ನವದೆಹಲಿ: ಕೋವಿಡ್ 19 ವೈರಸ್ ಕ್ಷಿಪ್ರವಾಗಿ ಹರಡದಂತೆ ತಡೆಯಲು ಭಾರತದಲ್ಲಿ ಮೂರನೇ ಹಂತದ ಲಾಕ್ ಡೌನ್ ಜಾರಿಯಲ್ಲಿದ್ದು ಮೇ 17ಕ್ಕೆ ಅಂತ್ಯಗೊಳ್ಳಲಿದೆ. ಈಗಾಗಲೇ ಹಸಿರು ವಲಯ, ಕಿತ್ತಳೆ ವಲಯದಲ್ಲಿ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ರೆಡ್ ಜೋನ್ ನಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಮುಂದುವರಿದಿದೆ. ಮತ್ತೊಂದೆಡೆ ಕೋವಿಡ್ 19 ವೈರಸ್ ಸಮಸ್ಯೆ ಮುಂದಿನ ಎರಡು ತಿಂಗಳ ಕಾಲ ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಏಮ್ಸ್ ನಿರ್ದೇಶಕ ರಣ್ ದೀಪ್ ಗುಲೇರಿಯಾ ತಿಳಿಸಿದ್ದಾರೆ.
ಇಂಡಿಯಾ ಟುಡೇ ಜತೆ ಮಾತನಾಡಿದ ಗುಲೇರಿಯಾ ಅವರು, ಜೂನ್, ಜುಲೈ ತಿಂಗಳಿನಲ್ಲಿ ಕೋವಿಡ್ 19 ವೈರಸ್ ಪ್ರಕರಣ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಪ್ರಸಕ್ತ ಬೆಳವಣಿಗೆ ಗಮನಿಸಿದರೆ ಜೂನ್ ವೇಳೆ ಇದು ಉಲ್ಬಣವಾಗಲಿದೆ. ಜಾಗತಿಕ ಮಟ್ಟದ ಅಂಕಿಸಂಖ್ಯೆಯನ್ನು ಗಮನಿಸಿದರೆ ಭಾರತದಲ್ಲಿ ಲಾಕ್ ಡೌನ್ ನಿಂದಾಗಿ ಪ್ರಕರಣಗಳ ಸಂಖ್ಯೆ ಇಳಿಮುಖದಲ್ಲಿದೆ ಎಂದು ಹೇಳಿದರು.
ಲಾಕ್ ಡೌನ್ ನಿಂದಾಗಿ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಪ್ರಕರಣ ವರದಿಯಾಗುತ್ತಿದೆ ಎಂದು ಡಾ.ರಣ್ ದೀಪ್ ತಿಳಿಸಿದ್ದಾರೆ. ಕೋವಿಡ್ 19 ವೈರಸ್ ಎಷ್ಟು ಕಾಲದವರೆಗೆ ಮುಂದುವರಿಯಲಿದೆ ಎಂದು ಭವಿಷ್ಯ ನುಡಿಯುವುದು ಕಷ್ಟ. ಆದರೆ ಒಂದು ಬಾರಿ ಈ ಸೋಂಕು ಉಲ್ಬಣವಾದ ನಂತರ ಅದರ ತೀವ್ರತೆ ಕಡಿಮೆಯಾಗಲಿದೆ ಎಂದು ಹೇಳಬಹುದು ಎಂದು ತಿಳಿಸಿದ್ದಾರೆ.
ದೇಶದಲ್ಲಿನ ಹಾಟ್ ಸ್ಪಾಟ್ ಗಳಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಬೇಕು. ನಂತರ ನಮಗೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿರುವುದನ್ನು ಗಮನಿಸಬಹುದಾಗಿದೆ ಎಂದು ಹೇಳಿದರು.