Advertisement

ಕೋವಿಡ್ 19 ಎಫೆಕ್ಟ್; ಮಾವು ಮೇಳ ಡೌಟ್‌

11:46 AM Apr 27, 2020 | Suhan S |

ಧಾರವಾಡ: ಹಣ್ಣುಗಳ ರಾಜ ಮಾವಿನ ಸುಗ್ಗಿ ಆರಂಭಗೊಂಡಿದೆ.ಆದರೀಗ ಕೋವಿಡ್ 19 ಲಾಕ್‌ ಡೌನ್‌ ಮೇ 3ರ ಬಳಿಕವೂ ಮುಂದುವರಿದರೆ ಮಾವು ಬೆಳೆಗಾರರು ಹಾಗೂ ಗ್ರಾಹಕರಿಗೆ ನಡುವೆ ವೇದಿಕೆಯಾಗಿದ್ದ ಮಾವಿನ ಮೇಳಕ್ಕೂ ಕೊಕ್ಕೆ ಬೀಳಲಿದೆ.

Advertisement

ಹೌದು. ಪ್ರತಿ ವರ್ಷ ಮೇ  ತಿಂಗಳ 2 ಅಥವಾ 3ನೇ ವಾರದಲ್ಲಿ ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಈ ಮಾವು ಮೇಳ ನಡೆಯುತ್ತದೆ. ಈ ವೇಳೆ 100-150 ಟನ್‌ ಮಾವು ಮಾರಾಟವಾಗಿ, 1 ಕೋಟಿ ರೂ.ವರೆಗೂ ವಹಿವಾಟು ನಡೆಯುತ್ತಿತ್ತು. ಆದರೆ ಇದೀಗ ಕೋವಿಡ್ 19 ದಿಂದ ಲಾಕ್‌ಡೌನ್‌ ಜಾರಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಕಾರಣ ಈ ಸಲ ಮಾವು ಮೇಳಕ್ಕೆ ಬ್ರೇಕ್‌ ಬೀಳುವ ಸಾಧ್ಯತೆಯೇ ಹೆಚ್ಚಾಗಿದೆ.

ನೇರಾ-ನೇರ: ರೈತರು ಹಾಗೂ ಗ್ರಾಹಕರ ಮಧ್ಯೆ ನೇರವಾಗಿ ವ್ಯಾಪಾರದ ಸಂಪರ್ಕ ಕೊಂಡಿಯಾಗಿ ಕಳೆದ ಒಂದು ದಶಕದಿಂದ ಉತ್ತಮ ವೇದಿಕೆ ಕಲ್ಪಿಸಿದೆ ಈ ಮಾವು ಮೇಳ. ಗ್ರಾಹಕರು ಹಾಗೂ ಮಾವು ಬೆಳೆಗಾರರಿಗೆ ಒಳ್ಳೆಯ ವೇದಿಕೆಯಾಗಿರುವ ಈ ಮೇಳಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ಇದೆ. ಹೀಗಾಗಿ ಕಳೆದ ವರ್ಷ ನಡೆದ ಮೂರು ದಿನಗಳ ಮಾವು ಮೇಳವು ಗ್ರಾಹಕರ ಮತ್ತು ರೈತರ ಒತ್ತಾಸೆಯ ಮೇರೆಗೆ ನಾಲ್ಕು ದಿನಕ್ಕೆ ವಿಸ್ತರಣೆ ಆಗಿತ್ತು. ಇದಲ್ಲದೇ ಆ ನಾಲ್ಕು ದಿನಗಳಲ್ಲಿ ಮಾವಿನ ಹಣ್ಣಿನ ಮಾರಾಟವೂ ಸಹ ಕೋಟಿ ರೂ. ದಾಟಿತ್ತು.

ಈ ಮೇಳದ ಯಶಸ್ಸಿನಿಂದ ಪ್ರೋತ್ಸಾಹ ಪಡೆದಿದ್ದ ತೋಟಗಾರಿಕೆ ಇಲಾಖೆ ಮಾವು ಮೇಳದ ಜೊತೆ-ಜೊತೆಗೆ ಮ್ಯಾಂಗೋ ಟೂರಿಸಂ ಎಂಬ ಹೊಸ ಕಲ್ಪನೆಯನ್ನೂ ಪರಿಚಯಿಸಿತ್ತು. ಈ ಕಲ್ಪನೆ ಅಡಿ ಗ್ರಾಹಕರು ನೇರವಾಗಿ ಮಾವು ಬೆಳೆದ ರೈತರ ತೋಟಕ್ಕೆ ತೆರಳಿ ಖರೀದಿ ಮಾಡಬಹುದಾಗಿತ್ತು. ಎರಡು ವರ್ಷ ಉತ್ತಮ ಸ್ಪಂದನೆ ಸಿಕ್ಕ ಬಳಿಕ ಕಳೆದ ವರ್ಷ ಇದಕ್ಕೆ ಸ್ಪಂದನೆ ಸಿಗಲಿಲ್ಲ. ಇದೀಗ ಕೋವಿಡ್ 19  ಎಫೆಕ್ಟ್ ನಿಂದಾಗಿ ಮಾವಿನ ಮೇಳದ ಜೊತೆ-ಜೊತೆಗೆ ಮ್ಯಾಂಗೋ ಟೂರಿಸಂ ಕೂಡ ಇಲ್ಲದಂತೆ ಆಗುವ ಲಕ್ಷ್ಮಣಗಳೇ ಗೋಚರಿಸುವಂತಾಗಿದೆ.

ಕುಸಿದ ಮಾವಿನ ಫಸಲು: ಜಿಲ್ಲೆಯಲ್ಲಿ 10,500 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಇದ್ದು, ಪ್ರತಿ ಸಲ 80,000 ಸಾವಿರ ಮೆಟ್ರಿಕ್‌ ಟನ್‌ಗಳಷ್ಟು ಮಾವು ಉತ್ಪಾದನೆ ಸಾಮರ್ಥಯವುಂಟು. ಆದರೆ ಹವಾಮಾನ ವೈಪರೀತ್ಯ, ಪ್ರಕೃತಿ ವಿಕೋಪ, ತಡವಾಗಿ ಹೂ ಬಿಟ್ಟಿರುವ ಮಾವು ಹಾಗೂ ಮಳೆ-ಗಾಳಿಗೆ ಉದುರಿರುವ ಕಾರಣ ಶೇ.50ರಷ್ಟು ಮಾವಿನ ಫಸಲಿನ ಕೊರತೆ ಉಂಟಾಗಿದೆ.

Advertisement

ಸದ್ಯ 50,000 ಮೆಟ್ರಿಕ್‌ ಟನ್‌ಗಳಷ್ಟು ಮಾವು ಸಿಗಬಹುದೆಂಬ ಲೆಕ್ಕಾಚಾರವಿದ್ದರೂ ಸಹ ಅದಕ್ಕಿಂತೂ ಕಡಿಮೆ ಪ್ರಮಾಣದಲ್ಲಿ ಮಾವಿನ ಫಸಲು ಸಿಗುವ ಸಾಧ್ಯತೆ ಇದೆ. ಈ ಆತಂಕ ಹಾಗೂ ಲೆಕ್ಕಾಚಾರದ ಮಧ್ಯೆಯೇ ತೋಟಗಾರಿಕೆ ಇಲಾಖೆಯಂತೂ ಮೇ ತಿಂಗಳಲ್ಲಿ ಮಾವು ಮೇಳ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದು, ಸದ್ಯ ಕೋವಿಡ್ 19  ಲಾಕ್‌ ಡೌನ್‌ ತೆರವಿಗಾಗಿ ಕಾಯುವಂತಾಗಿದೆ. ಒಂದು ವೇಳೆ ಲಾಕ್‌ಡೌನ್‌ ತೆರವಾದರೂ ಸಹ ಈ ಸಲ ಮಾವು ಮೇಳ ಆಯೋಜನೆ ಕಷ್ಟಕರ. ಗ್ರಾಹಕರ ಹಿಂದೇಟು ಹಾಗೂ ಈ ಸಲ ಫಸಲೂ ಕೂಡ ಕಡಿಮೆ ಪ್ರಮಾಣದಲ್ಲಿ ಬಂದಿರುವ ಕಾರಣ ಮಾವು ಮೇಳಕ್ಕೆ ಒಂದು ರೀತಿ ಹಿನ್ನಡೆಯಾಗಲಿದೆ.

ಮಾವು ಸುಗ್ಗಿ ಶುರುವಾಗಿದ್ದು, 2 ಡಜನ್‌ ಹಣ್ಣು ಒಳಗೊಂಡ ಬಾಕ್ಸಿಗೆ 500 ರೂ.ಗಳಿಂದ 1 ಸಾವಿರ ಬೆಲೆ ಸದ್ಯಕ್ಕುಂಟು. ಮೇ ತಿಂಗಳಲ್ಲಿ ಸ್ಥಳೀಯ ಮಾವು ಮಾರುಕಟ್ಟೆಗೆ ಲಗ್ಗೆ ಇಟ್ಟು, ಆಗ ಬೆಲೆಯಲ್ಲಿ ಏರಿಳಿತ ಉಂಟಾಗಲಿದೆ. ಇನ್ನೂ ಕೋವಿಡ್ 19  ಎಫೆಕ್ಟ್ ನಿಂದ ಮಾವು ಬೆಳೆಗಾರರಿಗೆ ಪಾಸು ವಿತರಿಸಿ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕೆಲಸವಂತೂ ಸಾಗಿದೆ. ಜಿಲ್ಲೆಯಲ್ಲಿ 10 ಹಾಪ್‌ಕಾಪ್ಸ್‌ ಮಳಿಗೆಗಳ ಜೊತೆಗೆ ಸಂಚಾರ ಹಾಪ್‌ಕಾಪ್ಸ್‌ ವಾಹನಗಳ ಸೇವೆ ಒದಗಿಸಲಾಗಿದೆ. ಇದಲ್ಲದೇ ಕೆಲ ಮಾವು ರೈತರೇ ಪ್ರತಿ ವರ್ಷದ ತಮ್ಮ ಗ್ರಾಹಕರನ್ನು ಒಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡಿದ್ದು, ಅದರ ಮೂಲಕವೇ ಗ್ರಾಹಕರಿಗೆ ನೇರವಾಗಿ ಹಣ್ಣು ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ 2-3 ರೈತ ಉತ್ಪಾದಕರ ಸಂಘಗಳು ಸಹ ನೇರವಾಗಿ ರೈತರಿಂದ ಮಾವು ಖರೀದಿ ಗ್ರಾಹಕರಿಗೆ ತಲುಪಿಸುವ ಕೆಲಸವೂ ಸಾಗಿದೆ.

ಪ್ರಸಕ್ತ ವರ್ಷ ಶೇ.50ರಷ್ಟು ಮಾವಿನ ಫಸಲಿನ ಕೊರತೆ ಇದ್ದು, ಮೇ ತಿಂಗಳಲ್ಲಿ ಜಿಲ್ಲೆಯಲ್ಲಿ ಬೆಳೆದ ಮಾವು ಬರಲಿದೆ. ಸದ್ಯ 2 ಅಥವಾ 3ನೇ ವಾರದಲ್ಲಿ ಮಾವು ಮೇಳಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮೇ 3ರ ಬಳಿಕವೂ ಲಾಕ್‌ಡೌನ್‌ ಮುಂದುವರಿದರೆ ಮಾವು ಮೇಳ ಆಯೋಜನೆ ಅಸಾಧ್ಯವಾಗಬಹುದು. ಆಗ ಮಾವು ಮೇಳ ಆಯೋಜನೆಯೂ ಸರಕಾರದ ಮಾರ್ಗಸೂಚಿ ಮೇಲೆ ಅವಲಂಬಿತವಾಗಲಿದೆ.-ರಾಮಚಂದ್ರ ಮಡಿವಾಳ, ಉಪನಿರ್ದೇಶಕ, ತೋಟಗಾರಿಕೆ ಇಲಾಖೆ

 

 -ಶಶಿಧರ ಬುದ್ನಿ

Advertisement

Udayavani is now on Telegram. Click here to join our channel and stay updated with the latest news.

Next