ಮಣಿಪಾಲ: ಆಸ್ಟ್ರಿಯಾ ದೇಶದಲ್ಲಿ ಅಧಿಕೃತವಾಗಿ ಘೋಷಿಸಿದ್ದಕ್ಕಿಂತ ದುಪ್ಪಟ್ಟು ಕೋವಿಡ್ ಪ್ರಕರಣಗಳಿವೆಯೇ? ಹೌದು ಎನ್ನುತ್ತಿವೆ ಈ ಬಗ್ಗೆ ನಡೆಸಿದ ಒಂದು ಸಮೀಕ್ಷಾ ವರದಿ.
ಸೋರಾ ಎಂಬ ಸಂಸ್ಥೆಯು ಎಪ್ರಿಲ್ ಮೊದಲ ವಾರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ 0.32 (ಸರಾಸರಿ 1,000 ಮಂದಿಗೆ ಮೂವರಂತೆ) ಮಂದಿಯಲ್ಲಿ ಸೋಂಕು ಪತ್ತೆ ಯಾಗಿದೆ ಎನ್ನಲಾಗಿದೆ.
ಕೋವಿಡ್ ಬಗ್ಗೆ ಇಂಥದ್ದೊಂದು ಸಮೀಕ್ಷೆ ಯನ್ನು ಇದೇ ಮೊದಲ ಬಾರಿಗೆ ಯೂರೋಪ್ ಯೂನಿಯನ್‌ನಲ್ಲಿ ನಡೆಸಲಾಗಿದೆ ಎಂದು ಸೋರಾ ಹೇಳಿ ಕೊಂಡಿದೆ.
ಆಸ್ಟ್ರಿಯಾದ ಸುಮಾರು 9 ಮಿಲಿಯನ್ ಜನಸಂಖ್ಯೆಯಲ್ಲಿ ಅಂದಾಜು 28,500 ಮಂದಿಗೆ ಕೋವಿಡ್ ಸೋಂಕು ತಗಲಿದೆ. ಆದರೆ ಸರಕಾರವು ಎಪ್ರಿಲ್ ಮೊದಲ ವಾರದಲ್ಲಿ ಅಧಿಕೃತವಾಗಿ ಘೋಷಿಸಿಕೊಂಡ ಸಂಖ್ಯೆಯು ಕೇವಲ 12,200 ಆಗಿತ್ತು ಎಂದು ಸೋರಾ ಹೇಳಿದೆ. ಸಂಸ್ಥೆಯು ಸುಮಾರು 1,554 ಮಂದಿಯನ್ನು ಸಮೀಕ್ಷೆಗೆ ಒಳಪಡಿಸಿದೆ. ಸರಕಾರವು ಅಧಿಕೃತವಾಗಿ ಪರೀಕ್ಷೆ ನಡೆಸಿದವರಿಗಿಂತ ಹೆಚ್ಚಿನ ಮಂದಿ ಈ ಮಾರಕ ಸೋಂಕಿಗೆ ಒಳಗಾಗಿದ್ದಾರೆ ಎಂದಿದೆ ಸಂಸ್ಥೆ.
ಕೋವಿಡ್ ತೀವ್ರತೆ ಕಾಣಿಸಿಕೊಂಡ ಕಾರಣ ಈ ದೇಶವು ಮಾರ್ಚ್ ಮಧ್ಯಭಾಗದಲ್ಲಿ ಕಠಿಣ ಲಾಕ್‌ಡೌನ್ ಕ್ರಮ ಜಾರಿಗೊಳಿಸಿತು. ಜನರು ಮನೆಯಲ್ಲೇ ಇರಬೇಕು ಎಂದು ಆದೇಶಿಸಿದ ಸರಕಾರವು ಆಹಾರ ಮತ್ತು ಔಷಧ ಮಳಿಗೆಗಳನ್ನು ತೆರೆಯಲು ಮಾತ್ರವೇ ಅನುಮತಿ ನೀಡಿತು.
ಶುಕ್ರವಾರ ಸರಕಾರ ಅಧಿಕೃತವಾಗಿ ಬಿಡುಗಡೆ ಮಾಡಿರುವ ಅಂಕಿ-ಅಂಶ ಪ್ರಕಾರ, ಆಸ್ಟ್ರಿಯಾದಲ್ಲಿ 13,400 ಕೋವಿಡ್ ಸೋಂಕಿತರಿದ್ದಾರೆ ಹಾಗೂ 319 ಮಂದಿ ಸಾವಿಗೀಡಾಗಿದ್ದಾರೆ.