Advertisement

ಕೊಡಗಿನ ವ್ಯಕ್ತಿಗೆ ಸೋಂಕು ದೃಢ; ಜಿಲ್ಲೆಯಲ್ಲಿ ನಿಷೇಧಾಜ್ಞೆ

09:55 AM Mar 20, 2020 | mahesh |

ಮಡಿಕೇರಿ: ಕೊಡಗು ಜಿಲ್ಲೆ ವೀರಾಜಪೇಟೆ ತಾಲೂಕಿನ ಅಮ್ಮತ್ತಿ ಹೋಬಳಿ ಕೊಂಡಗೇರಿಯ 35ರ ಹರೆಯದ ವ್ಯಕ್ತಿಯಲ್ಲಿ ಕೋವಿಡ್-19 ವೈರಸ್‌ ಸೋಂಕು ದ‌ೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮಗಳನ್ನು ಮತ್ತಷ್ಟು ಪ್ರಬಲಗೊಳಿಸಲಾಗಿದ್ದು, ಜಿಲ್ಲೆಯಾದ್ಯಂತ ತತ್‌ಕ್ಷಣದಿಂದಲೇ ಸೆಕ್ಷನ್‌ 144 (3)ರನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದರು.

Advertisement

ಕೊಂಡಗೇರಿಯ ವ್ಯಕ್ತಿ ಮಾ. 15ರಂದು ದುಬಾೖಯಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ್ದು, ಅಲ್ಲಿಂದ ರಾಜಹಂಸ ಬಸ್‌ನಲ್ಲಿ ಮೈಸೂರು ಮಾರ್ಗವಾಗಿ ಮೂರ್ನಾಡಿಗೆ; ಅಲ್ಲಿಂದ ಆಟೋದಲ್ಲಿ ಮನೆ ತಲುಪಿದ್ದರು. ಬಳಿಕ ಕೆಮ್ಮು, ನೆಗಡಿ ಲಕ್ಷಣ ಕಂಡುಬಂದ ಕಾರಣ ಮಾ. 17ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಮೈಸೂರಿನ ಪ್ರಯೋಗಾಲಯವು ಅವರು ಕೊರೊನಾ ಬಾಧಿತರಾಗಿದ್ದಾರೆ ಎಂದು ಮಾ. 19ರಂದು ವರದಿ ನೀಡಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಅವರಿಗೆ ವಿಶೇಷ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಪ್ರಯಾಣಿಸಿದ ವಿಮಾನ ಮತ್ತು ಬಸ್ಸಿನಲ್ಲಿದ್ದ ಇತರ ಪ್ರಯಾಣಿಕರ ವಿವರ, ಬಸ್‌ನಲ್ಲಿ ಬರುವಾಗ ಮಧ್ಯದಲ್ಲಿ ಊಟಕ್ಕೆ ನಿಲ್ಲಿಸಿದ ಸ್ಥಳದಲ್ಲಿ ಅವರ ಸಂಪರ್ಕಕಕ್ಕೆ ಬಂದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದರು.

ಕೋವಿಡ್-19 ವೈರಸ್‌ ಎದುರಿಸಲು ಮತ್ತು ತಡೆಗೆ, ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದ್ದು, ಸಾರ್ವಜನಿಕರು ಸಹಕರಿಸ ಬೇಕಿದೆ. ಕೊರೊನಾ ವೈರಸ್‌ ಸೋಂಕಿತ ಒಂದು ಪ್ರಕರಣ ಜಿಲ್ಲೆಯಲ್ಲಿ ದಾಖಲಾದ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 100 ಹಾಸಿಗೆಗಳ ಐಸೊಲೇಟೆಡ್‌ ವಾರ್ಡ್‌, 50 ಹಾಸಿಗೆಗಳ ಕೋರೆಂಟಲ್‌ ವಾರ್ಡ್‌ ಸಿದ್ಧವಾಗಿದ್ದು, ಕೊಡಗು ವೈದ್ಯಕೀಯ ಕಾಲೇಜಿನಲ್ಲಿ ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡಲು ಎಲ್ಲ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

144(3) ಸೆಕ್ಷನ್‌ ಜಾರಿ
ಜಿಲ್ಲೆಯಲ್ಲಿ 144(3) ಸೆಕ್ಷನ್‌ ಜಾರಿಗೊಳಿಸಿದ್ದು, ರೆಸಾರ್ಟ್‌, ಹೊಟೇಲ್‌, ಹೋಮ್‌ ಸ್ಟೇ ಬುಕಿಂಗ್‌ ರದ್ದುಪಡಿಸುವಂತೆ, ಮಾರ್ಚ್‌ 31ರ ವರೆಗೆ ಹೊಸ ಬುಕ್ಕಿಂಗ್‌ ಮಾಡದಂತೆ ನಿಷೇಧಿಸಲಾಗಿದೆ. ಜಿಲ್ಲೆಯ ವಿವಿಧ ರೆಸಾರ್ಟ್‌ಗಳಲ್ಲಿ ಜರ್ಮನಿಯ ಇಬ್ಬರು, ಆಸ್ಟ್ರಿಯಾದ ಒಬ್ಬ ಪ್ರಜೆ, ಅವರೊಂದಿಗೆ ಭಾರತದ ಇಬ್ಬರು ಸ್ನೇಹಿತರು ನೆಲೆಸಿದ್ದು, ಮುಂಜಾಗ್ರತ ಕ್ರಮವಾಗಿ ಅವರನ್ನು ಅದೇ ಜಾಗದಲ್ಲಿ 15 ದಿನಗಳ ಕಾಲ ತಂಗುವಂತೆ ಸೂಚನೆ ನೀಡಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು.

Advertisement

ಶಾಲಾ-ಕಾಲೇಜು ಅಂಗನವಾಡಿ, ಜಿಮ್‌, ಈಜುಕೊಳ, ಮೈದಾನ, ಮನೆಪಾಠ ಕೇಂದ್ರಗಳು ಮಾರ್ಚ್‌ 31ರವರೆಗೆ ಮುಚ್ಚಿರುತ್ತವೆ. ಎಲ್ಲ ಸರಕಾರಿ ಕಚೇರಿಗಳಿಗೆ ಸಾರ್ವಜನಿಕರ ಅನಗತ್ಯ ಭೇಟಿ ಯನ್ನು ನಿರ್ಬಂಧಿಸಲಾಗಿದೆ. ಸಾರ್ವ ಜನಿಕರ ಅಗತ್ಯ ಕೆಲಸಗಳಿಗೆ ದೂರವಾಣಿ, ಇ-ಮೇಲ್‌, ವಾಟ್ಸ್‌ ಆ್ಯಪ್‌, ಅಂಚೆ ಮೂಲಕ ವ್ಯವಹಾರಕ್ಕೆ ನಿರ್ಬಂಧವಿರುವುದಿಲ್ಲ. ಸಾರ್ವ ಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಸಂತೆ, ಜಾತ್ರೆ ನಿಷೇಧ
ಸಂತೆ, ಜಾತ್ರೆಗಳನ್ನು ನಿಷೇಧಿಸಲಾಗಿದೆ. ಧಾರ್ಮಿಕ ಸ್ಥಳಗಳಲ್ಲಿ ದೈನಂದಿನ ಪೂಜಾ ಕೈಂಕರ್ಯಗಳಿಗೆ ನಿರ್ಬಂಧವಿಲ್ಲ. ಆದರೆ ದೊಡ್ಡ ಮಟ್ಟದ ಜಾತ್ರೆ, ಸಂತೆ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್‌ ತೆರೆದು ಪರಿಶೀಲನೆ ಮಾಡಲಾಗುತ್ತಿದೆ. ಔಷಧ, ದಿನಸಿ ತರಕಾರಿ ಹಾಗೂ ಇತರ ಅಗತ್ಯ ವಸ್ತುಗಳ ಅಂಗಡಿಗಳನ್ನು ಹೊರತುಪಡಿಸಿ ಬೇರೆ ಎಲ್ಲ ರೀತಿಯ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿ ಸಹಕರಿಸುವುದು. ಸರಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದು ಸಾರ್ವಜನಿಕರಿಗೆ ಎಲ್ಲ ರೀತಿಯ ಅಗತ್ಯ ನೆರವು ನೀಡಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಕೆ. ಮೋಹನ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಯಾಣಿಕರು ಪರೀಕ್ಷೆಗೆ ಒಳಪಡಿ
ಮಾ. 15ರಂದು ಸಂಜೆ 4.15ಕ್ಕೆ ಬೆಂಗಳೂರಿಗೆ ಬಂದಿಳಿದ ಇಂಡಿಗೋ ವಿಮಾನ ಮತ್ತು ರಾಜಹಂಸ ಬಸ್‌ (ಕೆಎ19-ಎಫ್3170)ನಲ್ಲಿ ಪ್ರಯಾಣಿ ಸಿರುವ ಎಲ್ಲರೂ ತಮ್ಮ ಮಾಹಿತಿಯನ್ನು ಸ್ಥಳೀಯ ಸರಕಾರಿ ಆಸ್ಪತ್ರೆಗೆ ನೀಡಿ, ಪರೀಕ್ಷೆಗೆ ಒಳಗಾಗುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

75 ಕುಟುಂಬಗಳಿಗೆ ನಿರ್ಬಂಧ
ಕೊಂಡಗೇರಿ ಗ್ರಾಮದಲ್ಲಿ 75 ಕುಟುಂಬಗಳ 306 ಜನರು ವಾಸಿಸುವ 500 ಮೀಟರ್‌ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯವೆಂದು ಘೋಷಿಸಿರುವುದಲ್ಲದೆ ಈ ಪ್ರದೇಶದ ಜನರು ಇತರರೊಂದಿಗೆ ಸಂಪರ್ಕ ಹೊಂದುವುದನ್ನು ನಿರ್ಬಂಧಿಸಲಾಗಿದೆ. ಅವರಿಗೆ ಜಿಲ್ಲಾಡಳಿತವು ಊಟೋಪಹಾರ ವ್ಯವಸ್ಥೆ ಮಾಡಲಿದೆ.

Advertisement

Udayavani is now on Telegram. Click here to join our channel and stay updated with the latest news.

Next