Advertisement

ಕೋವಿಡ್-19 ನಿಯಂತ್ರಣ: ಜಿಲ್ಲೆಗೆ ಹೆಚ್ಚುವರಿ ಪೊಲೀಸ್‌

07:16 PM Mar 24, 2020 | mahesh |

ಕಾಸರಗೋಡು: ಮಾರಣಾಂತಿಕ ಕೋವಿಡ್-19 ವೈರಸ್‌ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲು ಪೊಲೀಸ್‌ ಇಲಾಖೆ ಮುಂದಾಗಿದ್ದು, ಇದರಂತೆ ಕಾಸರಗೋಡು ಜಿಲ್ಲೆಗೆ ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗುವುದು.

Advertisement

ಸರಕಾರದ ಆದೇಶಗಳನ್ನು ಮತ್ತು ನಿಯಂತ್ರಣಗಳನ್ನು ಪಾಲಿಸಲು ಹೆಚ್ಚುವರಿ ಪೊಲೀಸರ ಅಗತ್ಯವಿದೆ ಎಂದು ಕಂಡುಕೊಂಡು ಹೆಚ್ಚುವರಿ ಪೊಲೀಸರನ್ನು ನೇಮಿಸಲಾಗುವುದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪಿ.ಎಸ್‌. ಸಾಬು ಅವರು ಹೇಳಿದ್ದಾರೆ. ಉತ್ತರ ವಲಯ ಐ.ಜಿ. ಅಶೋಕ್‌ ಯಾದವ್‌, ಎರ್ನಾಕುಳಂ ಸಿಟಿ ಪೊಲೀಸ್‌ ಕಮಿಷನರ್‌ ವಿಜಯ ಸಖಾರೆ, ಡಿಐಜಿ ಸೇತುರಾಮನ್‌, ಕೋಟ್ಟಯಂ ಕ್ರೈಂಬ್ರಾಂಚ್‌ ಎಸ್‌.ಪಿ. ಸಾಬು ಮ್ಯಾಥ್ಯೂ, ಟೆಲಿಕಮ್ಯೂನಿಕೇಶನ್‌ ಎಸ್‌ಪಿ ಡಿ. ಶಿಲ್ಪಾ ಅವರು ಪೊಲೀಸ್‌ ಪಡೆಗೆ ನೇತೃತ್ವ ನೀಡುವರು.

ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ತಿರುಗಾಡುವವರನ್ನು ಬಂಧಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ 10 ವಾಹನಗಳಲ್ಲಿ 50 ಮಂದಿ ಪೊಲೀಸರನ್ನು ನೇಮಿಸಲಾಗುವುದು. ಮನೆಯಿಂದ ಹೊರಗೆ ಬಂದವರನ್ನು ಪ್ರಶ್ನಿಸಿ ಅವರು ಯಾಕಾಗಿ ಮನೆಯಿಂದ ಹೊರಗೆ ಬಂದಿದ್ದಾರೆ ಎಂದು ವಿಚಾರಿಸಿ ಅಗತ್ಯಕ್ಕೆ ಬಂದ ಬಗ್ಗೆ ಸ್ಪಷ್ಟವಾದರೆ ಮಾತ್ರವೇ ಕಳುಹಿಸಲಾಗುವುದು. ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಅಂಗಡಿಗಳಿಂದ ಅವಶ್ಯ ಸಾಮಗ್ರಿಗಳನ್ನು ಖರೀದಿಸಲು ಹೋಗುವ ಗ್ರಾಹಕರನ್ನು ಪೊಲೀಸರು ಅಂಗಡಿಯ ಮುಂದೆ ನಿಯಂತ್ರಿಸುವರು.


ಕಾಸರಗೋಡು ಜಿಲ್ಲೆಯಲ್ಲಿ ಬೆಳಗ್ಗೆ 11 ರಿಂದ ಸಂಜೆ 5 ಗಂಟೆಯ ವರೆಗೆ ಬೇಕರಿಗಳು ತೆರೆದು ಕಾರ್ಯಾಚರಿಸಬೇಕೆಂದು ಜಿಲ್ಲಾಧಿಕಾರಿ ಡಾ| ಡಿ. ಸಜಿತ್‌ ಬಾಬು ತಿಳಿಸಿದ್ದಾರೆ. ಆದರೆ ಬೇಕರಿ ಅಂಗಡಿಗಳಲ್ಲಿ ಚಾಯ, ಕಾಫಿ ಸಹಿತ ಪಾನೀಯಗಳನ್ನು ವಿತರಿಸಬಾರದು. ಯಾವುದೇ ಕಾರಣಕ್ಕೂ ಅಂಗಡಿಗಳಲ್ಲಿ ಗುಂಪು ಸೇರಬಾರದೆಂದು ಮನವಿ ಮಾಡಿದ್ದಾರೆ.

ಜನರು ಅನಾವಶ್ಯಕವಾಗಿ ಪೇಟೆಗೆ ಬಾರದೆ ಮನೆಯಲ್ಲಿ ಕುಳಿತುಕೊಳ್ಳುವಂತೆ ತಿಳಿಸಿದ ಅವರು ಅಗತ್ಯ ಸಾಮಗ್ರಿಗಳಿಗೆ ಅಂಗಡಿಗಳಿಗೆ ಬರುವವರು ಪೊಲೀಸರು ನೀಡುವ ನಿರ್ದೇಶವನ್ನು ಪಾಲಿಸಬೇಕೆಂದೂ ತಿಳಿಸಿದ್ದಾರೆ. ಅಂಗಡಿಗಳಲ್ಲಿ ಒಂದು ಮೀಟರ್‌ ಅಂತರ ಕಾಯ್ದುಕೊಂಡು ಕ್ಯೂ ನಿಲ್ಲಬೇಕು. ಚಿಕನ್‌, ಮೊಟ್ಟೆ, ಬೀಫ್‌ ಅಂಗಡಿಗಳೂ ತೆರೆಯಬೇಕು. ಅಂತಹ ಅಂಗಡಿಗಳಲ್ಲಿ ಗುಂಪು ಸೇರಿದರೆ ಆ ಅಂಗಡಿಗಳನ್ನು ಮುಚ್ಚಲು ನಿರ್ದೇಶ ನೀಡಲಾಗುವುದೆಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕಾಸರಗೋಡಿನಲ್ಲಿ ನಿಯಂತ್ರಣ ಉಲ್ಲಂಘಿಸಿದ ಇಬ್ಬರು ಕೋವಿಡ್-19 ವೈರಸ್‌ ಸೋಂಕು ಬಾಧಿತರ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳುಲಾಗುವುದು. ಪಾಸ್‌ಪೋರ್ಟ್‌ ಮಾಹಿತಿ ಕಲೆ ಹಾಕಲು ನಿರ್ದೇಶ ನೀಡಲಾಗಿದೆ. ರೋಗ ಹರಡಿದ್ದರೂ ನಿಯಂತ್ರಣ ಪಾಲಿಸದೆ ತಿರುಗಾಡಿದ ಹಿನ್ನೆಲೆಯಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿದೇಶಕ್ಕೆ ಹೋಗುವುದನ್ನು ತಡೆಯುವ ಸಹಿತ ಕ್ರಮ ತೆಗೆದುಕೊಳ್ಳಲು ಚಿಂತಿಸಲಾಗುತ್ತಿದೆ.

Advertisement

ವಿದೇಶದಿಂದ ಬರುವವರು ನಿಯಂತ್ರಣ ಪಾಲಿಸಬೇಕು. ಅವರೆಲ್ಲ ನಿಗಾದಲ್ಲಿರಬೇಕು. ನಿಗದಿತ ದಿನಗಳ ತನಕ ಐಸೋಲೇಶನ್‌ನಲ್ಲಿರಬೇಕು. ಈ ಸಂದರ್ಭದಲ್ಲಿ ಯಾರೊಂದಿಗೂ ಸಂಪರ್ಕ ಬೆಳೆಸಬಾರದು. ಸರಕಾರಿ ಆದೇಶಗಳನ್ನು ಪಾಲಿಸದವರ ವಿರುದ್ಧ ಪಾಸ್‌ಪೋರ್ಟ್‌ ರದ್ದು ಮಾಡುವ ಸಹಿತ ಕಠಿನ ಕ್ರಮ ತೆಗೆದುಕೊಳ್ಳುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.

ವಿದೇಶದಿಂದ ಬಂದವರು ಪೊಲೀಸ್‌ ನಿಗಾದಲ್ಲಿ
ವಿದೇಶದಿಂದ ಮಾರ್ಚ್‌ 1 ರಿಂದ ಕಾಸರಗೋಡು ಜಿಲ್ಲೆಗೆ ತಲುಪಿದವರ ಹೆಸರು ಸಹಿತ ಪೂರ್ಣ ವಿವರಗಳನ್ನು ಜಿಲ್ಲಾ ಪೊಲೀಸರು ಸಂಗ್ರಹಿಸಿದ್ದಾರೆ. 4,000ದಷ್ಟು ಮಂದಿ ಮಂಗಳೂರು, ಕಣ್ಣೂರು, ಕರಿಪ್ಪೂರ್‌, ನೆಡುಂಬಾಶ್ವೇರಿ, ತಿರುವನಂತಪುರ ವಿಮಾನ ನಿಲ್ದಾಣಗಳ ಮೂಲಕ ಬಂದವರಾಗಿದ್ದಾರೆ.

ಇವರ ಮನೆಗಳಿಗೆ ಆಯಾಯ ಪೊಲೀಸ್‌ ಠಾಣೆಗಳ ಪೊಲೀಸರು ತೆರಳಿ ಅವರ ಎಲ್ಲ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಅಂತವರು ಪೊಲೀಸ್‌ ನಿಗಾದಲ್ಲಿರುತ್ತಾರೆ. ನಿರೀಕ್ಷಣ ಕಾಲಾವಧಿಗೂ ಮುನ್ನವೇ ಹೊರಗೆ ಬಂದರೆ ಕ್ರಮ ತೆಗೆದುಕೊಳ್ಳಲಾಗುವುದೆಂದು ಉತ್ತರ ವಲಯ ಡಿಐಜಿ ಸೇತುರಾಮನ್‌ ಅವರ ನೇತೃತ್ವದಲ್ಲಿ ನಡೆದ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

2,470 ಮಂದಿ ನಿಗಾದಲ್ಲಿ
ಕೊರೊನಾ ವೈರಸ್‌ ಹರಡುತ್ತಿರುವಂತೆ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 38 ಮಂದಿಗೆ ಸೋಂಕು ಬಾಧಿಸಿದೆ. ಜಿಲ್ಲೆಯಲ್ಲಿ 2,470 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 61 ಮಂದಿ ಆಸ್ಪತ್ರೆಗಳ ಐಸೋಲೇಶನ್‌ ವಾರ್ಡ್‌ಗಳಲ್ಲಿದ್ದಾರೆ. 825 ಮಂದಿ ಕೊರೊನಾ ನಿಯಂತ್ರಣಕ್ಕಿರುವ ಜಿಲ್ಲಾ ಕೇಂದ್ರದಲ್ಲಿ ನೇರವಾಗಿ ನಿಗಾದಲ್ಲಿದ್ದಾರೆ. ಉಳಿದ 1,584 ಮಂದಿ ವಿವಿಧ ಪಂಚಾಯತ್‌, ನಗರಸಭೆ ವಾರ್ಡ್‌ಗಳ ಜಾಗೃತಾ ಸಮಿತಿಗಳ ನೇತೃತ್ವದಲ್ಲಿ ನಿಗಾದಲ್ಲಿದ್ದಾರೆಂದು ಡಿ.ಎಂ.ಒ. ಡಾ| ಎ.ವಿ. ರಾಮದಾಸ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next