Advertisement

ಕೋವಿಡ್ 19: ಲಾಕ್‌ಡೌನ್‌ನಿಂದ ಮೀನುಗಾರರ ಉಪವಾಸ

05:31 PM Apr 03, 2020 | Suhan S |

ಆಲಮಟ್ಟಿ: ಕೋವಿಡ್ 19 ವೈರಸ್‌ ತಡೆಗಟ್ಟಲು ಕೇಂದ್ರ ಸರ್ಕಾರ ಇಡೀ ದೇಶವನ್ನು ಲಾಕ್‌ ಡೌನ್‌ ಮಾಡಿರುವುದರಿಂದ ಮೀನುಗಾರರು ಉಪವಾಸ ಮಲಗುವಂತಾಗಿದೆ. ನದಿಯಲ್ಲಿ ಮೀನು ಹಿಡಿಯುವುದಕ್ಕೆ ನಿರ್ಬಂಧ ಹೇರಿರುವುದರಿಂದ ನದಿಗೆ ಬಲೆ ಹಾಕಲು ಮೀನುಗಾರರಿಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ, ಅವರ ಬದುಕು ತೀರಾ ದುಸ್ತರವಾಗಿದೆ.

Advertisement

ವಂಶಪಾರಂಪರ್ಯವಾಗಿ ಕೆಲವು ಕುಟುಂಬಗಳು ಮೀನು ಹಿಡಿಯುವದನ್ನೇ ಕಾಯಕ ಮಾಡಿಕೊಂಡಿದ್ದರೆ, ಇನ್ನುಳಿದಂತೆ ಸುಮಾರು 35ವರ್ಷಗಳಿಂದ ಕೃಷ್ಣಾ ನದಿಯಲ್ಲಿ ಮೀನು ಹಿಡಿದು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿಯೂ ಲಾಕ್‌ಡೌನ್‌ ಆಗಿರುವುದರಿಂದ ನದಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ.

ಹಸಿವು ಹೆಚ್ಚಿಸಿದ ಲಾಕ್‌ಡೌನ್‌: ಪ್ರತಿವರ್ಷ ಬೇಸಿಗೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಟೆಂಡರ ಪಡೆದಿರುವ ಗುತ್ತಿಗೆದಾರರು ಸ್ಥಳೀಯ ಮೀನುಗಾರರು ಹಾಗೂ ಮುದ್ದೇಬಿಹಾಳ ತಾಲೂಕಿನ ಬಲದಿನ್ನಿಯ ಮೀನು ಹಿಡಿಯುವವರನ್ನು ಕರೆದುಕೊಂಡು ಬರುತ್ತಿದ್ದರು. ಅವರು ಸಂಗ್ರಹ ಮಾಡಿದ ಮೀನನ್ನು ಮುಂಬೈ, ಸೋಲಾಪುರ ಸೇರಿದಂತೆ ವಿವಿಧ ಪ್ರದೇಶಗಳಿಗೆ ಸಾಗಿಸಲಾಗುತ್ತಿತ್ತು. ಇದರಿಂದ ನೂರಾರು ಕುಟುಂಬಗಳು ನೇರವಾಗಿ ಮೀನು ಹಿಡಿದು ಬದುಕು ಕಟ್ಟಿಕೊಳ್ಳುತ್ತಿದ್ದವು. ಇನ್ನುಳಿದಂತೆ ಸಾಗಾಣಿಕೆ, ಮಾರಾಟಗಾರರು ಸೇರಿದಂತೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹಲವಾರು ಕುಟುಂಬಗಳು ಬದುಕು ಸಾಗಿಸುತ್ತಿದ್ದವು. ರಾಜ್ಯದಲ್ಲಿ 144 ಕಲಂ ಜಾರಿಯಾಗಿರುವುದರಿಂದ ಮೀನು ಹಿಡಿಯುವುದು, ಸಾಗಾಣಿಕೆ ಹಾಗೂ ಮಾರಾಟವನ್ನು ನಿರ್ಬಂಧಿಸಿರುವುದರಿಂದ ಮೀನು ಹಿಡಿಯುವವರ ಬದುಕು ಕಳೆಗುಂದುವಂತಾಗಿದೆ.

ಆಲಮಟ್ಟಿ, ಅರಳದಿನ್ನಿ,ಚಿಮ್ಮಲಗಿ, ಗುಳಬಾಳ, ಸೀತಿಮನಿ ಸೇರಿದಂತೆ ಕೆಲವು ಗ್ರಾಮಗಳಿಂದ ಆಲಮಟ್ಟಿ ಲಾಲಬಹದ್ದೂರಶಾಸ್ತ್ರಿ ಜಲಾಶಯ ನಿರ್ಮಾಣಕ್ಕಾಗಿ ಭೂಮಿಯನ್ನು ಕಳೆದುಕೊಂಡಿರುವುದರಿಂದ ಕೆಲವರು ಬೇರೆ ಗ್ರಾಮಗಳಿಗೆ ತೆರಳಿ ಕೃಷಿ ಕಾರ್ಮಿಕ, ಗಾರೆ, ಉದ್ಯಾನಗಳಲ್ಲಿ ದಿನಗೂಲಿಗಳಾಗಿ ಹಾಗೂ ಮೀನುಗಾರಿಕೆಯನ್ನೇ ಅವಲಂಬಿಸಿದ್ದರು. ಒಟ್ಟಾರೆ ಮೀನುಗಾರರ ಒಲೆ ಹೊತ್ತಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಅವರಿಗೆ ಆಹಾರ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕೆಂದು ತಾಪಂ ಸದಸ್ಯ ಮಲ್ಲು ರಾಠೊಡ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next