Advertisement

ಸಾಲುಸಾಲು ಕ್ರೀಡಾಕೂಟಗಳು ರದ್ದು/ಮುಂದೂಡಿಕೆ; ಕ್ರೀಡಾಜಗತ್ತಿನ ಬಾಗಿಲು ಬಂದ್‌

12:25 PM Mar 28, 2020 | keerthan |

ಕೋವಿಡ್-19ದಾಳಿಗೆ ಇಡೀ ಜಗತ್ತೇ ಬೆಚ್ಚಿ ಬಿದ್ದಿದೆ. ಜಗತ್ತಿನ ಹಲವು ದೇಶಗಳ ಆರ್ಥಿಕತೆ ಕುಸಿದಿದೆ. ಇನ್ನೊಂದೆರಡು ತಿಂಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲವೆಂದರೆ, ಹಲವು ದೇಶಗಳು ದಿವಾಳಿ ಯಾಗುವ ಸಾಧ್ಯತೆಯಿದೆ. ಇದು ಆರ್ಥಿಕ ಸಂಗತಿಯಾಯಿತು. ಇಷ್ಟೇ ಮಹತ್ವದ ವಿಷಯವೊಂದಿದೆ. ಅದು ಕ್ರೀಡಾಜಗತ್ತಿನಲ್ಲಿ ಆಗುತ್ತಿರುವ ತಲ್ಲಣಗಳು. ಈ ವರ್ಷ ಸರಣಿಸರಣಿ ಕೂಟಗಳು ರದ್ದಾಗಿವೆ. ಅದರಿಂದ ಆರ್ಥಿಕ ಹೊಡೆತದ ಜೊತೆಗೆ, ಇನ್ನೂ ಹಲವು ಸಮಸ್ಯೆಗಳು ಉಂಟಾಗಿವೆ. ಹೀಗೆ ರದ್ದಾಗಿರುವ ಮಹತ್ವದ ಕ್ರೀಡಾಕೂಟಗಳು, ಅದರ ಪರಿಣಾಮದ ಚಿತ್ರಣ ಇಲ್ಲಿದೆ.

Advertisement

ಟೆನಿಸ್‌: ಫ್ರೆಂಚ್‌ ಓಪನ್‌ ಮುಂದೂಡಿಕೆ
ವಿಶ್ವದ ಅತ್ಯಂತ ಶ್ರೀಮಂತ ಕ್ರೀಡೆಗಳಲ್ಲಿ ಟೆನಿಸ್‌ ಕೂಡ ಒಂದು. ಅಂತಹ ಕ್ರೀಡೆ ಈಗ ಅತಂತ್ರಗೊಂಡಿದೆ. ಮೇ 24ರಿಂದ ಜೂನ್‌ 7ರವರೆಗೆ ನಡೆಯಬೇಕಿದ್ದ ಫ್ರೆಂಚ್‌ ಓಪನ್‌ ಟೆನಿಸ್‌, ಸೆ.20ರಿಂದ ಅ.4ಕ್ಕೆ ಞಮುಂದೂಡಿಕೆಯಾಗಿದೆ. ಇನ್ನು ಪ್ರತಿಷ್ಠಿತ ವಿಂಬಲ್ಡನ್‌ ಭವಿಷ್ಯ ಮುಂದಿನವಾರ ನಿರ್ಧಾರವಾಗಲಿದೆ. ಫೆಡರೇಷನ್‌ ಕಪ್‌ ಟೆನಿಸ್‌ , ಬುಡಾಪೆಸ್ಟ್‌ನಲ್ಲಿ ಏ.14ರಿಂದ 19ವರೆಗೆ ನಡೆಯಬೇಕಿದ್ದದ್ದು ಅನಿರ್ದಿಷ್ಟಾವಧಿಗೆ ಮುಂದಕ್ಕೆ ತಳ್ಳಲ್ಪಟ್ಟಿದೆ. ಜೂ.7ರವರೆಗೆ ಎಲ್ಲ ಎಟಿಪಿ, ಡಬ್ಲ್ಯುಟಿಎ ಕೂಟಗಳು ತಡೆ ಹಿಡಿಯಲ್ಪಟ್ಟಿವೆ.

ಒಲಿಂಪಿಕ್ಸ್‌: 50,000 ಕೋಟಿ ರೂ. ನಷ್ಟ
ಹೆಚ್ಚು ಕಡಿಮೆ ಎರಡು ತಿಂಗಳ ಲೆಕ್ಕಾಚಾರ, ವಿಶ್ವದ ಹಲವು ಮೂಲೆಗಳಿಂದ ಬಂದ ಒತ್ತಡದ ನಂತರ ಅಂತಾರಾಷ್ಟ್ರೀಯ ಒಲಿಂಪಿಕ್ಸ್‌ ಸಂಸ್ಥೆ ಹಾಗೂ ಆತಿಥೇಯ ಜಪಾನ್‌ ದೇಶಗಳು ಮಾತುಕತೆ ನಡೆಸಿ ಒಲಿಂಪಿಕ್ಸ್‌ ಮುಂದಿನ ವರ್ಷಕ್ಕೆ ಮುಂದೂಡಿವೆ. ಪರಿಣಾಮ ಜಪಾನ್‌ ದೇಶದ ಮೇಲೆ ಭಾರೀ ಒತ್ತಡ ಬಿದ್ದಿದೆ. ಆರ್ಥಿಕವಾಗಿ 50,000 ಕೋಟಿ ರೂ. ನಷ್ಟವಾಗಲಿದೆ. ಇನ್ನು ಪ್ರವಾಸೋದ್ಯಮದ ಮೇಲೆ ಹೊಡೆತ ಬೀಳಲಿದೆ. ಜಗತ್ತಿನಾದ್ಯಂತ ಟಿಕೆಟ್‌ ಕಾದಿರಿಸಿದ್ದ ಅಭಿಮಾನಿಗಳಿಗೆ ಸಮಸ್ಯೆಯಾಗಲಿದೆ. ರಿಯಲ್‌ ಎಸ್ಟೇಟ್‌ ಉದ್ದಿಮೆಗಳಿಗೆ, ಹೋಟೆಲ್‌ ಉದ್ದಿಮೆಗೆ, ಕ್ರೀಡಾಪಟುಗಳಿಗೆ ಸಮಸ್ಯೆಯಾಗಲಿದೆ. ಅಲ್ಲದೇ ಮುಂದಿನವರ್ಷ ಒಲಿಂಪಿಕ್ಸ್‌ ವೇಳೆಯೇ ನಡೆಯಬೇಕಿರುವ ಕ್ರೀಡಾಕೂಟಗಳಿಗೂ ಬಿಸಿ ತಟ್ಟಲಿದೆ.

ಫ‌ುಟ್‌ಬಾಲ್‌: ಯೂರೋ ಕಪ್‌, ಕೋಪಾ ಅಮೆರಿಕ ಮುಂದಿನವರ್ಷ
ಫ‌ುಟ್‌ಬಾಲ್‌ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆ. ಇದನ್ನು ಆಡದ ಪ್ರಮುಖ ದೇಶಗಳೇ ಇಲ್ಲ. ಯೂರೋಪ್‌, ಅಮೆರಿಕ, ಆಫ್ರಿಕಾ ಖಂಡಗಳಲ್ಲಂತೂ ಭಾರತದಲ್ಲಿ ಕ್ರಿಕೆಟ್‌ ಹೇಗೋ, ಹಾಗೆ. ಅಲ್ಲಿ ಫ‌ುಟ್‌ಬಾಲ್‌ ಕಾರಣಕ್ಕೆ ಸಾಮೂಹಿಕ ಹೊಡೆದಾಟಗಳು, ಸಾವುನೋವುಗಳು ಸಂಭವಿಸುವುದು ಮಾಮೂಲಿ. ಅಂತಹ ಫ‌ುಟ್‌ಬಾಲ್‌ ಈಗ ಅತಂತ್ರಕ್ಕೆ ಸಿಲುಕಿದೆ. ಯೂರೋ 2020, ವಿಶ್ವಕಪ್‌ ಫ‌ುಟ್‌ಬಾಲ್‌ಗೆ ಸರಿಸಮ. ಅದು ಜೂ.12ರಿಂದ ಜು.12ರವರೆಗೆ ಯೂರೋಪ್‌ನ 12 ನಗರಗಳಲ್ಲಿ ನಡೆಯಬೇಕಿತ್ತು. ಅದನ್ನು 2021ಕ್ಕೆ ಮುಂದೂಡಲಾಗಿದೆ. ಈ ಕಾರಣದಿಂದ ಮುಂದಿನ ವರ್ಷ ಜು.7ರಿಂದ ಆ.1ರವರೆಗೆ ನಡೆಯಬೇಕಿರುವ ಮಹಿಳಾ ಯೂರೋ ಕಪ್‌ ದಿನಾಂಕ ಬದಲಾಗಬೇಕಿದೆ. ಇನ್ನು ಅಮೆರಿಕ ಖಂಡದ ಕೋಪಾ ಅಮೆರಿಕ ಕೂಟವೂ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ. ಅದರ ಜೊತೆಗೆ ಅತ್ಯಂತ ಪ್ರಮುಖ ಕ್ಲಬ್‌ ಫ‌ುಟ್‌ಬಾಲ್‌ ಕೂಟಗಳ ಪರಿಸ್ಥಿತಿ ಹೀಗಿದೆ.
● ಚಾಂಪಿಯನ್ಸ್‌ ಲೀಗ್‌, ಯೂರೊಪಾ ಲೀಗ್‌, ಮಹಿಳಾ ಚಾಂಪಿಯನ್ಸ್‌ ಲೀಗ್‌ ಮುಂದೂಡಿಕೆಯಾಗಿದೆ. ದಿನಾಂಕ ಗೊತ್ತಾಗಿಲ್ಲ.
● ಏ.30ರವರೆಗೆ ಇಂಗ್ಲಿಷ್‌ ಪ್ರೀಮಿಯರ್‌ ಲೀಗ್‌ ಅಮಾನತಾಗಿದೆ.
● ಏ.2ರವರೆಗೆ ಜರ್ಮನಿಯ ಬುಂಡೆಸ್‌ಲಿಗಾ ಲೀಗ್‌ ಅನ್ನು ತಡೆ ಹಿಡಿಯಲಾಗಿದೆ.
● ಸ್ಪೇನ್‌ನಲ್ಲಿ ಎಲ್ಲ ವೃತ್ತಿಪರ ಫ‌ುಟ್‌ಬಾಲ್‌ ಕೂಟಗಳನ್ನು ತಡೆ ಹಿಡಿಯಲಾಗಿದೆ.
● ಫ್ರಾನ್ಸ್‌ನಲ್ಲಿ ಲೀಗ್‌-1, ಲೀಗ್‌-2 ಅನಿರ್ದಿಷ್ಟಾವಧಿಗೆ ಮುಂದೂಡಿಕೆ.

ಐಪಿಎಲ್‌ ಅತಂತ್ರ: 3000 ಕೋಟಿ ರೂ. ನಷ್ಟ
ಐಪಿಎಲ್‌ ಮಾ.29ರಿಂದ ಶುರುವಾಗಬೇಕಿತ್ತು. ಸದ್ಯದ ಸ್ಥಿತಿಯಲ್ಲಿ ಅದು ರದ್ದಾಗುವುದು ಶೇ.100ರಷ್ಟು ಖಾತ್ರಿಯಾಗಿದೆ. ಅಲ್ಲಿಗೆ ಒಂದೊಂದು ಫ್ರಾಂಚೈಸಿಗೆ ತಲಾ 250 ಕೋಟಿ ರೂ., ಒಟ್ಟಾರೆ 3000ದಿಂದ 3,500 ಕೋಟಿ ರೂ. ನಷ್ಟವಾಗಲಿದೆ. ಬಿಸಿಸಿಐಗೆ ಕನಿಷ್ಠ 1,500 ಕೋಟಿ ರೂ. ಕೈಬಿಡಲಿದೆ. ಅಷ್ಟಲ್ಲದೇ ಈ ಕೂಟದಿಂದ ಭವಿಷ್ಯ ಕಂಡುಕೊಳ್ಳಲು ಸಿದ್ಧರಾಗಿದ್ದ ಹಲವು ಕ್ರಿಕೆಟಿಗರು ಇಕ್ಕಟ್ಟಿಗೆ ಸಿಲುಕಲಿದ್ದಾರೆ

Advertisement

ಪಿಎಸ್‌ಎಲ್‌ ದುಸ್ಥಿತಿ, ಅಂತಾರಾಷ್ಟ್ರೀಯ ಕ್ರಿಕೆಟ್‌ ಅತಂತ್ರ
ಭಾರತ, ಆಸ್ಟ್ರೇಲಿಯ, ಇಂಗ್ಲೆಂಡ್‌, ಪಾಕಿಸ್ತಾನದಂತಹ ರಾಷ್ಟ್ರಗಳಲ್ಲಿ ಕ್ರಿಕೆಟ್‌ ಜನರ ಜೀವನಾಡಿ. ಈಗ ಸಾಲುಸಾಲು ಪಂದ್ಯಗಳು ರದ್ದಾಗಿವೆ. ಕೆಲವಂತೂ ಮುಂದೂಡಿಕೆಯಾಗಿವೆ. ಅವು ನಡೆಯುತ್ತವೆ ಎನ್ನುವ ಖಾತ್ರಿಯಿಲ್ಲ. ಅದರಲ್ಲಿ ದೊಡ್ಡ ಹೊಡೆತವಾಗಿರುವುದು ಪಾಕಿಸ್ತಾನ ಸೂಪರ್‌ ಲೀಗ್‌ ಕ್ರಿಕೆಟ್‌ಗೆ. ಬಹಳ ವರ್ಷಗಳ ನಂತರ ಆ ದೇಶದಲ್ಲಿ ಟಿ20 ಲೀಗ್‌ನ ಎಲ್ಲ ಪಂದ್ಯಗಳು ಆಯೋಜನೆಯಾಗಿದ್ದವು. ಅಲ್ಲಿಗೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಮರಳುವ ಸುಳಿವು ಲಭಿಸಿತ್ತು. ಈ ಹೊತ್ತಿನಲ್ಲಿ ಪಿಎಸ್‌ ಎಲ್‌ನ ಅಂತಿಮ ಪಂದ್ಯಗಳು ಕೊರೊನಾಗೆ ಬಲಿಯಾಗುವುದರೊಂದಿಗೆ, ಪಾಕ್‌ ಅತಂತ್ರಗೊಂಡಿದೆ. ಆ ದೇಶಕ್ಕೆ ಅಂತಾರಾಷ್ಟ್ರೀಯ ತಂಡಗಳು ಬಂದು ಆಡಲು ಇನ್ನಷ್ಟು ತಡವಾಗ ಬಹುದು. ಉಳಿದಂತೆ ಅತಂತ್ರಗೊಂಡಿ ರುವ ಇತರೆ ಸರಣಿಗಳು ಹೀಗಿವೆ
*ಭಾರತ-ದ.ಆಫ್ರಿಕಾ ನಡುವೆ ಲಕ್ನೋ, ಕೋಲ್ಕತದಲ್ಲಿ ನಡೆಯಬೇಕಿದ್ದ 2,3ನೇ ಏಕದಿನ ಪಂದ್ಯಗಳು ರದ್ದು.
● ಆಸ್ಟ್ರೇಲಿಯ-ನ್ಯೂಜಿಲೆಂಡ್‌ ನಡುವಿನ 2 ಮತ್ತು 3ನೇ ಏಕದಿನ ಪಂದ್ಯ ರದ್ದು.
● ಐಸಿಸಿಯ ಟಿ20 ವಿಶ್ವಕಪ್‌, 2023ರ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ಜುಲೈನೊಳಗೆ ಮುಗಿಯಬೇಕಿದ್ದವು. ಅವು ಅನಿರ್ದಿಷ್ಟಾವಧಿಗೆ ಮುಂದೂಡಿಕ

ಇನ್ನಿತರ ಕ್ರೀಡೆಗಳ ಪರಿಸ್ಥಿತಿ
ಪ್ರತಿಷ್ಠಿತ ಫಾರ್ಮುಲಾ ಒನ್‌ ಕಾರ್‌ ರೇಸ್‌ನ 8 ಕೂಟಗಳು ಒಂದೋ ರದ್ದಾಗಿವೆ, ಇಲ್ಲ ಮುಂದೂಡಿಕೆಯಾಗಿವೆ (ಆಸ್ಟ್ರೇಲಿಯನ್‌ ಗ್ರ್ಯಾನ್‌ಪ್ರೀ ರದ್ದು, ಬಹ್ರೇನ್‌ ಗ್ರ್ಯಾನ್‌ ಪ್ರೀ ಮುಂದೂಡಿಕೆ, ವಿಯೆಟ್ನಾಮ್‌ ಗ್ರ್ಯಾನ್‌ ಪ್ರೀ ಮುಂದೂಡಿಕೆ, ಚೀನಾ ಗ್ರ್ಯಾನ್‌ ಪ್ರೀ ಮುಂದೂಡಿಕೆ, ಮೊನಾಕೊ ಗ್ರ್ಯಾನ್‌ ಪ್ರೀ ರದ್ದು, ಅಜರ್‌ಬೈಜಾನ್‌ ಗ್ರ್ಯಾನ್‌ ಪ್ರೀ ಮುಂದೂಡಿಕೆ).
ಋತುವಿನ ಆರಂಭದ ರೇಸ್‌ ಜೂ.14ರಂದು ಕೆನಡಾದ ಮಾಂಟ್ರಿಯಲ್‌ನಲ್ಲಿ ನಡೆಯಲಿದೆ.
● ವಿಶ್ವ ಮೋಟಾರ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ ಮುಂದೂಡಲ್ಪಟ್ಟಿದೆ. ಋತುವಿನ ಮೊದಲ ಕೂಟ ಫ್ರೆಂಚ್‌ ಗ್ರ್ಯಾನ್‌ ಪ್ರೀ ರೂಪದಲ್ಲಿ ಮೇ 17ಕ್ಕೆ ನಡೆಯಲಿದೆ.
● ಎಲ್ಲ ಸೈಕ್ಲಿಂಗ್‌ ಸ್ಪರ್ಧೆಗಳು ಏಪ್ರಿಲ್‌ ಅಂತ್ಯದವರೆಗೆ ತಡೆ ಹಿಡಿಯಲ್ಪಟ್ಟಿವೆ.
● ಅಮೆರಿಕದ ಪ್ರತಿಷ್ಠಿತ ಬಾಸ್ಕೆಟ್‌ಬಾಲ್‌ ಲೀಗ್‌ ಎನ್‌ಬಿಎ ಮಾ.11ಕ್ಕೆ ಆರಂಭವಾಗಬೇಕಿತ್ತು. ಅದು ಅನಿರ್ದಿಷ್ಟಾವಧಿಗೆ ಮುಂದಕ್ಕೆ ತಳ್ಳಲ್ಪಟ್ಟಿದೆ.
● ನಾಂಜಿಂಗ್‌ನಲ್ಲಿ ಮಾ.13ರಿಂದ 15ರವರೆಗೆ ನಡೆಯಬೇಕಿದ್ದ ನಡೆಯಬೇಕಿದ್ದ ವಿಶ್ವ ಒಳಾಂಗಣ ಕ್ರೀಡಾಕೂಟ ಮುಂದಿನ ವರ್ಷ ನಡೆಯಲಿದೆ.
● ಎಫ್ಐಎಚ್‌ ಪ್ರೊ ಹಾಕಿ ಲೀಗ್‌ ಮೇ 17ರವರೆಗೆ ಅಮಾನತು
● ಶೂಟಿಂಗ್‌ ವಿಶ್ವಕಪ್‌, ನವದೆಹಲಿಯಲ್ಲಿ ಮೇ 5ರಿಂದ 12ರವರೆಗೆ
ನಡೆಯಬೇಕಿದ್ದದ್ದು, ಜೂ.2-9ರವರೆಗೆ ಮುಂದೂಡಿಕೆ
● ಜರ್ಮನಿ ಬಾಕ್ಸಿಂಗ್‌ ವಿಶ್ವಕಪ್‌ ರದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next