ಬಾಗಲಕೋಟೆ: ಜಿಲ್ಲೆಯ ರೈತರು ಕಷ್ಟಪಟ್ಟು ದುಡಿದು ಇನ್ನೇನು ಹೊಟ್ಟೆತುಂಬ ಊಟ ಮಾಡಬೇಕೆನ್ನುವಷ್ಟರಲ್ಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕೋವಿಡ್ 19 ಕಂಟಕವಾಗಿ ಕಾಡುತ್ತಿದೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ರವಾಹದಿಂದ ನಲುಗಿದ್ದ ಜಿಲ್ಲೆಯ ರೈತರು, ಇದೀಗ ಕೋವಿಡ್ 19 ವೈರಸ್ ಭೀತಿಯಿಂದ ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದೇ ಕಂಗಾಲಾಗಿದ್ದಾರೆ.
ಜನರ ಕೈಗೆ ಸಿಗ್ತಿಲ್ಲ ; ರೈತರಿಗೆ ಮಾರಲು ಆಗ್ತಿಲ್ಲ : ಜನರಿಗೆ ತರಕಾರಿ, ಹಣ್ಣು ಎಲ್ಲವೂ ಬೇಕಿವೆ. ಆದರೆ, ಖರೀದಿ ಮಾಡಲು ಆಗುತ್ತಿಲ್ಲ. ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿವೆ. ಇನ್ನು ಕಷ್ಟಪಟ್ಟು ಬೆಳೆದ ರೈತರೂ ಮಾರಾಟ ಮಾಡಲು ಸಿದ್ಧರಿದ್ದಾರೆ. ಹಾಕಿರುವ ಹಣವಾದರೂ ಬರಲಿ ಎಂದು ತುಡಿಯುತ್ತಿದ್ದಾರೆ. ಆದರೆ, ಅವರಿಗೆ ಮಾರಾಟ ಮಾಡಲು ಆಗುತ್ತಿಲ್ಲ.
ಯಾವ ಬೆಳೆ ಎಷ್ಟು ?: ಜಿಲ್ಲೆಯಲ್ಲಿ 56,486.56 ಹೆಕ್ಟೇರ್ ಪ್ರದೇಶದಲ್ಲಿ ತರಕಾರಿ ಹಾಗೂ ವಿವಿಧ ಹಣ್ಣು ಬೆಳೆ ಬೆಳೆಯಲಾಗುತ್ತದೆ. 665.45 ಹೆಕ್ಟೇರ್ ಮಾವು, 1250 ಹೆಕ್ಟೇರ್ ಲಿಂಬೆ, 358.37 ಸಪೋಟ, 2911 ಹೆಕ್ಟೇರ್ ದಾಳಿಂಬೆ, 3165 ಹೆಕ್ಟೇರ್ ದ್ರಾಕ್ಷಿ, 520ರಿಂದ 700 ಹೆಕ್ಟೇರ್ ಕಲ್ಲಂಗಡಿ ಹೀಗೆ ವಿವಿಧ ಬೆಳೆ ಬೆಳೆಯಲಾಗಿದೆ. ತೋಟಗಾರಿಕೆ ಇಲಾಖೆಯ ಪ್ರಕಾರ 10233.31 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಹಣ್ಣು ಬೆಳೆಯುತ್ತಿದ್ದು, ಇದರಿಂದ 2,18,596.78 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತದೆ. ಇದರಿಂದ 48047.22 ಲಕ್ಷ ವಾರ್ಷಿಕ ಮೌಲ್ಯದ ಹಣ್ಣು ಬೆಳೆ ಮಾರುಕಟ್ಟೆಗೆ ಬರುತ್ತಿತ್ತು. ಆದರೆ, ಈ ಬಾರಿ ಇಷ್ಟೊಂದು ಬೆಳೆ ಬೆಳೆದರೂ ಅದಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗದ ಪರಿಸ್ಥಿತಿ ಬಂದೋದಗಿದೆ.
ಹಾಪ್‌ಕಾಮ್ಸ್ ಸಕ್ರಿಯವಾಗಲಿ: ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಲೆಂದೇ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾಗೂ ಹಾಪ್‌ಕಾಮ್ಸ್ ಇವೆ. ಸರ್ಕಾರದ ಅಧೀನದಲ್ಲೇ ಬರುವ ಈ ಸಂಸ್ಥೆಗಳೂ, ಕೋವಿಡ್ 19 ಭೀತಿಗೆ ಯಾವುದೇ ಕಾರ್ಯ ಮಾಡದ ಅನಿವಾರ್ಯತೆಯಲ್ಲಿ ಸಿಲುಕಿವೆ. ಆದರೆ, ತಕ್ಷಣಕ್ಕೆ ಹಾನಿಯಾಗುವ ಬಾಳೆ, ಕಲ್ಲಂಗಡಿ, ಟೊಮ್ಯಾಟೋ, ಬದನೆಕಾಯಿ ಸಹಿತ ವಿವಿಧ ತರಕಾರಿ ಮಾರಾಟದ ವ್ಯವಸ್ಥೆಗೆ ಹಾಪ್‌ಕಾಮ್ಸ್ ಮೂಲಕ ವ್ಯವಸ್ಥೆ ಮಾಡಲು ಅವಕಾಶವಿದೆ.
ತೋಟಗಾರಿಕೆ ಬೆಳೆ ಬೆಳೆಯುವ ರೈತರು ತೀವ್ರ ಸಂಕಷ್ಟದಲ್ಲಿದ್ದೇವೆ. ಪ್ರವಾಹದಿಂದ ಚೇತರಿಸಿಕೊಳ್ಳಲಾಗದ ರೈತರು, ಈಗ ಮತ್ತೆ ಕೋವಿಡ್ 19 ಭೀತಿಯಿಂದ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಕಂಗಾಲಾಗಿದ್ದಾರೆ. ಹಣ್ಣು, ತರಕಾರಿ ಮಾರಾಟಕ್ಕೆ ಜಿಲ್ಲಾಡಳಿತ ಪರವಾನಿಗೆ ನೀಡಿದೆಯಾದರೂ, ಬೇರೆ ಬೇರೆ ಕಡೆ ಪೂರೈಕೆ ಮಾಡುವಷ್ಟು ವಿವಿಧ ಹಣ್ಣು ನಮ್ಮ ಜಿಲ್ಲೆಯಲ್ಲಿ ಬೆಳೆಯಲಾಗುತ್ತಿದೆ. ಹೀಗಾಗಿ ಎಲ್ಲೂ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೊಪ್ಪಳದ ಮಾದರಿಯಂತೆ ಹಾಪ್‌ಕಾಮ್ಸ್ ನಮ್ಮ ನೆರವಿಗೆ ಬರಬೇಕು
. ಬಿ.ಎಂ. ದೇಸಾಯಿ, ಅಧ್ಯಕ್ಷ, ಕೃಷಿಕ ಸಮಾಜ, ಬಾಗಲಕೋಟೆ
–ಶ್ರೀಶೈಲ ಕೆ. ಬಿರಾದಾರ