Advertisement
ಕರ್ನಾಟಕದ ದಕ್ಷಿಣ ತುದಿಯ ಜಿಲ್ಲೆ ಚಾಮರಾಜನಗರ ಹಾಗೂ ತೆಲಂಗಾಣದ ವಾರಂಗಲ್ ಗ್ರಾಮಾಂತರ ಜಿಲ್ಲೆಗಳು ಮೂರು ತಿಂಗಳ ಅವಧಿಯಲ್ಲಿ ಕೋವಿಡ್ ಪ್ರಕರಣಗಳಿಲ್ಲದೇ ಶೂನ್ಯ ಕೋವಿಡ್ ಪಾಸಿಟಿವ್ ಜಿಲ್ಲೆಗಳೆಂಬ ಹೆಗ್ಗಳಿಕೆ ಪಡೆದಿದ್ದವು. ಈ ಎರಡು ಜಿಲ್ಲೆಗಳು ಫೈನಲ್‌ನಲ್ಲಿದ್ದು ಯಾವ ಜಿಲ್ಲೆಯಲ್ಲಿ ಮೊದಲು ಕೋವಿಡ್ ಪಾಸಿಟಿವ್ ಕಾಣಿಸಿಕೊಳ್ಳಬಹುದೆಂಬ ಕುತೂಹಲವಿತ್ತು.
ಚಾಮರಾಜನಗರ ಜಿಲ್ಲೆಯಲ್ಲಿ ಕೋವಿಡ್ ದೃಢಪಟ್ಟ ಪ್ರಕರಣದ ಸೋಂಕಿತ ವ್ಯಕ್ತಿ ಮುಂಬಯಿ ನಿವಾಸಿಯಾಗಿದ್ದು, ತನ್ನ ಬಂಧುವಿನ ಮನೆಗೆ ಬಂದಿರುವುದರಿಂದ ಆತನ ಪ್ರಕರಣ ಚಾಮರಾಜನಗರ ಜಿಲ್ಲೆ ವಿಭಾಗಕ್ಕೆ ಬರುವುದಿಲ್ಲ. ಆತ ಇತರೆ ವಿಭಾಗಕ್ಕೆ ಸೇರುತ್ತಾನೆ ಎಂದು ಜಿಲ್ಲಾಧಿಕಾರಿ ಡಾ. ರವಿ ತಿಳಿಸಿದ್ದರು. ಅವರ ಹೇಳಿಕೆಗೆ ಪುಷ್ಟಿ ನೀಡುವಂತೆ, ಆರೋಗ್ಯ ಇಲಾಖೆ ಪ್ರತಿದಿನ ಪ್ರಕಟಿಸುವ ಬುಲೆಟಿನ್ ಪಟ್ಟಿಯಲ್ಲಿ ಇತರೆ ವಿಭಾಗದ ವಿವರಣೆ ಸಹ ಹಾಗೇ ಇದೆ. ಹೊರ ರಾಜ್ಯ ಅಥವಾ ದೇಶದಿಂದ ಪ್ರಯಾಣಿಕರಾಗಿ ಬಂದು ಕ್ವಾರಂಟೈನ್ ಆದವರು ಇತರೆ ವಿಭಾಗಕ್ಕೆ ಸೇರುತ್ತಾರೆ ಎಂದು ನಮೂದಿಸಲಾಗಿದೆ.
Related Articles
Advertisement
ವಾರಂಗಲ್ ಗ್ರಾ. ಪ್ರಕರಣ ತದ್ವಿರುದ್ಧ! ತೆಲಂಗಾಣದ ವಾರಂಗಲ್ ಪ್ರಕರಣ ಇದಕ್ಕೆ ತದ್ವಿರುದ್ಧವಾಗಿದೆ! ಪ್ರಕರಣ ದೃಢಪಟ್ಟಿರುವುದು ನೆರೆಯ ಮೆಹಬೂಬಾಬಾದ್ ಜಿಲ್ಲೆಯಲ್ಲಿ! ಮೆಹಬೂಬಾಬಾದ್ ನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ನರ್ಸ್ ಒಬ್ಬರಿಗೆ ಜೂ. 11 (ಗುರುವಾರ) ರಂದು ಸೋಂಕು ದೃಢಪಟ್ಟಿದೆ. ಪರೀಕ್ಷೆ ಸಹ ಮೆಹಬೂಬಾಬಾದ್ ಆಸ್ಪತ್ರೆಯಲ್ಲೇ ನಡೆದಿದೆ. ಆದರೆ ಆಕೆ ವಾರಂಗಲ್ ಗ್ರಾಮಾಂತರ ಜಿಲ್ಲೆಯ ನಿವಾಸಿಯಾಗಿರುವುದರಿಂದ ವಾರಂಗಲ್ ಗ್ರಾ. ಜಿಲ್ಲೆಯ ಪಟ್ಟಿಗೆ ಪ್ರಕರಣವನ್ನು ಸೇರಿಸಲಾಗಿದೆ! ಈ ವಿಷಯವನ್ನು ವಾರಂಗಲ್ ಗ್ರಾ. ಜಿಲ್ಲೆಯ ಆರೋಗ್ಯಾಧಿಕಾರಿ (ಡಿಎಚ್‌ಎಂಓ) ಡಾ. ಮಧುಸೂದನ್ ಉದಯವಾಣಿಗೆ ಖಚಿತಪಡಿಸಿದರು.
ನರ್ಸ್ ಕೆಲಸ ನಿರ್ವಹಿಸುತ್ತಿರುವುದು ಮೆಹಬೂಬಾಬಾದ್ ಜಿಲ್ಲೆಯಲ್ಲಿ, ಆಕೆಯ ಮನೆಯಿರುವುದು ವಾರಂಗಲ್ ಗ್ರಾ. ಜಿಲ್ಲೆಯಲ್ಲಿ ಎಂಬ ಕಾರಣಕ್ಕೆ ಹೀಗೆ ನಮೂದಿಸಿದ್ದಾರೆ ಎಂದು ಅಲ್ಲಿನ ಡಿಎಚ್‌ಎಂಓ ತಿಳಿಸಿದರು.
ವಾರಂಗಲ್ ಗ್ರಾ. ಜಿಲ್ಲೆಯ ನಿದರ್ಶನವನ್ನು ಗಣನೆಗೆ ತೆಗೆದುಕೊಂಡರೆ, ಕೊನೆ ಪಕ್ಷ ಆಕೆ ಮೆಹಬೂಬಾಬಾದ್ ಜಿಲ್ಲೆಯಲ್ಲಿ ಉದ್ಯೋಗಿಯಾಗಿದ್ದರು. ಆ ಕಾರಣದಿಂದಲಾದರೂ ಆಕೆಯ ಪ್ರಕರಣ ಮೆಹಬೂಬಾಬಾದ್‌ಗೆ ಸೇರಬೇಕಿತ್ತು. ಆದರೆ ವಾರಂಗಲ್ ಗ್ರಾ. ನಿವಾಸಿ ಎಂಬ ಕಾರಣಕ್ಕೆ ಒಂದೂ ಪ್ರಕರಣವಿಲ್ಲದ ವಾರಂಗಲ್ ಗ್ರಾ. ಜಿಲ್ಲೆಗೆ ಸೇರಿಸಲಾಗಿದೆ.
ಇದೇ ನಿಯಮವನ್ನು ಅನ್ವಯಿಸಿದರೆ, ಚಾಮರಾಜನಗರ ಜಿಲ್ಲೆಯ ನಿವಾಸಿ ಇರಲಿ, ಕೊನೆ ಪಕ್ಷ ಇಲ್ಲಿಯ ಉದ್ಯೋಗಿಯೂ ಅಲ್ಲದೇ, ಕೇವಲ ಪ್ರಯಾಣಿಕನಾಗಿ ಬಂದ ವ್ಯಕ್ತಿಯ ಪ್ರಕರಣ ಇತರೆ ವಿಭಾಗಕ್ಕೆ ಸೇರಬೇಕಿತ್ತು. ವಾರಂಗಲ್ ನಿಯಮವನ್ನು ಇಲ್ಲಿಗೆ ಅಳವಡಿಸಿದರೆ ಚಾಮರಾಜನಗರ ಜಿಲ್ಲೆಗೆ ಈ ಪ್ರಕರಣ ಸೇರುವುದಿಲ್ಲ! ಚಾಮರಾಜನಗರದ ನಿಯಮವನ್ನು ಅನುಸರಿಸಿದರೆ ವಾರಂಗಲ್ ಗ್ರಾಮಾಂತರ ಜಿಲ್ಲೆಗೆ ಆ ಪ್ರಕರಣ ಬರುವುದಿಲ್ಲ!ನಿಯಮಗಳು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುವವೇ ಎಂಬುದಕ್ಕೆ ಮೇಲಧಿಕಾರಿಗಳೇ ಉತ್ತರ ಹೇಳಬೇಕು. ಸರ್ಕಾರದ ನಿಯಮಾವಳಿಯ ಪ್ರಕಾರ ಅಂತಾರಾಜ್ಯ ಅಥವಾ ಹೊರ ದೇಶಗಳ ಪ್ರಯಾಣಿಕರು ಕ್ವಾರಂಟೈನ್ ಆಗಿ ಪಾಸಿಟಿವ್ ಬಂದಿದ್ದರೆ ಅದು ಇತರೆ ವಿಭಾಗಕ್ಕೆ ಬರುತ್ತದೆ. ಆದರೆ ಚಾಮರಾಜನಗರ ಜಿಲ್ಲೆಗೆ ಪ್ರಯಾಣಿಕನಾಗಿ ಬಂದ ಸೋಂಕಿತ ಮುಂಬಯಿ ನಿವಾಸಿಯಾಗಿದ್ದರೂ ಅದನ್ನು ಚಾಮರಾಜನಗರ ಜಿಲ್ಲೆಯ ಪಟ್ಟಿಗೇ ಸೇರಿಸಲಾಗಿದೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇನೆ.
-ಡಾ. ಎಂ.ಆರ್. ರವಿ, ಜಿಲ್ಲಾಧಿಕಾರಿ. ಕೆ.ಎಸ್. ಬನಶಂಕರ ಆರಾಧ್ಯ