Advertisement
ಒಂದೂವರೆ ತಿಂಗಳಿನಿಂದ ಎಲ್ಲ ನಿರ್ಮಾಣ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಅಂತೆಯೇ ಸ್ವಚ್ಛ ಭಾರತ್ ಮಿಷನ್‌ನಡಿ ನಿರ್ಮಾಣವಾಗಬೇಕಿದ್ದ 111ಕ್ಕೂ ಅಧಿಕ ಶೌಚಾಲಯಗಳು ಬಾಕಿಯಾಗಿವೆ. 111 ಶೌಚಾಲಯಗಳಿಗೆ ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ಆದರೆ ಕಾಮಗಾರಿ ಪೂರ್ಣಗೊಂಡಿಲ್ಲ.
ಶೌಚಾಲಯ ಪ್ರೋತ್ಸಾಹಧನ ಪಡೆಯಲು ಫಲಾನುಭವಿಗಳು ನವೀಕರಣಗೊಂಡ ಪಡಿತರ ಚೀಟಿ, ಆಧಾರ್ ಹೊಂದಿರುವುದು ಕಡ್ಡಾಯ. ಆದರೆ ಪ್ರಸ್ತುತ ಪಡಿತರ ಚೀಟಿ ನವೀಕರಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಕೂಡ ಶೌಚಾಲಯ ನಿರ್ಮಾಣಕ್ಕೆ ತೊಡಕಾಗಿದೆ. 2012ರಲ್ಲಿ ದ.ಕ. ಜಿಲ್ಲೆಯ ಎಲ್ಲ ಗ್ರಾ.ಪಂ.ಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿದ್ದವು. 2016ರಲ್ಲಿ ಬಯಲು ಶೌಚ ಮುಕ್ತ ಜಿಲ್ಲೆ ಎಂಬ ಪುರಸ್ಕಾರ ಪಡೆದಿತ್ತು. ಸ್ವಚ್ಛ ಭಾರತ್ ಮಿಷನ್‌ನಡಿ 2015ನೇ ಸಾಲಿನಿಂದ 2019-20ನೇ (ಮಾರ್ಚ್ ವರೆಗೆ) ಸಾಲಿನವರೆಗೆ 4,016 ವೈಯಕ್ತಿಕ ಶೌಚಾಲಯ ನಿರ್ಮಿಸಲಾಗಿದೆ. ಈ ಹಿಂದೆ ವೈಯಕ್ತಿಕ ವೆಚ್ಚದಲ್ಲಿ ನಿರ್ಮಿಸಿ, ಈಗ ಅದು ನಿರುಪಯುಕ್ತ ಸ್ಥಿತಿಗೆ ಬಂದಿದ್ದರೆ ಅಂತಹ ಶೌಚಾಲಯಗಳನ್ನು ತೆರವು ಮಾಡಿ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ನಿರ್ಮಿಸಲಾಗುತ್ತದೆ. ಹೊಸದಾಗಿ ಮನೆ ನಿರ್ಮಿಸಿದ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗುತ್ತಿದೆ. ಬಾಕಿ ಇರುವ ಶೌಚಾಲಯಗಳ ಬಗ್ಗೆ ಪುನರ್ ಸರ್ವೆ ನಡೆಯುತ್ತಿದ್ದು ಇನ್ನಷ್ಟು ಕಡೆ ಬಾಕಿಯಾಗಿರುವ ಸಾಧ್ಯತೆಗಳಿವೆ.
Related Articles
ಸ್ವಚ್ಛ ಭಾರತ್ ಮಿಷನ್‌ನಡಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಎಸ್ಸಿ/ಎಸ್ಟಿ ಸಮುದಾಯಗಳಿಗೆ ಘಟಕವೊಂದಕ್ಕೆ 15 ಸಾವಿರ ರೂ., ಇತರರಿಗೆ 12 ಸಾವಿರ ರೂ. ಪ್ರೋತ್ಸಾಹ ಧನವನ್ನು ನೀಡಲಾಗುತ್ತದೆ. ಸರಕಾರದ ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿದ್ದರೆ ಅದರ ಜತೆಗೆ ನಿರ್ಮಿಸುವ ವೈಯಕ್ತಿಕ ಶೌಚಾಲಯಗಳನ್ನು ನರೇಗಾ ಮೂಲಕ ನಿರ್ಮಿಸಲು ಅವಕಾಶವಿದೆ. ಆದರೆ ಲಾಕ್‌ಡೌನ್‌ನಿಂದಾಗಿ ಸಾಮಗ್ರಿಗಳ ಕೊರತೆ ಎದುರಾಗಿದೆ.
Advertisement
ತ್ವರಿತ ಕಾಮಗಾರಿಗೆ ಸೂಚನೆ6 ತಿಂಗಳ ಹಿಂದೆ 175 ವೈಯಕ್ತಿಕ ಶೌಚಾಲಯ ನಿರ್ಮಾಣ ಗುರಿ ಇತ್ತು. ಅದರಲ್ಲಿ 65 ಶೌಚಾಲಯ ನಿರ್ಮಾಣವಾಗಿದೆ. ಆದರೆ, ಒಂದೂವರೆ ತಿಂಗಳುಗಳಿಂದ ಕಾಮಗಾರಿಗಳು ಸ್ಥಗಿತಗೊಂಡಿದ್ದವು. ಮಳೆಗಾಲದೊಳಗೆ ಈ ಕಾಮಗಾರಿ ಮುಗಿಸುವಂತೆ ಸೂಚಿಸಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಮಳೆಗಾಲದಲ್ಲಿಯೂ ಕಾಮಗಾರಿ ನಡೆಸಬಹುದು.
-ಮಂಜುಳಾ, ಜಿಲ್ಲಾ ಸಂಯೋಜಕಿ, ಸ್ವಚ್ಛ ಭಾರತ್ ಮಿಷನ್, ದ.ಕ.