ನವದೆಹಲಿ: ಭಾರತದಲ್ಲಿ ಎರಡು ದಿನಗಳಿಂದ ಭಾರೀ ಇಳಿಕೆ ಕಂಡಿದ್ದ ಕೋವಿಡ್ 19 ಸೋಂಕು ಪ್ರಕರಣ ಇದೀಗ 24 ಗಂಟೆಯಲ್ಲಿ ಮತ್ತೆ 20,000 ಗಡಿ ದಾಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಜುಲೈ 20) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:3 ಬಿಜೆಪಿ ಶಾಸಕರಿಗೆ 100 ಕೋಟಿ ರೂ.ಗೆ ಬೇಡಿಕೆ; ನಾಲ್ವರ ಬಂಧನ
ಏತನ್ಮಧ್ಯೆ ವೈದ್ಯರುಗಳು ಮತ್ತು ಆರೋಗ್ಯ ಕಾರ್ಯಕರ್ತರು ಕೋವಿಡ್ ಸೋಂಕು ಹರಡದಂತೆ ತಡೆಗಟ್ಟಲು ಅವಿರತವಾಗಿ ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಬ್ಬ ಆರೋಗ್ಯ ಕಾರ್ಯಕರ್ತೆಯರಿಗೆ ಧನ್ಯವಾದದ ಪತ್ರವನ್ನು ಕಳುಹಿಸಿರುವುದಾಗಿ ವರದಿ ವಿವರಿಸಿದೆ.
ದೇಶದಲ್ಲಿ 24ಗಂಟೆಯಲ್ಲಿ 20,557 ಕೋವಿಡ್ 19 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ದೇಶಾದ್ಯಂತ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,38,03,619ಕ್ಕೆ ಏರಿಕೆಯಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಅಂಕಿಅಂಶದ ಪ್ರಕಾರ, ಒಂದೇ ದಿನದಲ್ಲಿ 40 ಜನರು ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿರುವವ ಒಟ್ಟು ಸಂಖ್ಯೆ 5,25,825ಕ್ಕೆ ಹೆಚ್ಚಳವಾಗಿದೆ.
ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮಬಂಗಾಳದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 2,279 ಪ್ರಕರಣ ದೃಢವಾಗಿದ್ದು, 06 ಜನರು ಸಾವನ್ನಪ್ಪಿದ್ದಾರೆ. ಬಂಗಾಳದಲ್ಲಿ 2,200, ತಮಿಳುನಾಡಿನಲ್ಲಿ 2,142 ಕೋವಿಡ್ ಪ್ರಕರಣ ಪತ್ತೆಯಾಗಿದೆ.
24ಗಂಟೆಯಲ್ಲಿ 18,517 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ. ಭಾರತದಲ್ಲಿನ ಚೇತರಿಕೆ ಪ್ರಮಾಣ ಶೇ.98.47ರಷ್ಟಿದೆ. ದೇಶಾದ್ಯಂತದ ಕೋವಿಡ್ ಲಸಿಕೆ ಅಭಿಯಾನದಡಿ ಈವರೆಗೆ 200 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಅಂಕಿಅಂಶ ವಿವರಿಸಿದೆ.