ಮೈಸೂರು: ವರ್ಷದ ಮೊದಲ ಹಬ್ಬವಾದ ಯುಗಾದಿ ವರ್ಷದಿಂದ ವರ್ಷಕ್ಕೆ ಸಡಗರ ಸಂಭ್ರಮದಿಂದ ಆಚರಿಸಲ್ಪಡುವುದು ವಾಡಿಕೆ. ಆದರೆ ಈ ಬಾರಿ ಕೋವಿಡ್ 19 ಭೀತಿಯಿಂದಾಗಿ ಯುಗಾದಿ ಸಡಗರಕ್ಕೆ ಬ್ರೇಕ್ ಬಿದ್ದಂತಾಗಿದೆ.
ಯುಗಾದಿ ನಮ್ಮೆಲ್ಲರಿಗೂ ಹರ್ಷದ ಸಂಕೇತ. ಅದರಲ್ಲೂ ಹಿಂದೂ ಧರ್ಮೀಯರಿಗೆ ಶುಭದ ಸಂಕೇತ. ಎಲ್ಲಾ ಸಕಲ ಕಾರ್ಯ ಗಳಿಗೂ ಮುನ್ಸೂಚನೆ. ಆದರೆ, ಜಗತ್ತಿನೆಲ್ಲಡೆ ತನ್ನ ಕಬಂಧ ಬಾಹು ವಿಸ್ತರಿಸುತ್ತಿರುವ ಕೋವಿಡ್ -19 ಭೀತಿಯಿಂದ ಇಡೀ ರಾಜ್ಯವೇ ಲಾಕ್‌ಡೌನ್ ಆಗಿರುವುದರಿಂದ ಜನರು ಸಂಭ್ರಮದಿಂದ ಹಬ್ಬ ಆಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಜಿಲ್ಲಾಡಳಿತ ಮೈಸೂರನ್ನು ಲಾಕ್‌ಡೌನ್ ಮಾಡಿರುವುದರಿಂದ ಸಭೆ, ಸಮಾರಂಭ, ಉತ್ಸವ, ಜಾತ್ರೆ ಮಾಡದಂತೆ ಕರೆ ನೀಡಿದ್ದು, ಗುಂಪು ಸೇರದಂತೆ ಎಚ್ಚರಿಕೆ ನೀಡಿದೆ. ಈ ನಡುವೆ ಅಗತ್ಯ ವಸ್ತುಗಳಾದ ಹಣ್ಣು, ತರಕಾರಿ, ಆಹಾರ ಸಾಮಗ್ರಿ ಸೇರಿ ದಿನಸಿ ಪದಾರ್ಥಗಳ ಮಾರಾಟಕ್ಕೆ ಅನುವು ಮಾಡಿದೆಯಾದರೂ, ವಾಣಿಜ್ಯ ವಹಿವಾಟಿಗೆ ನಿರ್ಬಂಧ ವಿಧಿಸಿದೆ. ಪರಿಣಾಮ ಹೊಸ ಬಟ್ಟೆ ಖರೀದಿಸಿ ಹಬ್ಬ ಆಚರಿಸುವ ಜನರ ಕನಸಿಗೆ ತಣ್ಣೀರು ಎರಚಿದಂತಾಗಿದೆ.
ಮನೆಯಲ್ಲೇ ಹಬ್ಬ: ಪ್ರತಿ ವರ್ಷ ಹಬ್ಬದಂದು ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುವ ವಾಡಿಕೆಗೂ ಕೊರೊನಾ ಕರಿ ನೆರಳು ಬಿದ್ದಿದೆ. ಈಗಾಗಲೇ ಎಲ್ಲಾ ದೇಗುಲಗಳ ಬಾಗಿಲು ಮುಚ್ಚಿಸಿರುವುದರಂದ ಜನ ಮನೆಯಲ್ಲೇ ಹಬ್ಬ ಆಚರಿಸಿಕೊಳ್ಳಲು ಅಣಿಯಾಗುತ್ತಿದ್ದಾರೆ.
ಹೂ ಬೆಳೆದ ರೈತರಿಗೆ ಸಂಕಷ್ಟ: ಯುಗಾದಿ ಹಬ್ಬಕ್ಕೆಂದೇ ರೈತರು ವಿವಿಧ ಭಾಗಗಳಲ್ಲಿ ಸೇವಂತಿಗೆ, ಮಲ್ಲಿಗೆ, ಕಾಕಡ, ಚೆಂಡು ಹೂ ಮತ್ತಿತರೆ ಹೂ ಬೆಳೆಯುವುದು ವಾಡಿಕೆ. ಅದರಂತೆ ಈ ಬಾರಿಯ ಯುಗಾದಿಗೆ ಹೂಗಳನ್ನು ಹತ್ತಾರು ಎಕರೆಗಳಲ್ಲಿ ರೈತರು ಬೆಳೆದಿದ್ದರು. ಆದರೆ ಕಳೆದ ಹದಿನೈದು ದಿನಗಳಿಂದ ವಿಶ್ವಾದ್ಯಂತ ಕೋವಿಡ್ 19 ಆವರಿಸಿದ ಹಿನ್ನೆಲೆ ದೇಶಾದ್ಯಂತ ದೇವಸ್ಥಾನ ಪ್ರವೇಶ ಹಾಗೂ ಹೂ ಮಾರಾಟಕ್ಕೂ ಸರ್ಕಾರ ನಿರ್ಬಂಧ ಹೇರಿದೆ. ಇದರಿಂದಾಗಿ ಹೂ ಬೆಳೆದ ರೈತರ ಬದುಕು ಬೀದಿಗೆ ಬಂದಿದೆ.
ವಸ್ತು ಖರೀದಿಗೆ ಮುಗಿಬಿದ್ದ ಜನ: ಯುಗಾದಿ ಇನ್ನೆರೆಡು ದಿನ ಇರುವಾಗಲೇ ಮೈಸೂರು ಲಾಕ್ ಡೌನ್ ಮಧ್ಯೆಯೂ ನಗರದ ದೇವರಾಜ ಮಾರುಕಟ್ಟೆ, ಅಗ್ರಹಾರ ಮಾರುಕಟ್ಟೆಗಳಲ್ಲಿ ಜನ ಜಮಾಯಿಸಿ ಹಬ್ಬಕ್ಕೆ ಬೇಕಾಗುವ ಪೂಜಾ ಸಾಮಗ್ರಿ ಖರೀದಿಸಿದರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದರಿಂದ ಸರತಿ ಸಾಲಿನಲ್ಲಿ ನಿಂತು ಸಾಮಗ್ರಿ ಖರೀದಿಸಿದರು.
ಆಚರಣೆಗಳಿಗೆ ಬ್ರೇಕ್: ಯುಗಾದಿ ಅಂಗವಾಗಿ ನಾನಾ ಭಾಗದ ಗ್ರಾಮೀಣ ಪ್ರದೇಶ ಗಳಲ್ಲಿ ವಿವಿಧ ಸಂಪ್ರದಾಯ ಆಚರಣೆಗಳಿದ್ದು, ಹೊನ್ನಾರು, ಕೋಲಾಟ, ದೇಗುಲಗಳಲ್ಲಿ ಪೂಜೆ ಸಲ್ಲಿಸುವುದು ವಾಡಿಕೆ. ಆದರೆ ಕೋವಿಡ್ 19 ಭೀತಿಯಿಂದ ಸರ್ಕಾರ ಸಂಪ್ರದಾಯಿಕ ಆಚರಣೆಗಳಿಗೆ ನಿರ್ಬಂಧ ಹೇರಿದ್ದು ಹಳ್ಳಿಗಳಲ್ಲಿ ಹೊನ್ನಾರು ಕಟ್ಟುವುದು, ಕೋಲಾಟ, ನೃತ್ಯ ಇತರೆ ಚಟುವಟಿಕೆಗಳಿಗೂ ಬ್ರೇಕ್ ಬಿದ್ದಂತಾಗಿದೆ.
–ಸತೀಶ್ ದೇಪುರ