಯ ನಾಗರಿಕ ವಿಮಾನಯಾನ ಕಂಪನಿಗಳಲ್ಲಿ ಸುಮಾರು 500-600 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು, ಅವರೆಲ್ಲರೂ ನಿಲ್ದಾಣದ ಆಸುಪಾಸು ಇರುವ ಹಳ್ಳಿಗಳ ಪಿಜಿಗಳಲ್ಲಿ ವಾಸವಿದ್ದಾರೆ. ಆದರೆ, ಕೋವಿಡ್ 19 ವೈರಸ್‌ ಹಿನ್ನೆಲೆಯಲ್ಲಿ ಆ ಸಿಬ್ಬಂದಿಯನ್ನು “ವಿಲನ್‌’ ರೀತಿ ಕಾಣುತ್ತಿದ್ದು, ಕೂಡಲೇ ಪಿಜಿ ಖಾಲಿ ಮಾಡುವಂತೆ ಒತ್ತಡ ಹಾಕಲಾಗುತ್ತಿದೆ. ರಾಜ್ಯದ ಪ್ರಮುಖ ವಿಮಾನ ನಿಲ್ದಾಣಗಳ ಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿಲ್ಲ.

ಮೈಸೂರು, ಮಂಗಳೂರು, ಬೆಳಗಾವಿ, ಆಂಧ್ರಪ್ರದೇಶ, ತಮಿಳುನಾಡು, ಬಿಹಾರ, ಜಾರ್ಖಂಡ್‌, ಉತ್ತರ ಪ್ರದೇಶ ಸೇರಿದಂತೆ ನಾನಾ ಭಾಗಗಳಿಂದ ಬಂದ ಆ ಸಿಬ್ಬಂದಿಗೆ ವಿಮಾನ ನಿಲ್ದಾಣದಲ್ಲಿ ಕೆಲಸ ಮುಗಿಸಿಕೊಂಡು ಹಳ್ಳಿಗೆ ಹಿಂತಿರುಗುವಾಗ ದಿಗ್ಬಂಧನ ವಿಧಿಸಲಾಗುತ್ತಿದೆ. ಹೇಗೋ ಕೇಳಿಕೊಂಡು ಒಳಹೊಕ್ಕರೆ, ಪಿಜಿಗಳಲ್ಲಿ “ನೋ ಎಂಟ್ರಿ’. ಕೆಲ ದಿನಗಳ ಮಟ್ಟಿಗೆ ರಜೆ ಹಾಕಿ, ಊರಿಗೆ ಹೋಗಬೇಕೆಂದರೆ ದೇಶಾದ್ಯಂತ ಕೊರೊನ ವೈರಸ್‌ ತೀವ್ರವಾಗಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಗಡಿಗಳಲ್ಲಿ ದಿಗ್ಬಂಧನ ಹಾಕಲಾಗಿದೆ. ಪರಿಣಾಮ ಅಕ್ಷರಶಃ ಅಡ್ಡಕತ್ತರಿಗೆ ಸಿಲುಕಿದ್ದಾರೆ. ಇದರಲ್ಲಿ ಬಹುತೇಕ ಮಹಿಳೆಯರೂ ಇದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್‌) ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಎಲ್ಲೆಲ್ಲಿ ತೆರವಿಗೆ ಸೂಚನೆ?: ಬಾಗಲೂರಿನ ದ್ವಾರಕನಗರದ ಲೋಟಸ್‌ ಕೊ ಲೈವ್‌ ಪಿಜಿ, ಹುಣಸಮಾರನಹಳ್ಳಿಯ 7ಹಿಲ್ಸ್‌ ಪಿಜಿ, ಕಾಡಯರಪನಹಳ್ಳಿ, ಮೈಲಹಳ್ಳಿ ಸುತ್ತ ಇರುವ ಪಿಜಿ, ಬಾಡಿಗೆ ಮನೆಗಳಲ್ಲಿ ವಿಮಾನಯಾನ ಸೇವಾ ಕಂಪನಿಗಳಲ್ಲಿನ ಸಿಬ್ಬಂದಿ ಹಲವು ವರ್ಷಗಳಿಂದ ನೆಲೆಸಿದ್ದಾರೆ. ಅವರೆಲ್ಲರಿಗೂ ಸೋಮವಾರ ಏಕಾಏಕಿ ಪಿಜಿ ಅಥವಾ ಮನೆಗಳನ್ನು ತೆರವುಗೊಳಿಸುವಂತೆ ಮೊಬೈಲ್‌ ಸಂದೇಶ ಬಂದಿದೆ. ಈ ಬಗ್ಗೆ ಆಕ್ಷೇಪಿಸಿದರೆ, “ಸರ್ಕಾರವೇ ತಮಗೆ ನೋಟಿಸ್‌ ನೀಡಿದ್ದು, ದಯವಿಟ್ಟು ಪರ್ಯಾಯ ಮಾರ್ಗ ಕಂಡುಕೊಳ್ಳಿ. ಈ ವಿಚಾರದಲ್ಲಿ ನಾವು ಅಸಹಾಯಕರಾಗಿದ್ದೇವೆ’ ಎಂದು ಪಿಜಿ ಮಾಲಿಕರು ತಿಳಿಸುತ್ತಿದ್ದಾರೆ.

ಗ್ರೌಂಡ್‌ ಸ್ಟಾಫ್, ಕೌಂಟರ್‌ ಸ್ಟಾಫ್, ಹೌಸ್‌ಕೀಪಿಂಗ್‌ ಸೇರಿದಂತೆ ವಿವಿಧ ಹಂತದಲ್ಲಿ ಈ ಸಿಬ್ಬಂದಿ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ಮಂಗಳೂರು, ಹುಬ್ಬಳಿಯಂತಹ ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ ಸಿಬ್ಬಂದಿ ಕೂಡ ಇದೇ ಸ್ಥಿತಿ ಎದುರಿಸುತ್ತಿದ್ದು, ಈ ಸಮಸ್ಯೆಗಳನ್ನು ಹಂಚಿಕೊಂಡಿದ್ದಾರೆ. ಗ್ರಾಮಸ್ಥರು ಈ ಸಿಬ್ಬಂದಿಯನ್ನು ಹಳ್ಳಿ ಒಳಗಡೆ ಹೋಗಲಿಕ್ಕೂ ಬಿಡುತ್ತಿಲ್ಲ ಎಂದು ಬಿಐಎಎಲ್‌ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

Advertisement

ಅನುಮಾನ ಸಹಜ: “ಈಗ ವಿಮಾನ ನಿಲ್ದಾಣವು ಕೋವಿಡ್ 19 ವೈರಸ್‌ ಹರಡುವಿಕೆಯ ಕೇಂದ್ರಬಿಂದು. ಹಾಗಾಗಿ, ಅಲ್ಲಿ ಕೆಲಸ ಮಾಡಿ ನಮ್ಮೂರಿಗೆ ಬರುವವರನ್ನು ಅನುಮಾನದಿಂದ ನೋಡುವುದು ಸಹಜ. ಇದನ್ನು ಸೂಕ್ಷ್ಮವಾಗಿ ಅರಿತು ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಇನ್ನು ಕೆಲವರು ವಾರದ ಹಿಂದೆಯೇ ಗುಳೆ ಹೋಗಿದ್ದಾರೆ ಎಂದು ಕಾಡಯರಪನಹಳ್ಳಿಯ ನಿವಾಸಿ ಮದನ್‌ ತಿಳಿಸುತ್ತಾರೆ.

 

-ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next