ನವದೆಹಲಿ: ಮಾರಣಾಂತಿಕ ಕೋವಿಡ್ 19 ವೈರಸ್ ವಿರುದ್ಧ ಜಾಗತಿಕವಾಗಿ ಕಠಿಣ ಕ್ರಮಗಳನ್ನು ಅನುಸರಿಸುತ್ತಿರುವ ನಡುವೆಯೇ ಕೋವಿಡ್ 19 ಸೋಂಕಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹಾಗೂ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಏರುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ ಎಂದು ವರದಿ ತಿಳಿಸಿದೆ.
ಅಮೆರಿಕದ ಜಾನ್ಸ್ ಹಾಪ್ ಕಿನ್ಸ್ ಯೂನಿರ್ವಸಿಟಿಯ ಅಂಕಿ ಅಂಶದ ಪ್ರಕಾರ, ಮಾರ್ಚ್ 26ರ ರಾತ್ರಿ 11.45ರವರೆಗೆ ಜಾಗತಿಕವಾಗಿ ಕೋವಿಡ್ 19 ವೈರಸ್ ಗೆ ಸಾವನ್ನಪ್ಪಿದವರ ಸಂಖ್ಯೆ 22,993ಕ್ಕೆ ಏರಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ 5,10,108. ಇದೀಗ ವಿಶ್ವಾದ್ಯಂತ ಕೋವಿಡ್ 19 ಸೋಂಕು ದೃಢಪಟ್ಟವರ ಸಂಖ್ಯೆ 5,31,860ಕ್ಕೆ ಏರಿಕೆಯಾಗಿದೆ. ಸಾವನ್ನಪ್ಪಿದವರ ಸಂಖ್ಯೆ 24,057(ಮಾ.27 ಬೆಳಗ್ಗೆ 8.40ರವರೆಗೆ) ಎಂದು ವಿವರಿಸಿದೆ.
ಕೇವಲ ಎರಡು ದಿನಗಳಲ್ಲಿ ನಾಲ್ಕು ಲಕ್ಷ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 5ಲಕ್ಷಕ್ಕೂ ಮೀರಿ ಹೋಗಿದೆ. ಮಿತಿ ಮೀರುತ್ತಿರುವ ಕೋವಿಡ್ 19 ನಿಂದಾಗಿ ವೈದ್ಯ ಜಗತ್ತು ಬೆಚ್ಚಿಬಿದ್ದಿದೆ. ಚೀನಾದ ವುಹಾನ್ ನಲ್ಲಿ 2019ರ ಡಿಸೆಂಬರ್ 31ರಂದು ಕಾಣಿಸಿಕೊಂಡ ಕೋವಿಡ್ 19 ವೈರಸ್ ಒಂದು ಲಕ್ಷ ಮಂದಿ ಸೋಂಕು ಪೀಡಿತರನ್ನು ಪತ್ತೆಹಚ್ಚಲು 67 ದಿನಗಳು ಬೇಕಾಗಿತ್ತು.
ಆ ನಂತರದ ಒಂದು ಲಕ್ಷ 11 ದಿನಗಳಲ್ಲಿ ಪತ್ತೆಯಾಗಿತ್ತು. ಬಳಿಕ ನಾಲ್ಕು ದಿನಗಳಲ್ಲಿ ಮೂರು ಲಕ್ಷ ಪತ್ತೆಯಾಗಿತ್ತು. ನಂತರದ ಮೂರು ದಿನಗಳಲ್ಲಿ 3ರಿಂದ 4 ಲಕ್ಷಕ್ಕೆ ಏರಿತ್ತು. ತದನಂತರ ಎರಡು ದಿನಗಳಲ್ಲಿ ಒಂದು ಲಕ್ಷ ಮಂದಿ ಸೋಂಕು ಪೀಡಿತರು ಪತ್ತೆಯಾಗಿದ್ದರು ಎಂದು ವರದಿ ವಿವರಿಸಿದೆ.
ಎರಡು ದಿನಗಳಲ್ಲಿ ವಿಶ್ವಾದ್ಯಂತ 4ರಿಂದ 5 ಲಕ್ಷಕ್ಕೆ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ ಏರಿಕೆಯಾಗಿದೆ. ಸುಮಾರು 170 ದೇಶಗಳಲ್ಲಿ ಈವರೆಗೆ ಕೋವಿಡ್ 19 ಪ್ರಕರಣ ಪತ್ತೆಯಾಗಿದೆ ಎಂದು ಸಿಎಸ್ ಎಸ್ ಇ ತಿಳಿಸಿದೆ.
ಚೀನಾ ಹೊರತುಪಡಿಸಿ ಇಟಲಿ, ಅಮೆರಿಕ, ಸ್ಪೇನ್, ಜರ್ಮನಿ, ಇರಾನ್, ಫ್ರಾನ್ಸ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಇಟಲಿಯಲ್ಲಿ ಅತ್ಯಧಿಕ ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 8,215ಕ್ಕೆ ಏರಿಕೆಯಾಗಿದೆ ಎಂದು ಹೇಳಿದೆ.