Advertisement
ಆರ್ಥಿಕ ವರ್ಷದ ಮೊದಲ ತಿಂಗಳು ಏಪ್ರಿಲ್ ತೆರಿಗೆ ಸಂಗ್ರಹವಾಗುವ ಪ್ರಮುಖ ಸಮಯ. ಹೀಗಾಗಿ ಈ ತಿಂಗಳಲ್ಲಿ ಸ್ಥಳೀಯ ಸಂಸ್ಥೆಗಳು ಪ್ರಮುಖವಾಗಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡುತ್ತವೆ. ಈ ತಿಂಗಳಲ್ಲಿ ಕರದಾತರಿಗೆ ಕೊಂಚ ರಿಯಾಯಿತಿ ಕೂಡ ನೀಡಲಾಗುತ್ತದೆ.ಹೀಗಾಗಿ ಬಹುತೇಕ ಸಾರ್ವಜನಿಕರು ಏಪ್ರಿಲ್‌ನಲ್ಲಿ ತೆರಿಗೆ ಪಾವತಿ ಮಾಡುತ್ತಾರೆ. ಈ ಬಾರಿಯೂ ಏಪ್ರಿಲ್ ನಲ್ಲಿ ತೆರಿಗೆ ಪಾವತಿಸುವ ಕರದಾತರಿಗೆ ಶೇ.5 ರಿಯಾಯಿತಿ ನೀಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹಕ್ಕೆ ಹಿನ್ನಡೆಯಾಗಬಾರದು ಎಂದು ಆನ್ ಲೈನ್ ವ್ಯವಸ್ಥೆ ಕಲ್ಪಿಸಿದರೂ ನಿರೀಕ್ಷಿತ ತೆರಿಗೆ ಸಂಗ್ರಹವಾಗಿಲ್ಲ.
Related Articles
Advertisement
ಆನ್‌ಲೈನ್ ಮೂಲಕವೂ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಕ್ರಮ : ಜನರು ವಲಯ ಕಚೇರಿಗಳಿಗೆ ಆಗಮಿಸಿ ತೆರಿಗೆ ಪಾವತಿ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಮಹಾನಗರ ಪಾಲಿಕೆ ಆನ್‌ಲೈನ್ ಮೂಲಕ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ. ಪಾಲಿಕೆ ವೆಬ್‌ಸೈಟ್‌ನಲ್ಲಿ ತೆರಿಗೆ ಪಾವತಿಸುವ ವಿಧಾನಗಳನ್ನು ವಿವರಿಸಲಾಗಿದೆ. ಆ ಮೂಲಕ ತಮ್ಮ ಆಸ್ತಿ ತೆರಿಗೆ ಮೊತ್ತದ ಚಲನ್ ಪಡೆದು ಅನುಕೂಲವಾದ ಬ್ಯಾಂಕ್‌ಗಳಿಗೆ ಆನ್‌ಲೈನ್ ಮೂಲಕ ಪಾವತಿ ಮಾಡಬಹುದಾಗಿದೆ. ಈ ವಿಧಾನ ಕಷ್ಟ ಎನ್ನುವವರಿಗಾಗಿ ಪ್ರತ್ಯೇಕ ವಾಟ್ಸ್ ಆ್ಯಪ್ ನಂಬರ್‌ಗೆ ತಮ್ಮ ಆಸ್ತಿ ಸಂಖ್ಯೆ (ಪಿಐಡಿ) ಹಾಗೂ ವಾರ್ಡ್ ನಂಬರ್ ಕಳುಹಿಸಿದರೆ ಅವರಿಗೆ ಚಲನ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ. ಚೆಕ್, ಡಿಡಿ ಮೂಲಕ 10 ಸಾವಿರ ರೂ.ಗಿಂತ ಹೆಚ್ಚು ತೆರಿಗೆ ಪಾವತಿಸುವವರು ಪಾಲಿಕೆಗೆ ಕರೆ ಮಾಡಿ ತಿಳಿಸಿದರೆ ಪಾಲಿಕೆ ಸಿಬ್ಬಂದಿ ಆಗಮಿಸಿ ಚೆಕ್ ಅಥವಾ ಡಿಡಿ ಸಂಗ್ರಹ ಮಾಡಿ ಸ್ವೀಕೃತಿ ನೀಡಲಿದ್ದಾರೆ.
ವೇತನಕ್ಕೂ ಕಷ್ಟ ! : ಕೋವಿಡ್ 19 ಸೋಂಕು ಹರಡದಂತೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಸಿಬ್ಬಂದಿ ಸುರಕ್ಷತೆಗಾಗಿ ವಿವಿಧ ವೆಚ್ಚಗಳು ಒಂದೆಡೆಯಾದರೆ, ಸುಮಾರು ಎರಡು ಸಾವಿರ ಗುತ್ತಿಗೆ ಪೌರಕಾರ್ಮಿಕರಿಗೂ ವೇತನ ಪಾವತಿ ಮಾಡಬೇಕಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಚಾಲ್ತಿಯಿಲ್ಲದಿದ್ದರೂ ಕೆಲ ಅಗತ್ಯ ಕಾರ್ಯಗಳನ್ನು ನಿರ್ವಹಿಸಬೇಕಾಗುತ್ತದೆ. ಇದರೊಂದಿಗೆ ಇತರೆ ಖರ್ಚುಗಳನ್ನು ನಿಭಾಯಿಸುವುದು ಕೂಡ ದುಸ್ತರವಾಗಲಿದೆ. ಸಂಗ್ರಹವಾಗಿರುವ ತೆರಿಗೆಯಿಂದ ಎಲ್ಲಾ ಖರ್ಚು ನಿಭಾಯಿಸುವುದಾದರೂ ಹೇಗೆ ಎನ್ನುವ ಚಿಂತೆ ಪಾಲಿಕೆ ಅಧಿಕಾರಿಗಳಲ್ಲಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಪಾಲಿಕೆಗೆ ಸಂದಾಯವಾಗಬೇಕಾದ ಆಸ್ತಿಗೆ ತೆರಿಗೆ ಸಂಗ್ರಹಕ್ಕೆ ಆನ್‌ಲೈನ್ ಸೇರಿದಂತೆ ಇತರೆ ಸರಳ ವ್ಯವಸ್ಥೆ ಕಲ್ಪಿಸಲಾಗಿದೆ. ಏಪ್ರಿಲ್ ತಿಂಗಳಲ್ಲಿ ಬರಬೇಕಾದ ತೆರಿಗೆ ಪಾಲಿಕೆಗೆ ಸಂದಾಯವಾಗಿಲ್ಲ. ಲಾಕ್‌ಡೌನ್ ಪೂರ್ಣಗೊಂಡ ನಂತರ ಬರಬೇಕಾದ ತೆರಿಗೆ ನಿರೀಕ್ಷೆಯಲ್ಲಿದ್ದೇವೆ. ಮಹಾನಗರದ ಅಭಿವೃದ್ಧಿ ದೃಷ್ಟಿಯಿಂದ ಸಾರ್ವಜನಿಕರು ತೆರಿಗೆ ಪಾವತಿ ಮಾಡಿದರೆ ಅನುಕೂಲವಾಗುತ್ತದೆ. -ಡಾ| ಸುರೇಶ ಇಟ್ನಾಳ, ಪಾಲಿಕೆ ಆಯುಕ್ತ
-ಹೇಮರಡ್ಡಿ ಸೈದಾಪುರ