ಹಾವೇರಿ: ರಾಣಿಬೆನ್ನೂರು ತಾಲೂಕಿನ ಒಂದೇ ಕುಟುಂಬದ ಬರೋಬರಿ 32 ಸದಸ್ಯರಲ್ಲಿ ಶುಕ್ರವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ.
ಇಲ್ಲಿಯ ಮಾರುತಿ ನಗರದ 55 ವರ್ಷದ ವ್ಯಕ್ತಿಯೊಬ್ಬರು ಮಗನ ಮದುವೆ ಮಾಡಿದ್ದರು. ಅದೇ ದಿನ ಆ ವ್ಯಕ್ತಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಿಸದೇ ಆ ವ್ಯಕ್ತಿ ದಾವಣಗೆರೆಯಲ್ಲಿ ಮೃತಪಟ್ಟಿದ್ದರು. ಇದಾದ ನಾಲ್ಕು ದಿನದಲ್ಲಿ ವಧುವಿನ ತಾಯಿ ಸಹ ಕೋವಿಡ್ 19 ಮಹಾಮಾರಿಗೆ ಬಲಿಯಾಗಿದ್ದರು.
ವರನ ತಂದೆಗೆ ಮೊದಲು ಸೋಂಕು ದೃಢಪಡುತ್ತಿದ್ದಂತೆ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 38 ಜನರನ್ನು ಅಂತರವಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಹಾಸ್ಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಎಲ್ಲರ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ 32ಜನರಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ ಹಾಗೂ ಇನ್ನೂ ಆರು ಜನರ ವರದಿ ಬರುವುದು ಬಾಕಿಯಿದೆ.