ಹೊಸದಿಲ್ಲಿ: ದೇಶದಲ್ಲಿ ಕೋವಿಡ್-19 ವೈರಸ್‌ನಿಂದಾಗಿ ಮರಣ ಹೊಂದಿದವರಲ್ಲಿ ಶೇ.50ರಷ್ಟು ಮಂದಿ 60 ವಯಸ್ಸು ಮೇಲ್ಪಟ್ಟವರು ಎಂದು ಸರಕಾರದ ಅಂಕಿ ಅಂಶಗಳು ಹೇಳಿವೆ.
ಅದರಲ್ಲೂ ಮೃತಪಟ್ಟವರು ಹಲವು ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರೇ ಹೆಚ್ಚು ಎಂದೂ ಹೇಳಿದೆ.
ಭಾರತದ ಜನಸಂಖ್ಯೆಯಲ್ಲಿ 60ರಿಂದ 74 ವರ್ಷ ವಯಸ್ಸಿನ ಶೇ.8ರಷ್ಟು ಜನರಿದ್ದು, ಕೋವಿಡ್‌ನಿಂದ ಮೃತಪಟ್ಟವರಲ್ಲಿ ಇವರ ಪ್ರಮಾಣ ಶೇ.38ರಷ್ಟು ಆಗಿದೆ. ಜನಸಂಖ್ಯೆಯಲ್ಲಿ 74 ವರ್ಷ ಮೇಲ್ಪಟ್ಟವರು ಶೇ.2ರಷ್ಟು ಇದ್ದು, ಕೋವಿಡ್‌ನಿಂದಾಗಿ ಮೃತಪಟ್ಟ ಸಂಖ್ಯೆಯಲ್ಲಿ ಈ ಪಾಲು ಶೇ.12ರಷ್ಟಿದೆ. ಇದರಿಂದ ಅನೇಕ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೋವಿಡ್‌ನಿಂದಾಗಿ ವಯಸ್ಸಾದವರು ಸಾಯುವ ಮರಣ ಪ್ರಮಾಣವೂ ಕಡಿಮೆಯಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಅಂಕಿ ಅಂಶಗಳ ಪ್ರಕಾರ ಕೋವಿಡ್ ಮರಣ ಪ್ರಮಾಣದ ಭಾರತದಲ್ಲಿ ಕಡಿಮೆಯಿದೆ. ಇಲ್ಲಿ ಲಕ್ಷ ಮಂದಿಗೆ ಶೇ.0.41ರಷ್ಟಾದರೆ ವಿಶ್ವದಲ್ಲಿ ಇದರ ಪ್ರಮಾಣ ಶೇ.4.9ರಷ್ಟಿದೆ. ಇನ್ನು ಜಗತ್ತಿನಲ್ಲಿ ಕೋವಿಡ್ ಮರಣ ಪ್ರಮಾಣ ಶೇ.6.13ರಷ್ಟಿದ್ದರೆ ಭಾರತದಲ್ಲಿ ಮರಣ ಪ್ರಮಾಣ ಶೇ.2.82ರಷ್ಟಿದೆ.
ಇದರೊಂದಿಗೆ ರಾಜ್ಯಗಳು ಕೋವಿಡ್ ಮರಣ ಪ್ರಮಾಣವನ್ನು ಸರಿಯಾಗಿ ಅಂದಾಜಿಸುತ್ತಿದ್ದು, ಕೋವಿಡ್ ಇದ್ದರೂ ಅವರ ವೈದ್ಯಕೀಯ ಸ್ಥಿತಿಗತಿಗಳ ಕುರಿತು ಗಮನಿಸಲಾಗಿದೆ ಎಂದು ಐಸಿಎಂಆರ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.