ಬೆಂಗಳೂರು: ವಿದೇಶ ಪ್ರಯಾಣ ಮಾಡಿರದ, ವಿದೇಶದಿಂದ ಬಂದ ವ್ಯಕ್ತಿಗಳ ನೇರ ಸಂಪರ್ಕವೇ ಇಲ್ಲದ ಮೈಸೂರಿನ ವ್ಯಕ್ತಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಈ ಮೂಲಕ ರಾಜ್ಯದಲ್ಲಿ ಕೊವಿಡ್-19 ಮೂರನೇ ಹಂತಕ್ಕೆ ತಲುಪಿ ಸಮುದಾಯಕ್ಕೆ ಹರಡಿದೆಯೇ ಎಂಬ ಅನುಮಾನಗಳು ಮೂಡಿವೆ.
ಇಲ್ಲಿಯವರೆಗೂ ಕೇವಲ ವಿದೇಶದಿಂದ ಬಂದಿದ್ದ ವ್ಯಕ್ತಿಗಳು ಹಾಗೂ ಅವರ ಕುಟುಂಬಸ್ಥರು, ಸ್ನೇಹಿತರು, ಸಹೋದ್ಯೋಗಿಗಳು ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ವ್ಯಕ್ತಿಗಳಲ್ಲಿ ಮಾತ್ರ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಮೈಸೂರಿನ ಔಷಧ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ, ಯಾವ ವಿದೇಶ ಪ್ರವಾಸ ಮಾಡದ, ವಿದೇಶಿ ಪ್ರವಾಸಿಗರ ಸಂಪರ್ಕ ಹೊಂದಿರದ ವ್ಯಕ್ತಿಗೆ ಕೊರೊನಾ ತಗುಲಿರಿವುದು ಆತಂಕ ಮೂಡಿಸಿದೆ.
ಸದ್ಯ ಈ ವ್ಯಕ್ತಿಯ ಪ್ರಕರಣವನ್ನು ವೈದ್ಯಕೀಯ ತನಿಖೆಗೆ ನೀಡಲಾಗಿದ್ದು, ವ್ಯಕ್ತಿಯ ಚಲನವಲನದ ಸಂಪೂರ್ಣ ಪರಾಮರ್ಶೆ ನಡೆದು ತನಿಖಾ ವರದಿಗಳು ಬಂದ ಬಳಿಕವೇ ಎಲ್ಲಿ ಯಾವ ರೀತಿಯಲ್ಲಿ ಕೋವಿಡ್-19 ಸೋಂಕು ತಗುಲಿರಬಹುದು ಎಂದು ತಿಳಿಯಲಿದೆ. ಜತೆಗೆ ರಾಜ್ಯದಲ್ಲಿ ಕೊರೊನಾ ಸಮುದಾಯ ಸೋಂಕಾಗಿದೆಯೇ ಎಂಬ ಪ್ರಶ್ನೆಗೆ ಉತ್ತರ ಸಿಗಲಿದೆ.
ಯಾವುದೇ ವಿದೇಶ ಪ್ರಯಾಣದ ಇತಿಹಾಸವಿರದ ಇಂಧೋರ್ ನ 47 ವರ್ಷದ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಕೋವಿಡ್-19 ಶಂಕೆ ವ್ಯಕ್ತವಾಗಿದೆ. ಒಂದು ವೇಳೆ ಆತನಿಗೆ ಕೋವಿಡ್ -19 ಸೋಂಕು ಖಚಿತವಾದರೆ ದೇಶದಲ್ಲಿ ಸೋಂಕು ಮೂರನೇ ಹಂತಕ್ಕೆ ಕಾಲಿಟ್ಟಿರುವುದು ಬಹುತೇಕ ನಿಶ್ಚಿತ.
*ಒಂದನೇ ಹಂತ – ವಿದೇಶ ಪ್ರವಾಸ ಮಾಡಿದವರಿಗೆ ಬಂದರೆ.
*ಎರಡನೇ ಹಂತ – ವಿದೇಶ ಪ್ರವಾಸ ಮಾಡಿದ ವ್ಯಕ್ತಿಯ ಪ್ರಾಥಮಿಕ ಅಥವಾ ದ್ವಿತೀಯ ಸಂಪರ್ಕಕ್ಕೆ ಬಂದರೆ.
*ಮೂರನೇ ಹಂತ – ಯಾವ ವಿದೇಶಿ ಪ್ರವಾಸಿಗರ ನೇರ, ದ್ವಿತೀಯ ಸಂಪರ್ಕವು ಇಲ್ಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡರೆ. (ಸಮುದಾಯ ಸೋಂಕು.)