Advertisement

ಪಾತಾಳಕ್ಕೆ ಕುಸಿದ ಬೆಲೆ: ತೈಲ ರಾಷ್ಟ್ರಗಳ ಸೊಕ್ಕಡಗಿಸಿದ ಕೋವಿಡ್- 19

09:29 AM Apr 06, 2020 | mahesh |

ಮಣಿಪಾಲ: ಕೋವಿಡ್- 19 ವೈರಸ್‌ ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತೇ ಸ್ತಬ್ದವಾಗಿದೆ. ತೈಲದ ಬೇಡಿಕೆ ಕಡಿಮೆಯಾಗಿ ಸಂಗ್ರಹಾಗಾರಗಳು ಭರ್ತಿಯಾಗಿವೆ. ಇದು ಜಗತ್ತಿನ ಅಗ್ರ ತೈಲ ಉತ್ಪನ್ನ ರಾಷ್ಟ್ರಗಳಿಗೆ ಬಹುದೊಡ್ಡ ಸಂಕಷ್ಟವಾಗಿ ಬದಲಾಗಿದೆ. ತೈಲ ಬೆಲೆಯೊಂದಿಗೆ ಆಟವಾಡುತ್ತಿದ್ದ ರಾಷ್ಟ್ರಗಳನ್ನು ಒಂದರ್ಥದಲ್ಲಿ ಕೋವಿಡ್- 19 ತನ್ನ ಹದ್ದು ಬಸ್ತಿನಲ್ಲಿಟ್ಟುಕೊಂಡಿದೆ.

Advertisement

ಈ ರಾಷ್ಟ್ರಗಳು ತನ್ನ 100 ವರ್ಷಗಳ ಇತಿಹಾಸದಲ್ಲಿ ಅತ್ಯಂತ ದೊಡ್ಡ ಸವಾಲನ್ನು ಎದುರಿಸುತ್ತಿವೆ. ಉದ್ಯಮದ ಸಂರಚನೆಯನ್ನೇ ಬದಲಾಯಿಸಬೇಕಾದ ಅನಿವಾರ್ಯತೆಯನ್ನು ಈ ಬೆಳವಣಿಗೆ ಸೃಷ್ಟಿಸೀತೆಂಬ ಚರ್ಚೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾವು ಪಡೆದುಕೊಂಡಿವೆ.

ಜಾಗತಿಕ ತಾಪಮಾನ ಕಡಿಮೆ?
ಹಾಗೆ ನೋಡುವುದಾದರೆ ಇಂಧನ ಉದ್ಯಮಗಳಿಗೆ ಈ ಬೆಳವಣಿಗೆ ಕಹಿಯಾಗಿದ್ದರೂ, ಪರಿಸರಕ್ಕೆ ಸಿಹಿ. ಇಂದು ಬಹುತೇಕ ರಾಷ್ಟ್ರಗಳು ಹವಾಮಾನ ವೈಪರೀತ್ಯದ ಪರಿಣಾಮಕ್ಕೆ ಗುರಿಯಾಗಿವೆ. ಇಂಧನ ಬಳಕೆ ಹೆಚ್ಚಾಗಿ ಕಾರ್ಬನ್‌ ಪ್ರಮಾಣ ಪರಿಸರದಲ್ಲಿ ಹೆಚ್ಚಾದ ಕಾರಣ ಪ್ರಕೃತಿ ಮಲಿನಗೊಂಡಿದೆ. ಇದನ್ನು ಕಡಿಮೆ ಮಾಡಲು ಇಂಧನ ಬಳಕೆಗೆ ಕಡಿವಾಣ ಹಾಕುವುದು ಅಗತ್ಯವಿತ್ತು. ಇದೀಗ ಪ್ರಕೃತಿಯೇ ಆ ಕಾರ್ಯವನ್ನು ಮಾಡುತ್ತಿದೆ. ತೈಲಗಳಿಗೆ ಬೇಡಿಕೆ ಇಲ್ಲ ಎಂದರೆ ರಸ್ತೆಗಳಲ್ಲಿ ವಾಹನಗಳ ಸಂಚಾರ, ಕಾರ್ಖಾನೆಗಳಿಗೆ ಬೀಗ ಬಿದ್ದಿದೆ ಎಂದರ್ಥ. ಇದು ಹವಾ ಮಾನ ವೈಪರೀತ್ಯದ ಪರಿಣಾಮಗಳಿಗೆ ಶಾಶ್ವತ ಪರಿಹಾರವಲ್ಲವಾದರೂ ಒಂದು ಸಣ್ಣ ಮಟ್ಟಿನ ಪ್ರಯೋಜನವಾಗಬಹುದು. ತಜ್ಞರ ಪ್ರಕಾರ ತೈಲ ಮತ್ತು ಅನಿಲ ಬಳಕೆಯ ಬೇಡಿಕೆ ಕುಸಿದಿರುವುದು ವಾತಾವರಣವು ಚೇತರಿಸಿಕೊಳ್ಳಲು ಅನುಕೂಲವಾಗಲಿದೆ. ಕೆಲವರ ದೃಷ್ಟಿಕೋನದಲ್ಲಿ ಇಂಧನ ಉದ್ಯಮವು ಮತ್ತೆ ಪುಟಿದೇಳಲಿದೆ ಎಂಬ ವಾದವೂ ಇದೆ. ಕಳೆದ ತಿಂಗಳು ರಷ್ಯಾ ಮತ್ತು ಸೌದಿ ರಾಷ್ಟ್ರಗಳ ವ್ಯಾಪಾರ ಮನಸ್ಥಿತಿಯಿಂದಾಗಿ ತೈಲದರಗಳು ಇಳಿಕೆಯಾಗಿದ್ದವು. 30 ವರ್ಷಗಳ ಬಳಿಕ ಸೌದಿ ಶೇ. 30ರಷ್ಟು ದರ ಕಡಿತ ಮಾಡಿ ಉತ್ಪಾದನೆಯನ್ನು ಹೆಚ್ಚಿಸಲು ಮುಂದಾಗಿತ್ತು. ಆದರೆ ಇದರ ಬೆನ್ನಲ್ಲೇ ಜಗತ್ತಿಗೆ ಕೊರೊನಾ ಸಿಡಿಲಿನಂತೆ ಬಡಿದಿದ್ದು. ಜಗತ್ತು ಸ್ತಬ್ದವಾಗಿದೆ.

ಏನೇನಾಯಿತು?
ಬಹುತೇಕ ರಾಷ್ಟ್ರಗಳು ಲಾಕ್‌ಡೌನ್‌ಘೋಷಿಸಿವೆ. ಸಂಚಾರ ನಿರ್ಬಂಧದ ಹಿನ್ನೆಲೆಯಲ್ಲಿ ತೈಲ ಬೇಡಿಕೆ ನೆಲಕಚ್ಚಿದೆ. ಪ್ರತಿ ಬ್ಯಾರೆಲ್‌ ಕಚ್ಚಾ ತೈಲ ದರ 22 ಡಾಲರ್‌ಗೆ ಇಳಿದಿರುವುದು ತೈಲ ಸಂಸ್ಕರಣ ಘಟಕಗಳು ಹಾಗೂ ಕಚ್ಚಾ ತೈಲ ಉತ್ಪಾದಕ ಕಂಪನಿಗಳಿಗೆ ಭಾರೀ ಆತಂಕಕ್ಕೀಡು ಮಾಡಿದೆ. ನ್ಯೂಯಾರ್ಕ್‌ನಲ್ಲಿ ತೈಲ ಫ್ಯೂಚರ್ಸ್‌ಶೇ. 4.5ರಷ್ಟು ಕುಸಿದಿದೆ. ಭಾರತ ಸೇರಿದಂತೆ ದಕ್ಷಿಣ ಕೊರಿಯಾವರೆಗೂ ಸಂಸ್ಕರಣ ಘಟಕಗಳಿಂದ ಕಚ್ಚಾ ತೈಲ ಬೇಡಿಕೆ ಕಡಿಮೆಯಾಗಿದೆ. ಮುಂದಿನ ತಿಂಗಳಲ್ಲಿ ನಿತ್ಯ ಬಳಕೆ 22 ಮಿಲಿಯನ್‌ಬ್ಯಾರೆಲ್‌ಗೆ ಇಳಿಯುವ ಸಾಧ್ಯತೆ ಇದೆ. ಕಳೆದ 35 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಉತ್ಪಾದಕರು ಉತ್ಪಾದನೆ ಕಡಿತಗೊಳಿಸುವ ಅನಿವಾರ್ಯತೆಗೆ ಸಿಲುಕಿದ್ದಾರೆ.

ಬ್ರೆಂಟ್‌ಶೇ. 3.4 ಕಡಿಮೆ
ಗೋಲ್ಡ್‌ಮ್ಯಾನ್‌ ಸ್ಯಾಕ್ಸ್‌ ವೆಸ್ಟ್‌ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌ ತೈಲ ಫ್ಯೂಚರ್ಸ್‌ಪ್ರತಿ ಬ್ಯಾರೆಲ್‌ಗೆ ಶೇ 3.1ರಷ್ಟು ಇಳಿಕೆಯಾಗಿ 21.89 ಡಾಲರ್‌ತಲುಪಿದೆ. ಬ್ರೆಂಟ್‌ ಕಚ್ಚಾ ತೈಲ ಪ್ರತಿ ಬ್ಯಾರೆಲ್‌ಗೆ ಶೇ 3.4ರಷ್ಟು ಕಡಿಮೆಯಾಗಿ 25.45 ಡಾಲರ್‌ಮುಟ್ಟಿದೆ. ತೈಲ ಸಂಗ್ರಹ ಸಾಕಷ್ಟು ಇರುವುದರಿಂದ ತೈಲ ಆಮದು ಮಾಡಿಕೊಳ್ಳುವುದನ್ನು ಪಾಕಿಸ್ಥಾನ ಗುರುವಾರದಿಂದ ನಿಲ್ಲಿಸಿದೆ. ಅಲ್ಲಿ ಸಂಗ್ರಹಾಗಾರಗಳ ಕೊರತೆ ಇದೆ. ಕೆನಡಾದ ಘನ ಕಚ್ಚಾ ತೈಲ ದರ ಅತಿ ಕಡಿಮೆ ಮಟ್ಟ ತಲುಪಿದ್ದು, ಅದನ್ನು ಸಂಸ್ಕರಣ ಘಟಕಗಳಿಗೆ ಸಾಗಣೆ ಮಾಡುವ ವೆಚ್ಚ ತೈಲ ದರಕ್ಕಿಂತಲೂ ಅಧಿಕವಾಗಲಿದೆ. ಇದರಿಂದಾಗಿ ಕಚ್ಚಾ ತೈಲ ಉತ್ಪಾದಕರು ಇನ್ನಷ್ಟು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆ ಹೆಚ್ಚೇ ಇದೆ. ಅಂತಾರಾಷ್ಟ್ರೀಯ ವಿಮಾನಯಾನ ಕ್ಷೇತ್ರ ಚೇತರಿಸಿಕೊಳ್ಳಲು ವಿಫಲವಾದರೆ ಮತ್ತೂಂದಿಷ್ಟು ಅನಾಹುತ ಘಟಿಸಲಿದೆ.

Advertisement

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ತೈಲ ಉದ್ಯಮವು ಬಹಳ ಒತ್ತಡದಲ್ಲಿತ್ತು. ಈಗ ತೈಲೋದ್ಯಮದ ನೆರವಿಗೆ ಸ್ಥಳೀಯ ಸರಕಾರಗಳೂ ನೆರವಿಗೆ ಬರುತ್ತವೆಯೇ ಕಾದು ನೋಡಬೇಕಿದೆ.

ಸಾಗಾಣಿಕೆ ವೆಚ್ಚಕ್ಕಿಂತ ಅನಿಲ ದರ ಅಗ್ಗ
ಕೋವಿಡ್‌ -19 ನಿಜವಾಗಿಯೂ ತೈಲ ಬೆಲೆ ಯುದ್ಧ ಮತ್ತು ಅನಿಲ ವಲಯದ ಗೊಂದಲಕ್ಕೆ ಉತ್ತರ ಕೊಟ್ಟಿದೆ. ಈಗ ಆಯಾ ರಾಷ್ಟ್ರಗಳಿಗೆ ಕಂಪನಿಗಳನ್ನು ಉಳಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ಇಂಧನ ಉತ್ಪಾದನೆಯೇ ಬಹುತೇಕ ರಾಷ್ಟ್ರಗಳ ನಿರ್ಣಾಯಕ ಜಿಡಿಪಿಯಾಗಿದ್ದು, ಸಂಕಷ್ಟದ ದಿನ ಆರಂಭವಾದ ಸೂಚನೆಗಳು ಗೋಚರಿಸುತ್ತಿವೆ. ಬಹುತೇಕ ಕಡೆಗಳಲ್ಲಿ ಇಂಧನ ದರಗಳು ಅದರ ಸಾಗಾಣಿಕೆ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಲಭ್ಯ ಇವೆ.

-ಕಾರ್ತಿಕ್‌ ಆಮೈ

Advertisement

Udayavani is now on Telegram. Click here to join our channel and stay updated with the latest news.

Next