Advertisement

ವಿಶ್ವಾದ್ಯಂತ ಏರುಗತಿಯಲ್ಲಿ ಸೋಂಕು ಪ್ರಮಾಣ; 6 ಲಕ್ಷ ದಾಟಿದ ಸಾವಿನ ಸಂಖ್ಯೆ

02:55 AM Jul 20, 2020 | Hari Prasad |

ಹೊಸದಿಲ್ಲಿ/ಜೊಹಾನ್ಸ್‌ಬರ್ಗ್‌: ಜಗತ್ತಿನಾದ್ಯಂತ ಸೋಂಕಿನಿಂದ ಅಸುನೀಗಿದವರ ಸಂಖ್ಯೆ 6 ಲಕ್ಷ ದಾಟಿದೆ.

Advertisement

ಅಮೆರಿಕ, ದಕ್ಷಿಣ ಆಫ್ರಿಕಾ, ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸೋಂಕಿನ ಮತ್ತು ಸಾವಿನ ಸಂಖ್ಯೆ ಏರುಗತಿಯಲ್ಲಿದೆ.

ಜಗತ್ತಿನಾದ್ಯಂತ ಸತತ ಎರಡನೇ ದಿನ 2,59, 848 ಕೇಸುಗಳು ದೃಢಪಟ್ಟಿವೆ.

ಅಮೆರಿಕ, ಬ್ರೆಜಿಲ್‌, ಭಾರತ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಶುಕ್ರವಾರ 2,37,743 ಪ್ರಕರಣಗಳು ದಾಖಲಾಗಿದ್ದು ಅದೇ ಈವರೆಗಿನ ಗರಿಷ್ಠ ಎನಿಸಿತ್ತು. ಹಾಲಿ ತಿಂಗಳಲ್ಲಿ ಪ್ರತಿ ದಿನ ಸರಾಸರಿ 4,800 ಸಾವಿನ ಪ್ರಕರಣಗಳು ವರದಿಯಾಗಿವೆ.

ಸಾಮುದಾಯಿಕ ಹಂತಕ್ಕೆ ಸೋಂಕು: ದೇಶದಲ್ಲಿ ಸತತವಾಗಿ ನಾಲ್ಕು ದಿನಗಳ ಅವಧಿಯಲ್ಲಿ ದಿನವಹಿ ಸೋಂಕು ಕೇಸುಗಳ ಸಂಖ್ಯೆ 30 ಸಾವಿರಕ್ಕಿಂತ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ದೇಶದಲ್ಲಿ ಸೋಂಕು ಸಾಮುದಾಯಿಕವಾಗಿ ಹರಡಲು ಶುರುವಾಗಿದೆ ಎಂದು ಇಂಡಿಯನ್‌ ಮೆಡಿಕಲ್‌ ಎಸೋಸಿಯೇಷನ್‌ ಆತಂಕ ವ್ಯಕ್ತಪಡಿಸಿದೆ.

Advertisement

ಒಟ್ಟಾರೆಯಾಗಿ ಹೇಳುವುದಿದ್ದರೆ ದೇಶದಲ್ಲಿ ಸೋಂಕಿನ ಸ್ಥಿತಿ ಉತ್ತಮವಾಗಿಲ್ಲವೆಂದು ಸಂಘಟನೆ ಅಧ್ಯಕ್ಷ ಡಾ|ವಿ.ಕೆ.ಮೋಂಗಾ ‘ANI’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಹರಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಇದೊಂದು ಆತಂಕ ತರುವ ವಿಚಾರ. ಸಾಮುದಾಯಿಕವಾಗಿ ಸೋಂಕು ಹರಡುತ್ತಿದೆ ಎನ್ನುವುದನ್ನು ಇದು ತೋರಿಸುತ್ತದೆ.

ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಸೋಂಕು ಹರಡುತ್ತದೆ ಎಂದಾದರೆ ಅದನ್ನು ನಿಯಂತ್ರಿಸುವುದು ಕಷ್ಟ. ದಿಲ್ಲಿಯಲ್ಲಿ ಆಂಶಿಕವಾಗಿ ಸೋಂಕು ನಿಯಂತ್ರಿಸಲು ಯಶಸ್ವಿಯಾಗಿದ್ದೇವೆ. ಆದರೆ, ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳ ಪರಿಸ್ಥಿತಿ ಏನಾಗಿದೆ ಎಂದು ಪ್ರಶ್ನೆ ಮಾಡಿದರು.

7 ಕಂಪೆನಿಗಳಿಂದ ಸಂಶೋಧನೆ
ಜಗತ್ತಿನಲ್ಲಿ ಸೋಂಕಿನ ವಿರುದ್ಧ ಲಸಿಕೆಗಾಗಿ ಸಂಶೋಧನೆಗಳು ಪ್ರಗತಿಯಲ್ಲಿವೆ. ಭಾರತದ ಮಟ್ಟಿಗೆ ಹೇಳುವುದಾದರೆ ಒಟ್ಟು ಏಳು ಕಂಪೆನಿಗಳು ಈ ಪ್ರಯತ್ನದಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ.

‘ಭಾರತ್‌ ಬಯೋಟೆಕ್‌’, ‘ಸೀರಂ ಇನ್ಸ್ಟಿಟ್ಯೂಟ್‌’, ‘ಝೈಡಸ್‌ ಕಾಡಿಲಾ’, ‘ಪನಾಸಿಯಾ ಬಯೋಟೆಕ್‌’, ‘ಇಂಡಿಯನ್‌ ಇಮ್ಯುನೊಲಾಜಿಕಲ್ಸ್‌’, ‘ಮೈನ್ವಾಕ್ಸ್‌’ ಮತ್ತು ‘ಬಯೋಲಾಜಿಕಲ್‌-ಇ’ ಎಂಬ ಕಂಪೆನಿಗಳು ದೇಶದ ವಿವಿಧ ಭಾಗಗಳಲ್ಲಿ ಸಂಶೋಧನೆ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next