ಲಕ್ನೋ: ಜೂನ್ 1ರಿಂದ ರಾಜ್ಯದ ಇನ್ನೂ ಆರು ಜಿಲ್ಲೆಗಳಲ್ಲಿ ಕೋವಿಡ್ 19 ಕರ್ಫ್ಯೂಗಳನ್ನು ಸಡಿಲಗೊಳಿಸುವುದಾಗಿ ಉತ್ತರಪ್ರದೇಶ ಸರ್ಕಾರ ಸೋಮವಾರ (ಮೇ 31) ಘೋಷಿಸಿದ್ದು, ಕಂಟೈನ್ ಮೆಂಟ್ ವಲಯಗಳ ಹೊರಗಿರುವ ಅಂಗಡಿ ಮತ್ತು ಮಾರುಕಟ್ಟೆಗಳನ್ನು ವಾರದಲ್ಲಿ ಐದು ದಿನಗಳ ಕಾಲ ತೆರೆಯಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ:ಸಿಡಿ ಲೇಡಿ ಪೋಷಕರ ದೂರಿಗೆ ಸಂಬಂಧಿಸಿ ಬಿ ರಿಪೋರ್ಟ್ ಸಲ್ಲಿಸಲಾಗಿದೆ: ಹೈಕೋರ್ಟ್ ಗೆ ಸರ್ಕಾರ
ಇದರೊಂದಿಗೆ ರಾಜ್ಯದಲ್ಲಿ ಮಂಗಳವಾರದಿಂದ ಒಟ್ಟು 61 ಜಿಲ್ಲೆಗಳಲ್ಲಿ ಕೋವಿಡ್ ಕರ್ಫ್ಯೂ ನಿರ್ಬಂಧ ಸಡಿಲಿಕೆ ಆದೇಶ ಅನ್ವಯವಾಗಲಿದೆ. ಉಳಿದ 14 ಜಿಲ್ಲೆಗಳಲ್ಲಿ ಸಕ್ರಿಯ ಕೋವಿಡ್ 19 ಪ್ರಕರಣಗಳ ಸಂಖ್ಯೆ 600ಕ್ಕಿಂತಲೂ ಅಧಿಕವಿದ್ದು, ಮುಂದಿನ ದಿನಗಳಲ್ಲಿ ಪರಿಶೀಲನೆ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಉತ್ತರಪ್ರದೇಶ ಸರ್ಕಾರ 55 ಜಿಲ್ಲೆಗಳಲ್ಲಿ ನಿರ್ಬಂಧ ಸಡಿಲಗೊಳಿಸುವ ಬಗ್ಗೆ ಘೋಷಿಸಿತ್ತು. ಇದೀಗ ಒಟ್ಟು 61 ಜಿಲ್ಲೆಗಳಲ್ಲಿ ನಿರ್ಬಂಧ ತೆರವುಗೊಳಿಸಿದಂತಾಗಿದೆ ಎಂದು ವರದಿ ತಿಳಿಸಿದೆ.
600ಕ್ಕಿಂತ ಕಡಿಮೆ ಕೋವಿಡ್ ಪ್ರಕರಣ ಹೊಂದಿರುವ ಸೋನಾಭದ್ರಾ, ಡಿಯೋರಿಯ, ಬಾಘಪತ್, ಪ್ರಯಾಗ್ ರಾಜ್, ಬಿಜ್ನೋರ್ ಮತ್ತು ಮೊರಾದಾಬಾದ್ ಸೇರಿದಂತೆ ಆರು ಜಿಲ್ಲೆಗಳಲ್ಲಿ ನಿರ್ಬಂಧ ತೆರೆವುಗೊಳಿಸಲಾಗಿದೆ ಎಂದು ವರದಿ ಹೇಳಿದೆ.
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.