ಬೆಂಗಳೂರು: ರಾಜ್ಯದ ಕೋವಿಡ್ 19 ಸೋಂಕಿತ ಸಂಖ್ಯೆ 8697ಕ್ಕೇ ಏರಿಕೆಯಾದರೆ, ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಒಂದು ಸಾವಿರ ದಾಟಿದೆ. ಉಡುಪಿ, ಕಲಬುರಗಿ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ ಸಾವಿರ ದಾಟಿತ್ತು. ಕಾರಣ, ಮಹಾರಾಷ್ಟ್ರದಿಂದ ಬಂದಿದ್ದವರ ಸಂಖ್ಯೆ ಹೆಚ್ಚಿತ್ತು. ಆದರೆ, ಬೆಂಗಳೂರಿನಲ್ಲಿ ಸಾವಿರ ದಾಟಿರುವುದು ಸ್ಥಳೀಯ ಪ್ರಕರಣವೇ ಹೆಚ್ಚಾಗಿರುವುದರಿಂದ ಹೆಚ್ಚು ಆತಂಕ ಮನೆ ಮಾಡಿದೆ.
ಶನಿವಾರ ದಾಖಲಾದ 416 ಹೊಸ ಪ್ರಕರಣಗಳಲ್ಲಿ ಬೆಂಗಳೂರಿನ 94, ಬೀದರ್‌ನ 73, ಬಳ್ಳಾರಿ ಮತ್ತು ರಾಮನಗರದಲ್ಲಿ ತಲಾ 38, ಕಲಬುರಗಿಯಲ್ಲಿ 34, ಮೈಸೂರಿನಲ್ಲಿ 22, ಹಾಸನದಲ್ಲಿ 16, ರಾಯಚೂರಿನಲ್ಲಿ 15, ಉಡುಪಿಯಲ್ಲಿ 13, ಹಾವೇರಿಯಲ್ಲಿ 12, ವಿಜಯಪುರದಲ್ಲಿ 9, ಚಿಕ್ಕಮಗಳೂರಿನಲ್ಲಿ 8, ಧಾರವಾಡ ಮತ್ತು ಚಿಕ್ಕಬಳ್ಳಾಪುರದಲ್ಲಿ ತಲಾ 5, ದಕ್ಷಿಣ ಕನ್ನಡ, ಮಂಡ್ಯ, ಉತ್ತರ ಕನ್ನಡ, ಕೋಲಾರ, ಬೆಂಗಳೂರು ಗ್ರಾಮಾಂತರ ದಲ್ಲಿ ತಲಾ 4, ದಾವಣಗೆರೆಯಲ್ಲಿ 3, ಬಾಗಲಕೋಟೆ, ಶಿವಮೊಗ್ಗ, ಗದಗ ಮತ್ತು ತುಮಕೂರಿನಲ್ಲಿ ತಲಾ 2, ಬೆಳಗಾವಿ ಮತ್ತು ಚಾಮರಾಜನಗರದಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಪತ್ತೆಯಾದ ಹೊಸ 94 ಪ್ರಕರಣ ಸೇರಿ ಸೋಂಕಿತ ಸಂಖ್ಯೆ 1076ಕ್ಕೆ ಏರಿಕೆಯಾಗಿದೆ. ಕಲಬುರಗಿ ಯಲ್ಲಿ 1160, ಉಡುಪಿಯಲ್ಲಿ 1063 ಸೋಂಕಿತರಿದ್ದಾರೆ. ರಾಜ್ಯದಲ್ಲಿ ಒಂದೇ ದಿನ 181 ಮಂದಿ ರೋಗದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಲಬುರಗಿಯಲ್ಲಿ 42, ರಾಯಚೂರಿನಲ್ಲಿ 39, ಯಾದಗಿರಿಯಲ್ಲಿ 20, ಶಿವಮೊಗ್ಗದಲ್ಲಿ 17, ಬೀದರ್‌ನಲ್ಲಿ 12, ಧಾರವಾಡದಲ್ಲಿ 10, ಉಡುಪಿಯಲ್ಲಿ 9, ಬಳ್ಳಾರಿಯಲ್ಲಿ 8, ವಿಜಯಪುರದಲ್ಲಿ 6, ದಾವಣಗೆರೆ 5, ದಕ್ಷಿಣ ಕನ್ನಡ 4, ಕೋಲಾರ ಹಾಗೂ ಮಂಡ್ಯ ತಲಾ 3 ಮತ್ತು ಬೆಂಗಳೂರು ನಗರ, ಚಾಮರಾಜ ನಗರ ಮತ್ತು ಬಾಗಲಕೋಟೆಯಲ್ಲಿ ತಲಾ 1 ಕೋವಿಡ್ 19 ಸೋಂಕಿತರು ಗುಣ ಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬೆಂಗಳೂರು ಆತಂಕ ಏಕೆ?: ಶನಿವಾರ ಪತ್ರೆಯಾದ ಪ್ರಕರಣದಲ್ಲಿ ಹೊರ ದೇಶದಿಂದ ಬಂದಿರುವ 22 ಹಾಗೂ ಹೊರ ರಾಜ್ಯದಿಂದ ಬಂದಿರುವ 116 ಮಂದಿ ಸೇರಿಕೊಂಡಿದ್ದಾರೆ. ಆದರೆ, ಬೆಂಗಳೂರಿನ 94 ಪ್ರಕರಣದಲ್ಲಿ ಸುಮಾರು 20 ಮಂದಿ ಉಸಿರಾಟದ ತೊಂದರೆ ಹೊಂದಿದವರಾಗಿದ್ದಾರೆ. 5ಕ್ಕೂ ಅಧಿಕ ಮಂದಿಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಸುಮಾರು 15ಕ್ಕೂ ಅಧಿಕ ಮಂದಿ ಅಂತಾರಾಷ್ಟ್ರೀಯ ಪ್ರಯಾಣ ಹಿನ್ನೆಲೆ ಹೊಂದಿದ್ದಾರೆ. ಉಸಿರಾಟದ ತೊಂದರೆ ಹಾಗೂ ಐಎಲ್‌ಐ ಪ್ರಕರಣ ಹೆಚ್ಚಿರುವುದರಿಂದ ಬೆಂಗಳೂರಿನಲ್ಲಿ ಆತಂಕ ಹೆಚ್ಚಾಗಿದೆ.
ವಿಧಾನಸೌಧದಲ್ಲೂ ಪಾಸಿಟಿವ್ ಪ್ರಕರಣ: ಕೋವಿಡ್ 19 ವೈರಸ್ ಶಕ್ತಿ ಸೌಧವನ್ನು ಆವರಿಸಿದೆ. ವಿಧಾನಸೌಧದ 3ನೇ ಮಹಡಿಯ ಮಾಧ್ಯಮ ಕೇಂದ್ರದ ಉಸ್ತುವಾರಿ ವಾರ್ತಾ ಇಲಾಖೆ ಉಪ ನಿರ್ದೇಶಕರಿಗೂ ಸೋಂಕು ತಗುಲಿದ್ದು ವಿಧಾನಸೌಧದ 3 ಮಹಡಿಯಲ್ಲೂ ಸ್ಯಾನಿಟೈಜ್ ಮಾಡಲಾಗಿದೆ. ಕಳೆದ 1 ವಾರದಿಂದ ಅಧಿಕಾರಿ ರಜೆ ಮೇಲಿದ್ದರು ಎಂದು ತಿಳಿದು ಬಂದಿದ್ದು, ಅವರ ಪತ್ನಿಗೆ ಸೋಂಕು ದೃಢವಾದ ನಂತರ ತಪಾಸಣೆಗೆ ಒಳಪಟ್ಟಾಗ ಈ ಅಧಿಕಾರಿಗೂ ಸೋಂಕು ತಗುಲಿರುವುದು ದೃಢ ಪಟ್ಟಿದ್ದು, ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಾರ್ತಾಧಿಕಾರಿಗೆ ಸೋಂಕು ತಗುಲಿರುವುದರಿಂದ ವಿಧಾನಸೌಧವನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲಾಗಿದ್ದು, ಬಿಬಿಎಂಪಿ ಸಿಬ್ಬಂದಿ ಪ್ರತಿ ಮಹಡಿಯಲ್ಲಿಯೂ ದ್ರಾವಣ ಸಿಂಪರಣೆ ಮಾಡಿದ್ದಾರೆ. ಭಾನುವಾರ ಸರ್ಕಾರಿ ರಜಾ ದಿನವಾಗಿರುವುದರಿಂದ ಒಂದು ದಿನ ಬಿಟ್ಟು ಸೋಮವಾರದಿಂದ ವಿಧಾನ ಸೌಧದ ಸಿಬ್ಬಂದಿ ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತಾರೆ. ವಾರ್ತಾ ಇಲಾಖೆಯ ಉಪ ನಿರ್ದೇಶಕರಿಗೆ ಸೋಂಕು ತಗುಲಿರುವುದರಿಂದ ವಾರ್ತಾ ಇಲಾಖೆ ವಾರ್ತಾ ಭವನಕ್ಕೂ ಸ್ಯಾನಿಟೈಜ್ ಮಾಡಲಾಗಿದೆ. ಈ ಮಧ್ಯೆ, ವಿಶ್ವೇಶ್ವರಯ್ಯ ಟವರ್ ನಲ್ಲಿಯೂ ವ್ಯಕ್ತಿಯೋರ್ವರಿಗೆ ಸೋಂಕು ತಗುಲಿರುವ ಮಾಹಿತಿ ಇದ್ದು, ಅಲ್ಲಿಯೂ ಸ್ಯಾನಿಟೈಜ್ ಮಾಡಲಾಗಿದೆ.